ರಸಾಯನಶಾಸ್ತ್ರ ವಿಭಾಗದಲ್ಲಿ ಇಬ್ಬರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಘೋಷಣೆ
ಅಂತಾರಾಷ್ಟ್ರೀಯ, ಅಕ್ಟೋಬರ್ 6: ರಸಾಯನ ಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಬುಧವಾರ ಘೋಷಿಸಲಾಗಿದ್ದು, ಜರ್ಮನಿಯ ಬೆಂಜಮಿನ್ ಲಿಸ್ಟ್ ಹಾಗೂ ಇಂಗ್ಲೆಂಡ್ನ ಡೇವಿಡ್ ಡಬ್ಲ್ಯೂ.ಸಿ. ಮ್ಯಾಕ್‌ಮಿಲನ್ ಕೆಮಿಸ್ಟ್ರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಅಸಿಮ್ಮೆಟ್ರಿಕ್ ಆರ್ಗನೊಕಟಲಿಸಿಸ್ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಈ ಇಬ್ಬರು ವಿಜ್ಞಾನಿಗಳಿಗೆ ಈ ಬಾರಿಯ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಇಂದು ರಸಾಯನ ಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಿದೆ. ಜರ್ಮನಿಯ ಬೆಂಜಮಿನ್ ಲಿಸ್ಟ್ ಮತ್ತು ಯುಕೆಯ ಡೇವಿಡ್ ಮ್ಯಾಕ್‌ಮಿಲನ್ 2000ರಲ್ಲಿ ಸ್ವತಂತ್ರವಾಗಿ ಕ್ಯಾಟಲಿಸಿಸ್ನ ಹೊಸ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದರು.
ಸಂಶೋಧಕರು ಈಗ ಹೊಸ ಔಷಧಿಗಳಿಂದ ಹಿಡಿದು ಸೌರ ಕೋಶಗಳಲ್ಲಿ ಬೆಳಕನ್ನು ಸೆರೆ ಹಿಡಿಯಬಲ್ಲ ಅಣುಗಳವರೆಗೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಈ ರೀತಿಯಾಗಿ, ಆರ್ಗನೊಕಟಲಿಸ್ಟ್ಗಳು ಮನುಷ್ಯಕುಲಕ್ಕೆ ಅನುಕೂವಾಗುವಂತಹ ಸಂಶೋಧನೆಗಳನ್ನು ಮಾಡುತ್ತಿದ್ದಾರೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರತಿಷ್ಠಿತ ಬಹುಮಾನವು 10 ದಶಲಕ್ಷ ಸ್ವೀಡಿಷ್ ಕ್ರೌನ್‌ಗಳ (1.15 ಮಿಲಿಯನ್ ಡಾಲರ್) ಮೌಲ್ಯದ್ದಾಗಿದೆ ಮತ್ತು ಇದನ್ನು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನೀಡುತ್ತದೆ.
ಮಂಗಳವಾರವಷ್ಟೇ 2021ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಸೈಕುರೊ ಮನಾಬೆ, ಕ್ಲಾಸ್ ಹ್ಯಾಸೆಲ್ಮನ್, ಪ್ಯಾರಿಸಿಗೆ ಘೋಷಿಸಲಾಗಿತ್ತು. ಜಪಾನ್, ಜರ್ಮನಿ ಮತ್ತು ಇಟಲಿಯ ಈ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಘೋಷಿಸಲಾಗಿತ್ತು. ಇದೀಗ ರಸಾಯನ ಶಾಸ್ತ್ರ ವಿಭಾಗದಲ್ಲೂ ಜರ್ಮನಿಯ ವಿಜ್ಞಾನಿಗೆ ನೊಬೆಲ್ ಪ್ರಶಸ್ತಿ ಬಂದಿದೆ.
ಮೊನ್ನೆ ಸೋಮವಾರ ನೊಬೆಲ್ ಸಮಿತಿಯು ಶರೀರಶಾಸ್ತ್ರ ಅಥವಾ ಔಷಧದಲ್ಲಿ ಅಮೆರಿಕನ್ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್‌ರಿಗೆ ಮಾನವ ದೇಹವು ತಾಪಮಾನ ಮತ್ತು ಸ್ಪರ್ಶವನ್ನು ಹೇಗೆ ಗ್ರಹಿಸುತ್ತದೆ ಎಂಬುದನ್ನು ಕಂಡುಹಿಡಿದಿದ್ದಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು.
"ಮುಂಬರುವ ದಿನಗಳಲ್ಲಿ ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕೆಲಸಗಳಿಗಾಗಿ ಬಹುಮಾನಗಳನ್ನು ಸಹ ನೀಡಲಾಗುವುದು,'' ಎಂದು ನೊಬೆಲ್ ಸಮಿತಿ ಹೇಳಿದೆ.












Click it and Unblock the Notifications