ಭಾರತದ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದ ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳು; ಕಾರಣವೇನು?
ಆಸ್ಟ್ರೇಲಿಯಾದ ವಿಕ್ಟೊರಿಯಾ, ಎಡಿತ್ ಕೊವನ್ ಸೇರಿದಂತೆ ಹಲವು ವಿಶ್ವವಿದ್ಯಾನಿಲಯಗಳು ವೀಸಾ ವಂಚನೆಯ ಸಮಸ್ಯೆಗಳ ಆಧಾರದ ಮೇಲೆ ಭಾರತದ 6 ರಾಜ್ಯಗಳ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ನಿಷೇಧಿಸಿವೆ.
ಈ ಬಗ್ಗೆ ಶುಕ್ರವಾರ, ಮೇ 26ರಂದು ಸೂಚನೆಗಳನ್ನು ನೀಡಲಾಗಿದ್ದು, ಉತ್ತರಾಖಂಡ, ಉತ್ತರಪ್ರದೇಶ, ಪಂಜಾಬ್, ಹರಿಯಾಣ ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ನೇಮಕಾತಿಯನ್ನು ನಿಲ್ಲಿಸುವಂತೆ ಫೆಡರೇಶನ್ ವಿಶ್ವವಿದ್ಯಾಲಯ ಮತ್ತು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯವು ಮೇ 19ರಂದು ಶಿಕ್ಷಣ ಏಜೆಂಟರಿಗೆ ಸೂಚನೆ ನೀಡಿದೆ.

ಭಾರತ ಈ ರಾಜ್ಯಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲು ಮುಖ್ಯ ಕಾರಣವೆಂದರಡ ವಿದ್ಯಾರ್ಥಿ ವೀಸಾ ಅಕ್ರಮ ಹೆಚ್ಚಾಗಿದೆ. ಇದು ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳ ಅತಂಕಕ್ಕೆ ಕಾರಣವಾಗಿದ್ದು, ಹೀಗಾಗಿ ಈ ಉಸಾಬರಿಯೇ ಬೇಡ ಎಂದು ಭಾರತದ 6 ರಾಜ್ಯಗಳ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಿದೆ.
ಆಸ್ಟ್ರೇಲಿಯನ್ ವಿಶ್ವವಿದ್ಯಾಲಯಗಳಿಗೆ ಭಾರತೀಯ ಅರ್ಜಿಗಳ ವೀಸಾ ನಿರಾಕರಣೆ ದರವು 10 ವರ್ಷದ ಗರಿಷ್ಠ ಮಟ್ಟವನ್ನು ತಲುಪಿದ ಕಾರಣ ಈ ಕ್ರಮವು ಬಂದಿದೆ. ಸುಮಾರು ಶೇ.25ರಷ್ಟು ಅಸಲಿ ಅಥವಾ ಮೋಸದ ಎಂದು ವರ್ಗೀಕರಿಸಲಾಗಿದೆ. ನಿಷೇಧವು ತಕ್ಷಣವೇ ಜಾರಿಗೆ ಬಂದಿದ್ದು, ಇದು ಕನಿಷ್ಠ ಎರಡು ತಿಂಗಳ ಕಾಲ ಇರಲಿದೆ.

ಆಸ್ಟ್ರೇಲಿಯಾದ ಟೊರೆನ್ಸ್ ವಿಶ್ವವಿದ್ಯಾಲಯ, ಸೌದರ್ನ್ ಕ್ರಾಸ್ ವಿಶ್ವವಿದ್ಯಾಲಯ, ಎಡಿತ್ ಕೋವನ್, ವಿಕ್ಟೋರಿಯ ಸೇರಿದಂತೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಈ ನಿರ್ಧಾರ ಪ್ರಕಟಿಸಿದ್ದವು. ಇದೀಗ ನ್ಯೂ ಸೌಥ್ ವೇಲ್ಸ್, ಫೆಡರೇಶನ್, ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯಗಳು ಭಾರತದ ಆರು ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿವೆ.
ಉತ್ತರಾಖಂಡ, ಉತ್ತರಪ್ರದೇಶ, ಪಂಜಾಬ್, ಹರಿಯಾಣ ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ವಿದ್ಯಾರ್ಥಿಗಳ ಅರ್ಜಿಯನ್ನು ಆಸ್ಟ್ರೇಲಿಯಾದ ವಿದೇಶಾಂಗ ಇಲಾಖೆ ತಿರಸ್ಕರಿಸಿದೆ. ವೀಸಾದಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದ ಕಾರಣ ಅರ್ಜಿ ತಿರಸ್ಕರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಸ್ಟ್ರೇಲಿಯಾ ಪ್ರವಾಸದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ವಲಸೆ, ಶಿಕ್ಷಣ ಮತ್ತು ಕೌಶಲ್ಯ ವಿನಿಮಯವನ್ನು ಉತ್ತೇಜಿಸಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ.
ಅಕ್ರಮ ವಿದ್ಯಾರ್ಥಿ ವೀಸಾ ಕಾರಣದಿಂದ ಭಾರತದ ವಿದ್ಯಾರ್ಥಿಗಳ ಅರ್ಜಿಯನ್ನು ಆಸ್ಟ್ರೇಲಿಯಾ ವಿದೇಶಾಂಗ ಇಲಾಖೆ ತಿರಸ್ಕರಿಸುತ್ತಿದೆ. ಅಕ್ರಮ ವಿದ್ಯಾರ್ಥಿ ವೀಸಾ, ಅಕ್ರಮ ದಾಖಲೆಗಳನ್ನು ಸಲ್ಲಿಕೆ ಮಾಡುತ್ತಿರುವ ಕಾರಣಗಳಿಂದ ವೀಸಾ ತಿರಸ್ಕೃತಗೊಳ್ಳುತ್ತಿದೆ.
ಇದೇ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆತಗ್ಗಿಸುವ ಕೆಲಸಾವಗುತ್ತಿದ್ದು, ಈ ಕುರಿತು ಆಯಾ ರಾಜ್ಯಗಳು ಎಚ್ಚರಿಕೆ ವಹಿಸುವಂತೆ ಭಾರತದ ವಿದೇಶಾಂಗ ಇಲಾಖೆ ಸೂಚಿಸಿದೆ.
ಇದೇ ವೇಳೆ ವೊಲ್ಲಾಂಗಾಂಗ್ ಸೇರಿದಂತೆ ಕೆಲವು ವಿಶ್ವವಿದ್ಯಾಲಯಗಳು ಭಾರತದ ಯಾವುದೇ ವಿದ್ಯಾರ್ಥಿಗಳಿಗೆ ನಿಷೇಧ ಹೇರಿಲ್ಲ. ಇಂತಹ ನಿರ್ಧಾರಗಲನ್ನು ಕೈಗೊಂಡಿಲ್ಲ ಎಂದಿವೆ. ಆದರೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ನಿಷೇಧ ಕ್ರಮವನ್ನು ಸ್ವಾಗತಿಸಿವೆ. ಅಕ್ರಮವನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಇದಕ್ಕೆ ಕಾನೂನು ಸೇರಿದಂತೆ ಎಲ್ಲೂ ಅವಕಾಶವಿಲ್ಲವೆಂದು ತಿಳಿಸಿವೆ.
ಆಸ್ಟ್ರೇಲಿಯಾದ ಹಲವು ವಿಶ್ವವಿದ್ಯಾಲಯಗಳು ನಿಷೇಧ ಕ್ರಮ ಜರುಗಿಸುತ್ತಿದ್ದಂತೆಯೇ ಭಾರತದ ಆಯಾ ರಾಜ್ಯ ಸರ್ಕಾರಗಳು ಎಚ್ಚರಿಕೆ ವಹಿಸುತ್ತಿವೆ. ಅಕ್ರಮ ವಿದ್ಯಾರ್ಥಿ ವೀಸಾ ಪ್ರಕರಣ ಕೊನೆಗಾಣಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮುಜುಗರ ತಪ್ಪಿಸಲು ಅಕ್ರಮ ದಾಖಲಾತಿ, ವೀಸಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ರಾಜ್ಯಗಳು ಗಮನ ಹರಿಸಿವೆ.












Click it and Unblock the Notifications