Inspirational Story:8ನೇ ವಯಸ್ಸಿನಲ್ಲೇ ಬಿಸಿನೆಸ್ ಶುರು: ಮರುಬಳಕೆಯ ವಸ್ತುಗಳಿಂದಲೇ ಗ್ಲೋಬಲ್ ಫ್ಯಾಷನ್ ಬ್ರ್ಯಾಂಡ್ ಕಟ್ಟಿದ ಮಾಯಾ
Inspirational Story: ಸಾಧನೆ ಮಾಡಲು ಇಂತಹದ್ದೇ ವಯಸ್ಸು ಅಂತಾ ಆಗಬೇಕೆಂದೇನಿಲ್ಲ.. ಅದು ಕೇವಲ ಒಂದು ಸಂಖ್ಯೆಯಷ್ಟೇ. ಛಲ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಹದಿಹರೆಯದ ಯುವತಿ ಸಾಬೀತುಪಡಿಸಿದ್ದಾರೆ. ಕೇವಲ 8ನೇ ವಯಸ್ಸಿನಲ್ಲಿಯೇ ಮಾಯಾ ಪೆನ್ ಎಂಬುವರು ಮರುಬಳಕೆಯ ವಸ್ತುಗಳಿಂದಲೇ ಲಕ್ಷಾಂತರ ಡಾಲರ್ ಮೌಲ್ಯದ ಫ್ಯಾಷನ್ ಸಾಮ್ರಾಜ್ಯವನ್ನು ಕಟ್ಟಿ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕನಸು ಕಂಡು, ಅದನ್ನು ಸಾಕಾರಗೊಳಿಸುವ ಹಠವಿದ್ದರೆ ಜಗತ್ತನ್ನೇ ಬದಲಾಯಿಸಬಹುದು ಎಂಬುದಕ್ಕೆ ಅಮೆರಿಕದ ಮಾಯಾ ಪೆನ್ ಅತ್ಯುತ್ತಮ ಉದಾಹರಣೆ. ಕೇವಲ 8ನೇ ವಯಸ್ಸಿನಲ್ಲಿಯೇ ಪರಿಸರ ಸ್ನೇಹಿ ಹಾಗೂ ಫ್ಯಾಷನ್ ಉದ್ಯಮಕ್ಕೆ ಕಾಲಿಟ್ಟ ಈಕೆ, ಇಂದು ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಡಾಲರ್ ಮೌಲ್ಯದ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

'ಮಾಯಾಸ್ ಐಡಿಯಾಸ್ ಸಂಸ್ಥೆ' ಬೆಳೆದಿದ್ದು ಹೇಗೆ?
ಮಾಯಾ ಪೆನ್ ಬಾಲ್ಯದಲ್ಲಿದ್ದಾಗಲೇ ನೈಸರ್ಗಿಕ ಪರಿಸರ ಹಾಗೂ ಫ್ಯಾಷನ್ ವಿನ್ಯಾಸದಲ್ಲಿ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಹಳೆಯ, ಮರುಬಳಕೆ ಮಾಡಬಹುದಾದ ಬಟ್ಟೆಯ ಚೂರುಗಳು ಮತ್ತು ಸಸ್ಯಾಧಾರಿತ ಬಣ್ಣಗಳನ್ನು ಬಳಸಿ ತಮ್ಮದೇ ಆದ ಕರಕುಶಲ ಆಭರಣ ಹಾಗೂ ಫ್ಯಾಷನ್ ವಸ್ತುಗಳನ್ನು ತಯಾರಿಸಲು ಆರಂಭಿಸಿದರು. ಈ ಸಣ್ಣ ಪ್ರಯತ್ನವೇ ಮುಂದೆ 'ಮಾಯಾಸ್ ಐಡಿಯಾಸ್' (Maya's Ideas) ಎಂಬ ವಿಶ್ವವಿಖ್ಯಾತ ಸಂಸ್ಥೆಯಾಗಿ ರೂಪುಗೊಂಡಿತು.
ಮಾಯಾ ತಯಾರಿಸಿದ ವಸ್ತುಗಳ ವಿಶೇಷತೆ
ಮಾಯಾ ತಯಾರಿಸಿದ ವಸ್ತುಗಳ ಪ್ರಮುಖ ಆಕರ್ಷಣೆ ಎಂದರೆ ಅವುಗಳು 100% ಸುಸ್ಥಿರ (Sustainable) ಮತ್ತು ಪರಿಸರಕ್ಕೆ ಹಾನಿಯಾಗದ ಉತ್ಪನ್ನಗಳಾಗಿದ್ದವು. ಗ್ರಾಹಕರು ಇವರ ವಿನ್ಯಾಸ ಹಾಗೂ ಪರಿಸರ ಪ್ರೇಮಕ್ಕೆ ಮಾರುಹೋದರು. ಕೇವಲ ಹದಿಹರೆಯದಲ್ಲಿದ್ದಾಗಲೇ ಅವರು ತಮ್ಮ ಸುಸ್ಥಿರ ಫ್ಯಾಷನ್ ಬ್ರ್ಯಾಂಡ್ ಮೂಲಕ ಸಾವಿರಾರು ಡಾಲರ್ ಆದಾಯ ಗಳಿಸಲು ಆರಂಭಿಸಿದರು. ಉದ್ಯಮದ ಸಂಪೂರ್ಣ ಉಸ್ತುವಾರಿ, ವಿನ್ಯಾಸ, ಮಾರುಕಟ್ಟೆ ತಂತ್ರಗಳು ಮತ್ತು ಗ್ರಾಹಕರ ಸಂಪರ್ಕವನ್ನು ತಾವೇ ಯಶಸ್ವಿಯಾಗಿ ನಿರ್ವಹಿಸಿದರು.
ಈ ಯಶೋಗಾಥೆಯ ಅತ್ಯಂತ ಶ್ಲಾಘನೀಯ ಅಂಶವೆಂದರೆ, ಮಾಯಾ ತಮ್ಮ ಉದ್ಯಮದಿಂದ ಬರುವ ಆದಾಯದ ಸುಮಾರು ಶೇಕಡ 10ರಷ್ಟು ಹೆಚ್ಚು ಭಾಗವನ್ನು ವಿವಿಧ ಸಾಮಾಜಿಕ ಕಾರ್ಯಗಳಿಗೆ ದೇಣಿಗೆಯಾಗಿ ನೀಡುತ್ತಾರೆ. ಸಾಗರ ಜೀವಿಗಳ ರಕ್ಷಣೆ, ಅರಣ್ಯೀಕರಣ ಮತ್ತು ಪರಿಸರ ಮಾಲಿನ್ಯ ತಡೆಯಲು ಕೆಲಸ ಮಾಡುವ ಸಂಸ್ಥೆಗಳಿಗೆ ಇವರು ನೆರವು ನೀಡುತ್ತಿದ್ದಾರೆ. ಮಹಿಳಾ ಸಬಲೀಕರಣ ಹಾಗೂ ಯುವಜನರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವಲ್ಲಿ ಇವರ ಕೊಡುಗೆ ತುಂಬಾ ಇದೆ.
ಯುವ ಜನತೆಗೆ ಪ್ರೇರಣೆಯಾದ 'ಮಾಯಾ' ಹಾದಿ
ಮಾಯಾ ಪೆನ್ ಕೇವಲ ಒಬ್ಬ ಯಶಸ್ವಿ ಉದ್ಯಮಿ ಮಾತ್ರವಲ್ಲ, ಅವರು ಪರಿಸರ ಹೋರಾಟಗಾರ್ತಿ. ವಿನ್ಯಾಸಕಿ, ಆನಿಮೇಟರ್ ಹಾಗೂ ಜಾಗತಿಕ ಮಟ್ಟದ ಪ್ರೇರಣಾದಾಯಕ ಭಾಷಣಕಾರ್ತಿ. ಪರಿಸರ ಕಾಳಜಿ ಮತ್ತು ಲಾಭದಾಯಕ ಉದ್ಯಮವನ್ನು ಒಟ್ಟಿಗೆ ಹೇಗೆ ನಡೆಸಬಹುದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ದೊಡ್ಡ ಮಟ್ಟದ ಬಂಡವಾಳ ಇಲ್ಲದಿದ್ದರೂ, ಸಣ್ಣ ವಯಸ್ಸಿನಲ್ಲಿಯೇ ಪರಿಸರ ಕಾಳಜಿ ಹಾಗೂ ಸ್ಪಷ್ಟ ಗುರಿಯೊಂದಿಗೆ ಮುನ್ನಡೆದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎನ್ನುವುದಕ್ಕೆ ಇವರ ಈ ರೋಚಕ ಕಥೆಯೆ ಉತ್ತಮ ಉದಾಹರಣೆಯಾಗಿದೆ ಎಂದರೆ ತಪ್ಪಾಗಲಾರದು.


Click it and Unblock the Notifications
