149 ಪ್ರಯಾಣಿಕರಿದ್ದ ಇಥಿಯೋಪಿಯನ್ ಏರ್ ಲೈನ್ಸ್ ನ ವಿಮಾನ ಪತನ
ನೈರೋಬಿ, ಮಾರ್ಚ್ 10: ಇಥಿಯೋಪಿಯನ್ ಏರ್ ಲೈನ್ಸ್ ನ ವಿಮಾನವೊಂದು ನೈರೋಬಿಗೆ ತೆರಳುತ್ತಿದ್ದದ್ದು, ಭಾನುವಾರ ಪತನವಾಗಿದೆ. ಆ ವಿಮಾನದಲ್ಲಿ 149 ಪ್ರಯಾಣಿಕರಿದ್ದರು ಮತ್ತು ಎಂಟು ಮಂದಿ ವಿಮಾನ ಸಿಬ್ಬಂದಿ ಇದ್ದರು ಎಂದು ಏರ್ ಲೈನ್ಸ್ ನ ವಕ್ತಾರರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ರಾಜಧಾನಿ ಅದ್ದಿಸ್ ಅಬಾಬಗೆ ಆಗ್ನೇಯಕ್ಕೆ ಅರವತ್ತೆರಡು ಕಿ.ಮೀ. ದೂರದ ಬಿಶೋಫ್ತು ಬಳಿ ವಿಮಾನ ET 30 ಪತನಗೊಂಡಿದೆ. ಇದು ಬೋಯಿಂಗ್ 737- 800 MAX ವಿಮಾನ ಇದಾಗಿತ್ತು. "ಹೌದು, ಬೆಳಗ್ಗೆ ಎಂಟೂ ನಲವತ್ತರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ" ಎಂದು ಹೆಸರು ಹೇಳಲು ಇಚ್ಛಿಸದ ವಕ್ತಾರರೊಬ್ಬರು ತಿಳಿಸಿದ್ದಾರೆ.

ಈ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಇಥಿಯೋಪಿಯನ್ ಪ್ರಧಾನಿ ಕಚೇರಿಯು ಮೃತರ ಕುಟುಂಬಗಳಿಗೆ ಟ್ವಿಟ್ಟರ್ ಮೂಲಕ ಸಂತಾಸ ಸೂಚಿಸಿದೆ. "ಇಥಿಯೋಪಿಯಾ ಸರಕಾರ ಹಾಗೂ ಜನರ ಪರವಾಗಿ ಪ್ರಧಾನಿ ಕಾರ್ಯಾಲಯದಿಂದ ತೀವ್ರ ಸಂತಾಪ ಸೂಚಿಸಲಾಗುತ್ತಿದೆ. ಕೀನ್ಯಾದ ನೈರೋಬಿಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನವಾಗಿದ್ದು, ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ" ಎಂದು ಟ್ವಿಟ್ಟರ್ ನಲ್ಲಿ ಹೇಳಲಾಗಿದೆ.












Click it and Unblock the Notifications