ಭಾರತದ 40 ಲಕ್ಷ ಅಮೆರಿಕದ ₹1.8 ಕೋಟಿ ವೇತನಕ್ಕೆ ಸಮ: ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆ!
ಭಾರತದಲ್ಲಿ ವರ್ಷಕ್ಕೆ 40 ಲಕ್ಷ ರೂ. ಗಳಿಸುವವರ ಜೀವನ ಅಮೆರಿಕದಲ್ಲಿ ವರ್ಷಕ್ಕೆ 192,000 ಡಾಲರ್ ಅಂದರೆ ಸುಮಾರು 1.8 ಕೋಟಿ ರೂ. ಗಳಿಸುವವರ ಜೀವನಶೈಲಿಗೆ ಸಮ ಎಂದು ಎಕ್ಸ್ ಬಳಕೆದಾರರು ಹೇಳಿಕೊಂಡಿದ್ದಾರೆ. ಇದಾದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಭಾರತ ಮತ್ತು ಅಮೆರಿಕದಲ್ಲಿನ ಸಂಬಳವನ್ನು ಹೋಲಿಸಿ ದೊಡ್ಡ ಮಟ್ಟದ ಚರ್ಚೆ ನಡೀತಾ ಇದೆ.
ಈ ಪೋಸ್ಟ್ ಎರಡೂ ದೇಶಗಳಲ್ಲಿನ ಖರೀದಿ ಶಕ್ತಿ, ವಸತಿ, ಆರೋಗ್ಯ, ತೆರಿಗೆಗಳು ಮತ್ತು ಒಟ್ಟಾರೆ ಜೀವನ ವೆಚ್ಚದ ಕುರಿತಾದ ಚರ್ಚೆಯನ್ನು ಹುಟ್ಟು ಹಾಕಿದೆ.

ಚರ್ಚೆ ಹುಟ್ಟು ಹಾಕಿದ ಪೋಸ್ಟ್
ಎಕ್ಸ್ ಬಳಕೆದಾರ ಸೂರಜ್ ಕುಮಾರ್ ತಲ್ರೆಜಾ ಎನ್ನುವವರು ಭಾರತದಲ್ಲಿ ಪ್ರತಿ ವರ್ಷ 40 ಲಕ್ಷ ಗಳಿಸುತ್ತಿದ್ದರೆ, ನೀವು ಅಮೆರಿಕಾದಲ್ಲಿ ಪ್ರತಿ ವರ್ಷ 1,92,000 ಡಾಲರ್ ಗಳಿಸುವ ವ್ಯಕ್ತಿಯ ಜೀವನಶೈಲಿಯನ್ನು ಅಕ್ಷರಶಃ ನಡೆಸುತ್ತಿದ್ದೀರಿ ಎಂದರ್ಥ ಎಂದು ಬರೆದಿದ್ದಾರೆ. ಜನರು ತೆರಿಗೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಟ್ಯಾಕ್ಸ್ ಕಟ್ಟಿದ ನಂತರ ಕೈಯ್ಯಲ್ಲಿ ಎಷ್ಟು ಹಣ ಉಳಿಯುತ್ತದೆ ಅದರ ಮೇಲೆ ಗಮನಹರಿಸಬೇಕು ಎಂದು ಬರೆದಿದ್ದಾರೆ. ಪಾವತಿಸುತ್ತಿರುವ ತೆರಿಗೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಸಂಬದ್ಧವಾಗಿ ಮಾತನಾಡುವುದನ್ನು ನಿಲ್ಲಿಸುವಂತೆ ಸೂರಜ್ ಹೇಳಿದ್ದಾರೆ.
ಟ್ಯಾಕ್ಸ್ ಬಗ್ಗೆ ಹೆಚ್ಚು ಯೋಚನೆ ಮಾಡಬಾರದು
ಇನ್ನೊಂದು ಪೋಸ್ಟ್‌ನಲ್ಲಿ ಸೂರಜ್, ಜನರು ವಿದೇಶಗಳಿಗೆ ಹೋಗಬಾರದು ಎಂದು ಹೇಳುವುದಿಲ್ಲ. ಆದರೆ ಭಾರತದಲ್ಲಿ ಹೆಚ್ಚಿನ ಆದಾಯ ಗಳಿಸುವವರು ತೆರಿಗೆ ದರಗಳನ್ನು ಹೋಲಿಸುವ ಬದಲು ತೆರಿಗೆ ನಂತರ ಉಳಿಯುವ ಆದಾಯದ ಮೇಲೆ ಗಮನಹರಿಸಬೇಕು ಎನ್ನುವ ವಾದವನ್ನು ಮುಂದಿಟ್ಟಿದ್ದಾರೆ. ನಮ್ಮ ದೇಶದಲ್ಲಿಯೇ ಉತ್ತಮ ಹಣ ಗಳಿಸುತ್ತಿದ್ದರೆ ಟ್ಯಾಕ್ಸ್ ಬಗ್ಗೆ ಯೋಚಿಸುವ ಅಗತ್ಯ ಇಲ್ಲ ಎಂದಿದ್ದಾರೆ.
ಭಾರತದ ಮೂಲಸೌಕರ್ಯವು ಇನ್ನೂ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಹಿಂದುಳಿದಿದೆ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇರುವಂತೆ ಮೂಲಸೌಕರ್ಯ ನಮ್ಮಲ್ಲಿ ಇಲ್ಲ,ಆದರೆ ನಮ್ಮಲ್ಲೂ ಮೂಲ ಸೌಕರ್ಯಗಳಲ್ಲಿ ಸುಧಾರಣೆಯಾಗುತ್ತಿದೆ. ಕೆಲವೊಂದು ಕೊರತೆ ಎಲ್ಲಾ ಕಡೆಗಳಲ್ಲಿ ಇದೆ. ಎಲ್ಲರನ್ನೂ ಎಲ್ಲದರಲ್ಲಿಯೂ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಆದರೆ ಸೂರಜ್ ಕುಮಾರ್ ತಲ್ರೆಜಾ ವಾದವನ್ನು ಮತ್ತೊಬ್ಬ ಎಕ್ಸ್ ಬಳಕೆದಾರರು ಪ್ರಶ್ನಿಸಿದ್ದಾರೆ. ನೀವು ಅಮೆರಿಕದಲ್ಲಿ ವಾಸಿಸದೇ ಇದ್ದರೆ ಇಂಥಹ ಮೂರ್ಖತನದ ಕಾಮೆಂಟ್‌ಗಳನ್ನು ಮಾಡಬಾರದು ಅವರು ಹೇಳಿದ್ದಾರೆ.
ಸೂರಜ್ ವಾದವನ್ನು ಪ್ರಶ್ನಿಸಿದ ಬಳಕೆದಾರೆ
ಅಮೆರಿಕದಲ್ಲಿ ವಾರ್ಷಿಕವಾಗಿ 1,90,000 ಅಮೆರಿಕನ್ ಡಾಲರ್ ಗಳಿಸುವ ವ್ಯಕ್ತಿ ಭಾರತದಲ್ಲಿ 40 ಲಕ್ಷ ರೂ. ಗಳಿಸುವ ವ್ಯಕ್ತಿಯೊಂದಿಗೆ ತಮ್ಮ ಆದಾಯವನ್ನು ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚು ಮೌಲ್ಯಯುತ ಆಸ್ತಿಗಳನ್ನು ಖರೀದಿಸಬಹುದು ಎಂದು ಹೇಳಿದ್ದಾರೆ. ನೀವು ಯುಎಸ್ ನಲ್ಲಿ 1,90,000 ಡಾಲರ್ ಗಳಿಸಿದರೆ, ಇಂದಿಗೂ ಆಸ್ಟಿನ್ ನಂತಹ ನಗರದಲ್ಲಿ ಸುಮಾರು 300ಕೆ ಗೆ 3ಬಿಎಚ್‌ಕೆ ಮನೆಯನ್ನು ಸುಲಭವಾಗಿ ಖರೀದಿಸಬಹುದು. ಸುಮಾರು 50,000 ಯುಎಸ್‌ಡಿ ಗೆ ಬಿಎಂಡಬ್ಲು 3 ಸರಣಿಯ ಬೇಸಿಕ್ ಮಾಡೆಲ್ ಅನ್ನು ಖರೀದಿಸಬಹುದು. ಅದು 1,90,000 ಯ 1/4 ನೇ ಭಾಗಕ್ಕೆ ಸಮನಾಗಿರುತ್ತದೆ ಎಂದು ಹೇಳಿದ್ದಾರೆ.
ಆದರೆ ಭಾರತದಲ್ಲಿ 40 ಲಕ್ಷ ಆದಾಯವಿದ್ದರೆ, ಬಂಡವಾಳವನ್ನು 2 ಪಟ್ಟು ಹೆಚ್ಚಿಸಿ 80 ಲಕ್ಷ ಪಾವತಿಸಿದರೂ ಭಾರತದ ಯಾವುದೇ ಟೈಯರ್-1 ನಗರಗಳಲ್ಲಿ 2ಬಿಎಚ್‌ಕೆ ಕೂಡಾ ಸಿಗುವುದಿಲ್ಲ ಎಂದಿದ್ದಾರೆ. ಭಾರತದಲ್ಲಿ ಬಿಎಂಡಬ್ಲು 3 ಕಾರಿಗೆ 80 ಲಕ್ಷ ಕೊಡಬೇಕಾಗುತ್ತದೆ. ಅಂದರೆ ನಿಮ್ಮ ಆದಾಯದ ಎರಡು ಪಟ್ಟು ಹೆಚ್ಚು ಹಣ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಖರೀದಿ ಶಕ್ತಿಯು ಸಂಬಳವನ್ನು ಮೀರಿದ ಅಂಶಗಳಿಂದ ಬಲಗೊಳ್ಳುತ್ತದೆ ಎನ್ನುವ ವಾದವನ್ನು ಅವರು ಮುಂದಿಟ್ಟಿದ್ದಾರೆ. ಕಡಿಮೆ ಬಡ್ಡಿದರ, ಅಗ್ಗದ ಗುತ್ತಿಗೆ ನಿಯಮ ಮತ್ತು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ಮತ್ತೊಂದು ಕಾರ್ಡ್‌ಗೆ ವರ್ಗಾಯಿಸುವ ಸಾಮರ್ಥ್ಯ, ಹೀಗೆ ಯುಎಸ್‌ನಲ್ಲಿ ಖರೀದಿ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸುವ ಇಂತಹ ಹಲವು ಅಂಶಗಳನ್ನು ನಾನಿನ್ನೂ ಹೇಳಿಲ್ಲ. ಅಂದಹಾಗೆ, ಸಾರ್ವಜನಿಕ ಶಾಲಾ ಶಿಕ್ಷಣವು ತುಂಬಾ ಉತ್ತಮ ಗುಣಮಟ್ಟದ್ದಾಗಿದೆ ಮತ್ತು ಯುಎಸ್‌ನಲ್ಲಿ ಇದು ಬಹುತೇಕ ಉಚಿತವಾಗಿದೆ ಎಂದು ಹೇಳಿದ್ದಾರೆ.
ಅನುಭವಗಳ ಆಧಾರದ ಮೇಲೆ ಪ್ರತಿಕ್ರಿಯೆ
ಇದೀಗ ತಮ್ಮ ತಮ್ಮ ಅನುಭವಗಳ ಆಧಾರದ ಮೇಲೆ ಜನರು ಈ ಎರಡು ಪೋಸ್ಟ್‌ಗಳಿಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡ್ತಾ ಇದ್ದಾರೆ. ಒಬ್ಬ ಬಳಕೆದಾರರು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಗಗನಕ್ಕೇರುತ್ತಿರುವುದನ್ನು ಎತ್ತಿ ತೋರಿಸಿದ್ದಾರೆ.ಬೆಂಗಳೂರಿನಲ್ಲಿ, ಒಂದು ಸಭ್ಯ ಸಮಾಜದಲ್ಲಿ 3ಬಿಎಚ್‌ಕೆ ತೆಗೆದುಕೊಳ್ಳಬೇಕಾದರೆ ಕನಿಷ್ಠ 2 ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮತ್ತೊಬ್ಬರು ಹೈದರಾಬಾದ್‌ನಲ್ಲಿ ಆಸ್ತಿ ಬೆಲೆ ಏರುತ್ತಿರುವುದರ ಬಗ್ಗೆ ಗಮನ ಸೆಳೆದಿದ್ದಾರೆ. "ಕೊಂಪಲ್ಲಿಯಂತಹ ಹೈದರಾಬಾದ್ ಹೊರವಲಯದಲ್ಲಿ, ವಿಲ್ಲಾಗಳು 12 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತಿವೆ. ಸಂಬಳ ಹೆಚ್ಚಾಗುತ್ತಿಲ್ಲ. ಹಣವಿದ್ದರೆ, ಭಾರತಕ್ಕಿಂತ ಅಮೆರಿಕದಲ್ಲಿ ಹಣವನ್ನು ಖರ್ಚು ಮಾಡಬೇಕೆಂದು ನಾನು ಸೂಚಿಸುತ್ತೇನೆ ಎಂದು ಹೇಳಿದ್ದಾರೆ.
ವೈದ್ಯಕೀಯ ವೆಚ್ಚ ನಮ್ಮಲ್ಲೇ ಅಗ್ಗ
ಭಾರತವು ಸ್ಪಷ್ಟ ಆರ್ಥಿಕ ಪ್ರಯೋಜನವನ್ನು ನೀಡುವ ಕ್ಷೇತ್ರಗಳನ್ನು ಹೋಲಿಕೆ ಮಾಡಲಾಗಿಲ್ಲ ಎಂದು ಇನ್ನು ಕೆಲವರು ಹೇಳಿದ್ದಾರೆ. ಭಾರತದಲ್ಲಿ ವೈದ್ಯಕೀಯ ವೆಚ್ಚ ಕಡಿಮೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ.
ಭಾರತದಲ್ಲಿ, ದಂತವೈದ್ಯರು, ವೈದ್ಯರ ಫೀಸ್ ತುಂಬಾ ಕಡಿಮೆ ಇರುತ್ತದೆ. ಅಲ್ಲದೆ ಮನೆ ಕೆಲಸದವರು ಕೂಡಾ ಕಡಿಮೆ ಸಂಬಳಕ್ಕೆ ಸಿಗತ್ತಾರೆ. ಆಹಾರ ಮತ್ತು ದಿನಸಿ ರೇಟ್‌ಗಳು ಕೂಡಾ ಕಡಿಮೆ ಇರುತ್ತದೆ. ಭಾರತದಲ್ಲಿ ವರ್ಷಕ್ಕೆ 40 ಲಕ್ಷ ಆದಾಯವಿದ್ದರೆ ಆರಾಮದಾಯಕ ಮತ್ತು ಐಶಾರಾಮಿ ಜೀವನವನ್ನು ನಡೆಸಬಹುದು ಎಂದು ಹೇಳಿದ್ದಾರೆ.


Click it and Unblock the Notifications
