ಮೆಕ್ಸಿಕೋ ಪಟಾಕಿ ಮಾರುಕಟ್ಟೆ ದುರಂತ, ಕನಿಷ್ಠ 26 ಮಂದಿ ಸಾವು
ಮೆಕ್ಸಿಕೋ ಪಟಾಕಿ ಮಾರುಕಟ್ಟೆಯಲ್ಲಿ ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ನಿಮಿತ್ತ ಮಾರಾಟ ಜೋರಾಗಿತ್ತು. ಗ್ರಾಹಕರು ಹೆಚ್ಚಾಗಿದ್ದ ಸಮಯದಲ್ಲೇ ಪಟಾಕಿಗೆ ಬೆಂಕಿ ಹೊತ್ತುಕೊಂಡು ಭಾರೀ ಅನಾಹುತ ಸಂಭವಿಸಿದೆ
ಮೆಕ್ಸಿಕೋ, ಡಿಸೆಂಬರ್ 21: ಮೆಕ್ಸಿಕೋದ ಅತಿ ದೊಡ್ಡ ಪಟಾಕಿ ಮಾರುಕಟ್ಟೆಯಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 26 ಮಂದಿ ಸಾವನ್ನಪ್ಪಿ, 76 ಮಂದಿ ಗಾಯಗೊಂಡಿದ್ದಾರೆ. ಬೆಂಕಿ ವೇಗವಾಗಿ ಹಬ್ಬಿಕೊಂಡು, ನಾನಾ ಬಣ್ಣಗಳಿಂದ ಕೂಡಿದ ಸ್ಫೋಟಗಳಾದವು. ನಗರದ ತುಂಬ ದಟ್ಟ ಹೊಗೆ ಅವರಿಸಿತು.
ವರ್ಷದ ಕೊನೆಯ ಸಂಭ್ರಮಾಚರಣೆಗಾಗಿ ಗ್ರಾಹಕರು ಪಟಾಕಿ ಖರೀದಿಯಲ್ಲಿ ತೊಡಗಿದ್ದರು. ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ಪಟಾಕಿ ಸಿಡಿಸುವುದು ವಾಡಿಕೆ. "ನಾವು ಈ ವರೆಗೆ ಇಪ್ಪತ್ತಾರು ಮೃತ ದೇಹಗಳನ್ನು ಹುಡುಕಿದ್ದೇವೆ" ಎಂದು ಅಲ್ಲಿನ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮೂರು ಗಂಟೆಗಳ ಕಾಲ ಪಟಾಕಿಯ ಆರ್ಭಟ ಮಾರುಕಟ್ಟೆಯಲ್ಲಿ ಅವರಿಸಿತ್ತು. ಎಲ್ಲ ಪಟಾಕಿಗಳು ಸಿಡಿಯುವವರೆಗೆ ಕಾಯಬೇಕಾಯಿತು. ನಿರೀಕ್ಷೆಗೂ ಮೀರಿ ನಷ್ಟವುಂಟಾಗಿದೆ ಎಂದು ನಾಗರಿಕ ರಕ್ಷಣಾ ಸೇವೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾರುಕಟ್ಟೆ ಸಂಪೂರ್ಣವಾಗಿ ನಾಶವಾಗಿದೆ ಎಂದು ತಿಳಿಸಿದ್ದಾರೆ.[ಕೇರಳದಲ್ಲಿ ಪಟಾಕಿ ಸಿಡಿದು ಭಾರೀ ಅಗ್ನಿ ದುರಂತ, 105 ಸಾವು]

ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಮಾರುಕಟ್ಟೆ ಸಮೀಪದ ಮನೆಗಳು ಹಾಗೂ ವಾಹನಗಳಿಗೆ ಕೂಡ ಹಾನಿಯಾಗಿದೆ. ಸ್ಥಳದಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು, ಗಾಯಾಳುಗಳನ್ನು ಆಂಬುಲೆನ್ಸ್ ಹಾಗೂ ಹೆಲಿಕಾಪ್ಟರ್ ಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.[ಆಂಧ್ರದಲ್ಲಿ ಭಾರಿ ಪಟಾಕಿ ದುರಂತ, 15 ಸಾವು]
ನನ್ನ ಪಕ್ಕದ ಮನೆಯವರಿಗೆ ಕಂಪನದ ಅನುಭವವಾಗಿದೆ. ಆದರೆ ನನಗೆ ಅಂಥ ಅನುಭವ ಏನೂ ಆಗಲಿಲ್ಲ. ಏಕೆಂದರೆ ಶಬ್ದ ಕೇಳಿದ ಕೂಡಲೇ ನಾನು ಅಲ್ಲಿಂದ ಓಡಿಹೋದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಇನ್ನು ಮೆಕ್ಸಿಕೋದ ರಾಷ್ಟ್ರಪತಿ ಎನ್ರಿಕ್ ಪೆನಾ ನೀಟೋ ಟ್ವಿಟ್ಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications