Donald Trump: ಟ್ರಂಪ್ ಪ್ರಮಾಣವಚನಕ್ಕೆ ಪ್ರಧಾನಿ ಮೋದಿಗೂ ಆಹ್ವಾನ, ಯಾರೆಲ್ಲ ಬರಲಿದ್ದಾರೆ?
ಅಮೇರಿಕಾದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಜನವರಿ 20ರಂದು (ಸೋಮವಾರ) ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಟ್ರಂಪ್ ಈ ಬಾರಿ ಅಮೇರಿಕಾದ 47ನೇ ಅಧ್ಯಕ್ಷರಾಗಿ ಅಧಿಕಾರಕ್ಕೆ ಬರಲಿದ್ದಾರೆ. ನಾಳೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಇಡೀ ವಿಶ್ವವೇ ಈ ಕಾರ್ಯಕ್ರಮದತ್ತ ಚಿತ್ತಹರಿಸಿದೆ.
ಟ್ರಂಪ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾದ ಜೆ.ಡಿ.ವ್ಯಾನ್ಸ್ ಇಬ್ಬರೂ ಸಂಗೀತ ಕಾರ್ಯಕ್ರಮಗಳು ಹಾಗೂ ಭವ್ಯ ಮೆರವಣಿಗೆಯನ್ನು ಒಳಗೊಂಡಿರುವ ಆಚರಣೆಗಳ ಮೂಲಕ ಪ್ರಮಾಣವಚನ ಸ್ವೀಕರಿಸಲು ಹಾಗೂ ಅಮೇರಿಕಾದಲ್ಲಿ ಹೊಸ ಸರ್ಕಾರದೊಂದಿಗೆ ಆಡಳಿತ ನಡೆಸಲು ಸಜ್ಜಾಗಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಜಾಗತಿಕ ನಾಯಕರು ಕೂಡ ಭಾಗಿಯಾಗಿದ್ದಾರೆ.

ಅಮೇರಿಕಾ ಅಧ್ಯಕ್ಷರ ಪ್ರಮಾಣವಚನ ಕಾರ್ಯಕ್ರಮಕ್ಕೆ ಟ್ರಂಪ್ ಅವರ ನಿಕಟ ಮಿತ್ರರು ಮತ್ತು ಅವರ ಕೆಲವು ಪ್ರತಿಸ್ಪರ್ಧಿಗಳು ಸೇರಿದಂತೆ ವಿದೇಶಿ ನಾಯಕರು ಕೂಡ ಭಾಗಿಯಾಗಲಿದ್ದಾರೆ. ಮೂಲಗಳ ಪ್ರಕಾರ ಏಳು ಪ್ರಮುಖ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಇಬ್ಬರು ಮಾಜಿ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಒಟ್ಟಾರೆಯಾಗಿ ಅಂದಾಜು 5,00,000 ಅತಿಥಿಗಳು ಟ್ರಂಪ್ ಅವರ ಕಾರ್ಯಕ್ರಮದಲ್ಲಿ ಇರಲಿದ್ದಾರೆ ಎಂದು ವರದಿಯಾಗಿದೆ.
ಟ್ರಂಪ್ ಅವರು ಅಮೇರಿಕಾ ಸಂಪ್ರದಾಯವನ್ನು ಬ್ರೇಕ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಮೇರಿಕಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧಿಕಾರಿಗಳು, ಹಿಂದಿನ ಮುಖ್ಯಸ್ಥರು ಮತ್ತು ಅಮೇರಿಕಾ ಕ್ಯಾಪಿಟಲ್ ಕಟ್ಟಡದ ಮೆಟ್ಟಿಲುಗಳ ಮೇಲೆ ಇರುವ ಇತರ ಅಮೇರಿಕನ್ ವಿಐಪಿಗಳೊಂದಿಗೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಈ ಬಾರಿ ಸುತ್ತಮುತ್ತಲಿನ ಮೈದಾನದಿಂದ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕೂಡ ಕಲ್ಪಿಸಲಾಗಿದೆ.
ಉದ್ಘಾಟನಾ ಭಾಷಣ, ಮೆರವಣಿಗೆ, ಸಂಗೀತ ಪ್ರದರ್ಶನಗಳೊಂದಿಗೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಸಾಮಾನ್ಯವಾಗಿ ಅಮೇರಿಕಾ ಅಧ್ಯಕ್ಷರ ಪ್ರಮಾಣವಚನಕ್ಕೆ ವಿದೇಶಿ ನಾಯಕರು ಹಾಜರಾಗುವುದಿಲ್ಲ. ಈ ಬಾರಿ ವಿಶ್ವ ನಾಯಕರ ದಂಡನ್ನೇ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಸಂಪ್ರದಾಯವಾದಿ ಮತ್ತು ಬಲಪಂಥೀಯರು ಎನ್ನಲಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಹಂಗೇರಿಯ ಪ್ರಧಾನ ಮಂತ್ರಿ ವಿಕ್ಟರ್ ಓರ್ಬನ್, ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ, ಪೋಲಿಷ್‌ನ ಮಾಜಿ ಪ್ರಧಾನಿ ಮಾಟಿಯುಸ್ಜ್ ಮೊರಾವಿಕ್ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದ್ದು, ಇವರಲ್ಲಿ ಕೆಲವರು ಮಾತ್ರವೇ ಕಾರ್ಯಕ್ರಮಕ್ಕೆ ಹೋಗುವುದಾಗಿ ಖಚಿತಪಡಿಸಿದ್ದಾರೆ.
ಯುಕೆ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್, ಯುರೋಪಿಯನ್ ಕಮಿಷನ್ ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆನ್, ಜರ್ಮನಿಯ ಅಧ್ಯಕ್ಷ ಓಲಾಫ್ ಸ್ಕೋಲ್ಜ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಹಲವು ನಾಯಕರಿಗೆ ಆಹ್ವಾನವೇ ನೀಡಿಲ್ಲ ಎಂದು ವರದಿಯಾಗಿದೆ.












Click it and Unblock the Notifications