ಮಧ್ಯಪ್ರಾಚ್ಯದಲ್ಲಿ ಮತ್ತೊಂದು ತಲ್ಲಣ: ಇರಾನ್‌ನ ಪ್ರತಿಭಟನೆಯಲ್ಲಿ 500 ಸಾವು, ಅಮೆರಿಕಾ - ಇಸ್ರೇಲ್ ಅಲರ್ಟ್
ಇಸ್ರೇಲ್ - ಇರಾನ್ ಹಾಗೂ ಅಮೆರಿಕಾದ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಏರ್ಪಡುವ ಎಲ್ಲಾ ಲಕ್ಷಣಗಳು ಸಹ ಕಾಣಿಸುತ್ತಿವೆ. ಇರಾನ್‌ನಲ್ಲಿ ಆಂತರಿಕ ಗಲಭೆಗಳು ಹೆಚ್ಚಾಗಿವೆ. ಇಸ್ರೇಲ್ ಹಾಗೂ ಇರಾನ್‌ನ ನಡುವೆ ಸುದೀರ್ಘ ಅವಧಿಗೆ ನಡೆದಿದ್ದ ಸಂಘರ್ಷ ಹಾಗೂ ಯುದ್ಧಗಳಿಂದ ಇಲ್ಲಿನ ಜನರು ಈಗಾಗಲೇ ಹೈರಾಣಾಗಿದ್ದಾರೆ. ಈ ರೀತಿ ಇರುವಾಗಲೇ ಆತಂರಿಕ ಗಲಭೆಗಳು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಈ ಸಂದರ್ಭದಲ್ಲಿ ನಮ್ಮ ಮೇಲೆ ದಾಳಿ ಮಾಡಿದರೆ ಅದರ ಪರಿಣಾಮವೂ ತೀವ್ರವಾಗಿ ಇರಲಿದೆ ಎಂದು ಇರಾನ್ ದೇಶವು ಇಸ್ರೇಲ್ ಹಾಗೂ ಅಮೆರಿಕಾಗೆ ಎಚ್ಚರಿಕೆ ನೀಡಿದೆ.
ಸರ್ಕಾರದ ನೀತಿಯನ್ನು ವಿರೋಧಿಸಿ ಇರಾನ್ ಜನ ಬೀದಿಗೆ ಇಳಿದಿದ್ದಾರೆ. ಇದು ಗಲಭೆ ಸ್ವರೂಪವನ್ನು ಪಡೆದುಕೊಂಡಿದ್ದು, ಈ ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ನಡುವೆ ಅಮೆರಿಕಾ ದಾಳಿ ಮಾಡಿದರೆ, ಅಮೆರಿಕದ ಪಡೆಗಳು ಮತ್ತು ಇಸ್ರೇಲ್ ಅನ್ನು ಗುರಿಯಾಗಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಸಿದೆ. ಇರಾನ್‌ನ ಪಾದ್ರಿಗಳ ನಾಯಕತ್ವದ ವಿರುದ್ಧದ ಜನ ತಿರುಗಿ ಬಿದ್ದಿದ್ದು, ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ. ಈ ಪ್ರತಿಭಟನೆಯು ಮೂರನೇ ವಾರಕ್ಕೆ ಕಾಲಿಟ್ಟಿದೆ. ಸಾವು - ನೋವು ಹೆಚ್ಚಾಗಿದ್ದು, ದೇಶಾದ್ಯಂತ 10,600 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರು ದೂರಿದ್ದಾರೆ.

ದಾಳಿ ಮಾಡಿದರೆ ಸುಮ್ಮನಿರುವುದಿಲ್ಲ
ಇರಾನ್ ದೇಶದಲ್ಲಿ ಆತಂರಿಕ ಗಲಭೆಗಳು ನಡೆಯುತ್ತಿರುವಾಗಲೇ ಅಮೆರಿಕಾ ದಾಳಿ ಮಾಡುವ ಸಾಧ್ಯತೆ ಇದೆ. ಒಂದೊಮ್ಮೆ ಅಮೆರಿಕಾ ದಾಳಿ ಮಾಡಿದರೆ ಅಮೆರಿಕದ ಮಿಲಿಟರಿ ಸ್ವತ್ತುಗಳು ಮತ್ತು ಇಸ್ರೇಲ್ ಅನ್ನು ಕಾನೂನುಬದ್ಧ ಗುರಿಗಳು ಎಂದು ನಾವು ಪರಿಗಣಿಸಲಿದ್ದೇವೆ ಎಂದು ಇರಾನ್‌ನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲಿಬಾಫ್ ಹೇಳಿದ್ದಾರೆ., ಸಂಸದೀಯ ಅಧಿವೇಶನದ ನೇರ ಪ್ರಸಾರದಲ್ಲಿ ಶಾಸಕರು ಅಮೆರಿಕಕ್ಕೆ ಸಾವು ಎಂದು ಘೋಷಣೆ ಕೂಗಿದ್ದಾರೆ.
ಇಸ್ರೇಲ್ ದೇಶವನ್ನು ಆಕ್ರಮಿತ ಪ್ರದೇಶ ಎಂದು ಉಲ್ಲೇಖಿಸಿರುವ ಅವರು, ಇರಾನ್ ಮೇಲೆ ದಾಳಿ ನಡೆದರೆ, ಆಕ್ರಮಿತ ಪ್ರದೇಶ ಮತ್ತು ಆ ಪ್ರದೇಶದಲ್ಲಿನ ಎಲ್ಲಾ ಅಮೆರಿಕನ್ ಮಿಲಿಟರಿ ಕೇಂದ್ರಗಳು, ನೆಲೆಗಳು ಮತ್ತು ಹಡಗುಗಳು ನಮ್ಮ ಕಾನೂನುಬದ್ಧ ಗುರಿಗಳನ್ನಾಗಿ ನಾವು ಮಾಡಿಕೊಳ್ಳಲಿದ್ದೇವೆ ಎಂದಿದ್ದಾರೆ.
ಇರಾನ್ ಜನರನ್ನು ಪ್ರಚೋದಿಸಲಾಗುತ್ತಿದೆ
ಇನ್ನು ಇರಾನ್ ದೇಶದ ಜನರನ್ನು ಪ್ರಚೋದಿಸುವ, ಇರಾನ್‌ನಲ್ಲಿ ಗಲಭೆಗಳನ್ನು ಸೃಷ್ಟಿ ಮಾಡುವ ಕೆಲಸವನ್ನು ಅಮೆರಿಕಾ ಹಾಗೂ ಇಸ್ರೇಲ್ ಮಾಡುತ್ತಿವೆ ಎನ್ನುವ ಆರೋಪವನ್ನೂ ಇರಾನ್ ಇದೇ ಸಂದರ್ಭದಲ್ಲಿ ಮಾಡಿದೆ. ಇರಾನ್‌ನ ಶತ್ರುಗಳು ದೇಶದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿ ಮಾಡುತ್ತಿದ್ದಾರೆ. ಸಾರ್ವಜನಿಕರು ಹಿಂಸಾತ್ಮಕ ಕೃತ್ಯಗಳಿಂದ ದೂರವಿರಬೇಕು ಎಂದು ಒತ್ತಾಯಿಸಿದ್ದರು.
ಇರಾನ್ ಸ್ವಾತಂತ್ರ್ಯ ಬಯಸುತ್ತಿದೆ: ಡೊನಾಲ್ಡ್ ಟ್ರಂಪ್
ಇನ್ನು ಇರಾನ್ ಜನ ಸ್ವಾತಂತ್ರ್ಯ ಬಯಸುತ್ತಿದ್ದಾರೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಈ ಪ್ರದೇಶದಲ್ಲಿನ ತನ್ನ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಅಮೆರಿಕ ಹೇಳಿದೆ. ಇಲ್ಲಿನ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇರಾನ್ ಸ್ವಾತಂತ್ರ್ಯವನ್ನು ಬಯಸುತ್ತಿದೆ. ಬಹುಶಃ ಹಿಂದೆಂದೂ ಕಾಣದ ರೀತಿಯಲ್ಲಿ. ಅಮೆರಿಕಾ ಸಹಾಯ ಮಾಡಲು ಸಿದ್ಧವಾಗಿದೆ ಎಂದೂ ಹೇಳಲಾಗಿದೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ವಾಷಿಂಗ್ಟನ್ ಇರಾನ್‌ನ ಧೈರ್ಯಶಾಲಿ ಜನರನ್ನು ಬೆಂಬಲಿಸುತ್ತದೆ ಎಂದಿದ್ದಾರೆ. ಅಲ್ಲದೇ ಇಸ್ರೇಲ್ ಕೂಡ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ.












Click it and Unblock the Notifications