ಸೈಪ್ರಸ್‌ನಲ್ಲಿ ಡೆಲ್ಟಾ ಮತ್ತು ಓಮಿಕ್ರಾನ್ ಸಂಯೋಜಿತ ಡೆಲ್ಟಾಕ್ರಾನ್ ಹೊಸ ರೂಪಾಂತರಿ ಪತ್ತೆ
ನವದೆಹಲಿ, ಜನವರಿ 10: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರಿ ಹಾಗೂ ಮೂರನೇ ಅಲೆಯನ್ನು ಹುಟ್ಟುಹಾಕುತ್ತಿರುವ ಓಮಿಕ್ರಾನ್ ರೂಪಾಂತರಿಗಳ ಬಗ್ಗೆ ಸಾಮಾನ್ಯವಾಗಿ ತಿಳಿದಿದೆ. ಆದರೆ ಈ ಎರಡೂ ತಳಿಗಳ ಸಂಯೋಜಿತ ಹೊಸ ತಳಿಯೊಂದು ಸೈಪ್ರಸ್‌ನಲ್ಲಿ ಪತ್ತೆಯಾಗಿದೆ.
ಡೆಲ್ಟಾ ಮತ್ತು ಓಮಿಕ್ರಾನ್‌ನ ವೈಶಿಷ್ಟ್ಯಗಳನ್ನು ಸಂಯೋಜಿಸುವ SARS-CoV-2 ನ ಹೊಸ ತಳಿಯು ಸೈಪ್ರಸ್‌ನಲ್ಲಿ ಕಂಡುಬಂದಿದೆ ಎಂದು ಜೈವಿಕ ವಿಜ್ಞಾನಗಳ ಪ್ರಾಧ್ಯಾಪಕ ಲಿಯೊಂಡಿಯೊಸ್ ಕೊಸ್ಟ್ರಿಕಿಸ್ ಹೇಳಿದ್ದಾರೆ.
ಸೈಪ್ರಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಆಣ್ವಿಕ ವೈರಾಲಜಿಯ ಪ್ರಯೋಗಾಲಯದ ಮುಖ್ಯಸ್ಥರಾದ ಲಿಯೊಂಡಿಯೊಸ್ ಕೊಸ್ಟ್ರಿಕಿಸ್, ಹೊಸ ರೂಪಾಂತರ ತಳಿಯ ಬಗ್ಗೆ ಉಲ್ಲೇಖಿಸಿದ್ದಾರೆ. "ಪ್ರಸ್ತುತ ಓಮಿಕ್ರಾನ್ ಮತ್ತು ಡೆಲ್ಟಾ ಸಹ-ಸೋಂಕುಗಳಿವೆ, ಈ ಎರಡರ ಸಂಯೋಜನೆಯನ್ನು ನಾವೀಗ ಕಂಡುಕೊಂಡಿದ್ದೇವೆ. ಡೆಲ್ಟಾ ಜೀನೋಮ್‌ನೊಳಗೆ ಓಮಿಕ್ರಾನ್ ತರಹದ ಆನುವಂಶಿಕ ಲಕ್ಷಣಗಳನ್ನು ಗುರುತಿಸಿರುವುದರಿಂದ ಈ ಹೊಸ ಆವಿಷ್ಕಾರವನ್ನು ಡೆಲ್ಟಾಕ್ರಾನ್ ಎಂದು ಹೆಸರಿಸಲಾಯಿತು," ಎಂದಿದ್ದಾರೆ.

ಸೈಪ್ರಸ್‌ನಲ್ಲಿ ಇದುವರೆಗೆ 25 'ಡೆಲ್ಟಾಕ್ರಾನ್' ಪ್ರಕರಣ:
ವರದಿಗಳ ಪ್ರಕಾರ, ಲಿಯೊಂಡಿಯೊಸ್ ಕೊಸ್ಟ್ರಿಕಿಸ್ ಮತ್ತು ಅವರ ತಂಡವು ಸೈಪ್ರಸ್‌ನಲ್ಲಿ ಇದುವರೆಗೆ 25 'ಡೆಲ್ಟಾಕ್ರಾನ್' ಪ್ರಕರಣಗಳನ್ನು ಪತ್ತೆ ಮಾಡಿದೆ. ಜನವರಿ 7ರಂದು ಸಂಶೋಧಕರು ತಮ್ಮ ಸಂಶೋಧನೆಗಳನ್ನು ವೈರಸ್‌ಗಳನ್ನು ಪತ್ತೆಹಚ್ಚುವ ಅಂತರರಾಷ್ಟ್ರೀಯ ಡೇಟಾಬೇಸ್ GISAID ಗೆ ಕಳುಹಿಸಿದ್ದಾರೆ. 'ಡೆಲ್ಟಾಕ್ರಾನ್' ಕುರಿತು ಯಾವುದೇ ಅಂತರರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಗುರುತಿಸಿಲ್ಲ ಅಥವಾ ಗೊತ್ತುಪಡಿಸಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಓಮಿಕ್ರಾನ್ ತಳಿಯ ಸ್ಥಳಾಂತರಕ್ಕೆ ಕಾರಣ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಜಗತ್ತಿನ ಮೇಲೆ ಡೆಲ್ಟಾಕ್ರಾನ್ ರೂಪಾಂತರಿಯು ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದನ್ನು ತಕ್ಷಣವೇ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ, ಹೊಸ ತಳಿಯು "ಅತ್ಯಂತ ವೇಗವಾಗಿ ಹರಡುವ ಓಮಿಕ್ರಾನ್ ರೂಪಾಂತರದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ," ಎಂದು ಲಿಯೊಂಡಿಯೊಸ್ ಕೊಸ್ಟ್ರಿಕಿಸ್ ಹೇಳಿದ್ದಾರೆ.
ಕೆಲವು ವೈರಾಲಜಿಸ್ಟ್‌ಗಳು 'ಡೆಲ್ಟಾಕ್ರಾನ್' ಹೊಸ ರೂಪಾಂತರವಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಇದನ್ನು SARS-CoV-2 ವೈರಸ್‌ಗಳ ಫೈಲೋಜೆನೆಟಿಕ್ ತಳಿಯ ಮೇಲೆ ಪತ್ತೆಹಚ್ಚಲು ಅಥವಾ ಯೋಜಿಸಲು ಸಾಧ್ಯವಿಲ್ಲ.
ವೈರಾಲಜಿಸ್ಟ್ ಟಾಮ್ ಪೀಕಾಕ್:
"ಸಣ್ಣ ಅಪ್‌ಡೇಟ್: ಹಲವಾರು ದೊಡ್ಡ ಮಾಧ್ಯಮಗಳು ವರದಿ ಮಾಡಿರುವ ಸೈಪ್ರಿಯೋಟ್ 'ಡೆಲ್ಟಾಕ್ರಾನ್' ಸೀಕ್ವೆನ್ಸ್‌ಗಳು ಸಾಕಷ್ಟು ಸ್ಪಷ್ಟವಾಗಿ ಮಾಲಿನ್ಯವನ್ನು ತೋರುತ್ತವೆ. ಅವು ಫೈಲೋಜೆನೆಟಿಕ್ ಮರದ ಮೇಲೆ ಕ್ಲಸ್ಟರ್ ಆಗುವುದಿಲ್ಲ ಮತ್ತು ಡೆಲ್ಟಾ ಬೆನ್ನೆಲುಬಿನಲ್ಲಿ ಓಮಿಕ್ರಾನ್‌ನ ಸಂಪೂರ್ಣ ಆರ್ಟಿಕ್ ಪ್ರೈಮರ್ ಸೀಕ್ವೆನ್ಸಿಂಗ್ ಆಂಪ್ಲಿಕಾನ್ ಅನ್ನು ಹೊಂದಿರುತ್ತವೆ," ಎಂದು ವೈರಾಲಜಿಸ್ಟ್ ಟಾಮ್ ಪೀಕಾಕ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
"ಎಲ್ಲ ರೂಪಾಂತರಿಗಳು ಆತಂಕಕಾರಿಯಲ್ಲ":
"ಇದು SARS-CoV-2 ನಂತಹ ಆರ್‌ಎನ್‌ಎ ವೈರಸ್‌ನ ಸ್ವಭಾವದಲ್ಲಿದೆ, ವಿಶೇಷವಾಗಿ ಉಸಿರಾಟದ ಸ್ವಭಾವ, ರೂಪಾಂತರಗೊಳ್ಳುತ್ತದೆ. ನಾವು ಅನೇಕ ರೂಪಾಂತರಗಳನ್ನು ಕಂಡುಕೊಂಡರೂ, ಅದರ ಮರುಸಂಯೋಜಕ ರೂಪಗಳನ್ನು ಪ್ರಕ್ರಿಯೆಗೊಳಿಸಬೇಕಾಗಿದೆ. ಸಾರ್ವಜನಿಕ ಆರೋಗ್ಯದಲ್ಲಿ, ಪ್ರತಿಯೊಂದು ರೂಪಾಂತರವು ಆತಂಕಕಾರಿಯಲ್ಲ," ಎಂದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವೈರಾಲಜಿಸ್ಟ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಪ್ರೊಫೆಸರ್ ಸುನಿತ್ ಕೆ ಸಿಂಗ್ ಹೇಳಿದರು.












Click it and Unblock the Notifications