ಶಾಂಘೈ ಸಹಕಾರ ಒಕ್ಕೂಟದಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ
ಶಾಂಘೈ ಸಹಕಾರ ಒಕ್ಕೂಟದಲ್ಲಿ ಭಾರತಕ್ಕೆ ಪೂರ್ಣ ಪ್ರಮಾಣದ ಸದಸ್ಯತ್ವ ಸಿಕ್ಕಿದೆ. ಈ ಸಾಧನೆಗೆ ಚೀನಾ ಬೆಂಬಲ ನೀಡಿದೆ. ಹಾಗಾಗಿ, ಚೀನಾಕ್ಕೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ.
ಆಸ್ತಾನ, ಜೂನ್ 9: ನಿರೀಕ್ಷೆಯಂತೆ ಭಾರತಕ್ಕೆ, ಶಾಂಘೈ ಸಹಕಾರ ಒಕ್ಕೂಟದ (ಎಸ್ ಸಿಒ) ಪೂರ್ಣ ಪ್ರಮಾಣದ (ಶಾಶ್ವತ) ಸದಸ್ಯತ್ವ ಸಿಕ್ಕಿದೆ. ಕಜಕಿಸ್ತಾನದಲ್ಲಿಶುಕ್ರವಾರದಿಂದ ಆರಂಭವಾಗಿರುವ ಎರಡು ದಿನಗಳ ಎಸ್ ಸಿಒ ಶೃಂಗಸಭೆಯಲ್ಲಿ ಭಾರತದ ದೀರ್ಘಕಾಲದ ನಿರೀಕ್ಷೆಗೆ ಉತ್ತರ ಸಿಕ್ಕಿದೆ.
ಭಾರತದೊಂದಿಗೆ ಹಿತ ಶತ್ರುವಿನಂತೆ ವರ್ತಿಸುವ ಚೀನಾವು ಈ ಸಮ್ಮೇಳನದಲ್ಲಿ ಭಾರತವು ಪೂರ್ಣ ಸದಸ್ಯತ್ವ ಪಡೆಯಲು ಸಹಕಾರ ನೀಡಿದ್ದು ವಿಶೇಷ.
[ಶಾಂಘೈ ಒಕ್ಕೂಟ ಶೃಂಗಸಭೆಯಲ್ಲಿ ಮೋದಿ, ಷರೀಫ್ ಭೇಟಿ]
ಎಸ್ ಸಿಒನಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವ ಸಿಕ್ಕ ನಂತರ, ಏಷ್ಯಾ ಹಾಗೂ ಯೂರೋಪಿಯನ್ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿಸಿದಂತಾಗಿದೆ.
ಈ ಸಮ್ಮೇಳನದಲ್ಲಿ ಭವಿಷ್ಯದ ಇಂಧನ ಎಂಬ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಈ ಸಮ್ಮೇಳನದಲ್ಲಿ ಎಸ್ ಸಿಒ ಸದಸ್ಯ ರಾಷ್ಟ್ರಗಳಾದ ಚೀನಾ, ಕಿರ್ಗಿಸ್ತಾನ, ಕಜಕಿಸ್ತಾನ, ರಷ್ಯಾ, ಉಜ್ಬೇಕಿಸ್ತಾನ ಹಾಗೂ ತಜಕಿಸ್ತಾನ ದೇಶಗಳು ಭಾಗವಹಿಸಿವೆ.
[UK ಸಂಸತ್ ಚುನಾವಣೆ: ಅತಂತ್ರ ಸಂಸತ್ತಿನ ಸೂಚನೆ ನೀಡಿದ ಸಮೀಕ್ಷೆಗಳು]
ಹಾಗಾದರೆ, ಭಾರತಕ್ಕೆ ಸಿಕ್ಕಿರುವ ಎಸ್ ಸಿಒ ಪೂರ್ಣ ಪ್ರಮಾಣದ ಸದಸ್ಯತ್ವದ ಮಹತ್ವವೇನು? ಅದರಿಂದ ಭಾರತಕ್ಕೆ ಆಗುವ ಪ್ರಯೋಜನಗಳೇನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.

ಭಾರತದ ಸಾಧನೆ
2005ರಿಂದ ಎಸ್ ಸಿಒ ಸದಸ್ಯತ್ವಕ್ಕಾಗಿ ಭಾರತ ಕಾತರಿಸುತ್ತಿತ್ತು. ಇದಕ್ಕೆ ಎಸ್ ಸಿಒ ಸದಸ್ಯ ರಾಷ್ಟ್ರಗಳ ಬೆಂಬಲದ ಅತ್ಯಗತ್ಯವಿತ್ತು. ಆದರೆ, ಆ ಪೂರ್ಣ ಪ್ರಮಾಣದ ಸದಸ್ಯತ್ವಕ್ಕಾಗಿ ಭಾರತವು ಆ ಸದಸ್ಯ ರಾಷ್ಟ್ರಗಳ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಬೆಳೆಯಬೇಕಿತ್ತು. ಈಗ, ಅದು ಸಾಧ್ಯವಾದಂತಾಗಿದೆ.

ಭಾರತಕ್ಕೆ ದಕ್ಕಿದ ಅಪರೂಪದ ಅವಕಾಶ
1996ರಲ್ಲಿ ಕಜಕಿಸ್ತಾನ, ಕಿರ್ಗಿಸ್ತಾನ, ರಷ್ಯಾ, ಚೀನಾ ಹಾಗೂ ಉಜ್ಬೇಕಿಸ್ತಾನಗಳು ಈ ಒಕ್ಕೂಟದ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿದ್ದವು. ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಈ ಒಕ್ಕೂಟದಲ್ಲಿ ಪರಿವೀಕ್ಷಕ ಸದಸ್ಯ ರಾಷ್ಟ್ರಗಳಾಗಿದ್ದವು. ಈಗ ಈ ಎರಡೂ ರಾಷ್ಟ್ರಗಳಿಗೆ ಪೂರ್ಣ ಪ್ರಮಾಣದ ಸದಸ್ಯತ್ವ ಸಿಕ್ಕಿದೆ.

ಹೆಚ್ಚಲಿದೆ ವರ್ಚಸ್ಸು
ಎಸ್ ಸಿಒನಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವ ಸಿಕ್ಕ ನಂತರ, ಭಾರತಕ್ಕಾಗುವ ಪ್ರಯೋಜನಗಳು ಹಲವು. ಮೊದಲನೆಯದಾಗಿ, ಈ ಸಂಘಟನೆ ಯುರೇಷಿಯನ್ (ಯೂರೋಪ್ ಹಾಗೂ ಏಷ್ಯಾ ರಾಷ್ಟ್ರಗಳು ಇರುವ) ಸಂಘಟನೆಯಾಗಿರುವುದರಿಂದ ಎರಡೂ ಖಂಡಗಳಲ್ಲಿ ಭಾರತದ ವರ್ಚಸ್ಸು ಅಗಾಧವಾಗಿ ಹೆಚ್ಚುತ್ತದೆ. ಸದಸ್ಯ ರಾಷ್ಟ್ರಗಳ ಸಹಕಾರ, ಭಯೋತ್ಪಾದನೆಯ ನಿಗ್ರಹ, ಗಡಿ ಪ್ರದೇಶಗಳಲ್ಲಿ ಸ್ಥಿರತೆ ಕಾಪಾಡುವುದು ಮುಂತಾದ ವಿಚಾರಗಳಲ್ಲಿ ಭಾರತದ ಮಾತಿಗೆ ಸಂಘಟನೆಯಲ್ಲಿ ಮೊದಲಿಗಿಂತಲೂ ಹೆಚ್ಚಿನ ಮಹತ್ವ ಸಿಗುತ್ತದೆ.

ಅದೇ ಭಾರತಕ್ಕೆ ತೊಂದರೆ?
ಭಾರತಕ್ಕೆ ಪೂರ್ಣ ಪ್ರಮಾಣದ ಸದಸ್ಯತ್ವ ಸಿಕ್ಕಿದೆ. ಆದರೆ, ಹಾಗೆಂದ ಮಾತ್ರಕ್ಕೆ ಭಾರತ ಖುಷಿಪಡುವ ಹಾಗಿಲ್ಲ. ಏಕೆಂದರೆ, ಪಾಕಿಸ್ತಾನಕ್ಕೂ ಪೂರ್ಣ ಪ್ರಮಾಣದ ಸದಸ್ಯತ್ವ ಸಿಕ್ಕಿರುವುದರಿಂದ ಮುಂದಿನ ಸಮ್ಮೇಳನಗಳಲ್ಲಿ ಭಾರತವು ಮಂಡಿಸುವ ಕಾಶ್ಮೀರ ಸಮಸ್ಯೆ, ಭಯೋತ್ಪಾದನೆ ಸಮಸ್ಯೆ, ಪಾಕಿಸ್ತಾನದ ಕಡೆಯಿಂದ ಗಡಿಯಲ್ಲಿ ಆಗುತ್ತಿರುವ ತಾಪತ್ರಯಗಳ ಬಗ್ಗೆ ಚರ್ಚಿಸಲು ಮುಂದಾದಾಗ ಅದಕ್ಕೆ ಪಾಕಿಸ್ತಾನ ತಗಾದೆ ತಗೆಯುವ ಅಧಿಕಾರ ಅದಕ್ಕೆ ಹೆಚ್ಚಾಗಿ ಸಿಗಲಿದೆ.

ಧನ್ಯವಾದ ಅರ್ಪಿಸಿದ ಮೋದಿ
ಪೂರ್ಣ ಪ್ರಮಾಣದ ಸದಸ್ಯತ್ವ ಸಿಗಲು ಭಾರತಕ್ಕೆ ಸಿಗಲು ಸಹಾಯ ಮಾಡಿದ ಚೀನಾಕ್ಕೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದ್ದಾರೆ. ಚೀನಾದ ಸಹಕಾರದಿಂದಾಗಿ ಭಾರತಕ್ಕೆ ಒಂದು ರೀತಿಯ ಸಾರ್ಥಕತೆ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications