ಚೀನಾ ಬಳಿಕ ಇದೀಗ ಜಪಾನ್‌ನಲ್ಲಿ ಭಾರಿ ಮಳೆ, ಭೂಕುಸಿತ
ಟೋಕಿಯೋ, ಆಗಸ್ಟ್ 14: ಚೀನಾ ಬಳಿಕ ಇದೀಗ ಜಪಾನ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಭೂ ಕುಸಿತ ಉಂಟಾಗಿದೆ.
ನೈಋತ್ಯ ಜಪಾನ್‌ನಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ನೂರಾರು ಮನೆಗಳು ಕೊಚ್ಚಿ ಹೋಗಿವೆ, ಓರ್ವ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.
ದಕ್ಷಿಣ ಜಪಾನ್‌ನಲ್ಲಿ ಈ ವಾರ ಭಾರಿ ಮಳೆಯಾಗಿದೆ. ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, ದ್ವೀಪ ಸಮೂಹದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಹಿರೋಶಿಮಾ ಸೇರಿದಂತೆ, ಕ್ಯೂಶು ವಲಯ ಹಾಗೂ ಜಪಾನ್‌ನ ಇತರೆ ಭಾಗಗಳಲ್ಲಿ ಮಳೆಯಾಗುವ ಹಾಗೂ ಭೂ ಕುಸಿತ ಸಂಭವಿಸುವ ಸಾಧ್ಯತೆ ಇದೆ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಧ್ಯ ಜಪಾನ್‌ನ ಹಿಂದಿನ ರಾಜಧಾನಿ ಕ್ಯುಟೊ ಮತ್ತು ನಾಗಾವೊದಲ್ಲಿ ಭಾರಿ ಮಳೆಯಾಗುತ್ತಿದ್ದು, ಈಗ ಮಾರುತಗಳು ನಿಧಾನವಾಗಿ ಪೂರ್ವಕ್ಕೆ ಚಲಿಸುತ್ತಿವೆ. ಟೋಕಿಯೋ ನಗರದ ದಕ್ಷಿಣ ಭಾಗದಲ್ಲಿರುವ ಕುರುಮೆಯಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ನದಿ ಪಾತ್ರದಲ್ಲಿದ್ದ ಜನರನ್ನು ಬೋಟ್‌ಗಳ ಮೂಲಕ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಕೆಸರು ನೀರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗುತ್ತಿದೆ.
ಜುಲೈನಲ್ಲಿಯೂ ಭಾರಿ ಮಳೆಯಾಗಿತ್ತು: ಜಪಾನ್‌ನ ಶಿಜೌಕಾ ಪ್ರಾಂತ್ಯದಲ್ಲಿರುವ ಅಟಾಮಿ ಪಟ್ಟಣ ಬಿಸಿನೀರಿನ ಬುಗ್ಗೆಗಳಿಗೆ ಹೆಸರುವಾಸಿ. ಅಟಾಮಿ ಎಂದರೆ ಅರ್ಥವೇ ಬಿಸಿ ಸಾಗರ ಎಂದು. ಈ ಪಟ್ಟಣ ಇಜು ಪೆನಿನ್ಸುಲಾದ ಉತ್ತರದ ತುದಿಯಲ್ಲಿರುವ ಸಗಾಮಿ ಕೊಲ್ಲಿಯಲ್ಲಿ ಭಾಗಶಃ ಮುಳುಗಿರುವ ಜ್ವಾಲಾಮುಖಿ ಕುಂಡದ ಕಡಿದಾದ ಇಳಿಜಾರಿನಲ್ಲಿದೆ.
ಸ್ಥಳೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳುವ ಪ್ರಕಾರ ಇಂದು ಮುಂಜಾನೆ ಹೊತ್ತಿಗೆ ಅಟಾಮಿಯಲ್ಲಿ ಮಣ್ಣು ಕುಸಿದಿದೆ. ಇದರಿಂದ ಧ್ವಂಸಗೊಂಡ ಮನೆಗಳ ಭಗ್ನಾವಶೇಷಗಳು, ಮಣ್ಣನ್ನು ಒಳಗೊಂಡ ಕಪ್ಪು ಬಣ್ಣದ ನೀರಿನ ಪ್ರವಾಹ ರಸ್ತೆಯ ಮೇಲೆಲ್ಲ ಭಯಂಕರವಾಗಿ ಹರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಸಹಾಯಕತೆಯಿಂದ ಈ ಭೀಕರ ದೃಶ್ಯವನ್ನು ನೋಡಿದ್ದು ಬಿಟ್ಟರೆ ಇನ್ನೇನೂ ಮಾಡಲು ಸಾಧ್ಯವಾಗಲಿಲ್ಲ. ತುಂಬ ಹೆದರಿಕೆಯಾಯಿತು ಎಂದು ಸ್ಥಳೀಯರು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿತ್ತು.
ಚೀನಾದಲ್ಲೂ ಪ್ರವಾಹ: ಕಳೆದ ಒಂದು ಸಾವಿರ ವರ್ಷಗಳಲ್ಲಿಯೇ ಕಂಡುಕೇರಳರಿಯದ ಮಳೆಯ ಅಬ್ಬರಕ್ಕೆ ಚೀನಾದ ಸೆಂಟ್ರಲ್ ಹೆನಾನ್ ಪ್ರಾಂತ್ಯ ತತ್ತರಿಸಿದ್ದು, ಪ್ರವಾಹಕ್ಕೆ ಸಿಲುಕಿ ಈವರೆಗೆ 25 ಮಂದಿ ಸಾವಿಗೀಡಾಗಿದ್ದಾರೆ. ಭಾರೀ ಮಳೆಯಿಂದಾಗಿ 12.4 ಲಕ್ಷ ಜನ ನಿರ್ವಸಿತರಾಗಿದ್ದು, 1.60 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.
ಚೀನಾದಲ್ಲಿ ಈ ರೀತಿಯ ಮಳೆಯಾಗಿದ್ದು ಕಳೆದ 1000 ವರ್ಷಗಳ ಇತಿಹಾಸದಲ್ಲೇ ಮೊದಲು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಝೆಂಗ್ ಝೋಹು ಪ್ರಾಂತ್ಯದಲ್ಲಿ ಮಂಗಳವಾರ ಒಂದೇ ದಿನ ಬರೋಬ್ಬರಿ 457.5 ಮಿ.ಮೀನಷ್ಟುಮಳೆಯಾಗಿದೆ. ಇದು ದೇಶದಲ್ಲಿ ಹವಾಮಾನ ದಾಖಲೆ ಆರಂಭಿಸಿದ ನಂತರದಲ್ಲಿ ಸುರಿದ ಅತ್ಯಂತ ಗರಿಷ್ಠ ಪ್ರಮಾಣ ಎಂದು ವರದಿಯಾಗಿದೆ.
ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇಲ್ಲಿನ ಅಣೆಕಟ್ಟೆಒಡೆಯುವ ಭೀತಿ ಸಹ ಆರಂಭವಾಗಿದೆ. ಹೀಗಾಗಿ ಹೋಟೆಲ್, ಸಬ್‌ವೇ ರೈಲು, ಸಾರ್ವಜನಿಕ ಪ್ರದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಚೀನಾ ಸೇನೆ ಧಾವಿಸಿದೆ.
ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಇಡೀ ಪ್ರಾಂತ್ಯ ನೀರಿನಿಂದ ಆವೃತವಾಗಿದೆ. ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ.
ಜನಸಂಚಾರ ಪ್ರದೇಶ ಮತ್ತು ರೈಲಿನೊಳಗೆ ಪ್ರಯಾಣಿಕರ ಎದೆಮಟ್ಟದವರೆಗೂ ನೀರು ತುಂಬಿಕೊಂಡಿದ್ದು, ಜನರು ಪ್ರಾಣ ಉಳಿವಿಗಾಗಿ ಪರದಾಡುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮುಂಜಾಗ್ರತಾ ದೃಷ್ಟಿಯಿಂದ ಹೆನಾನ್ ಪ್ರಾಂತ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ, ವಿಮಾನಗಳು, ರೈಲುಗಳ ಸೇವೆಯನ್ನು ರದ್ದು ಮಾಡಗಿತ್ತು.












Click it and Unblock the Notifications