ಸತ್ತ ಜಿರಳೆ, ಕಾಂಡೋಮ್ ಬಳಸಿ 63 ಹೋಟೆಲ್ ರೂಂಗಳಲ್ಲಿ ಈತ ಮಾಡಿದ್ದೇನು ಗೊತ್ತಾ?
ಸತ್ತಿರುವ ಜಿರಳೆಗಳು ಹಾಗೂ ಬಳಸಿದ ಕಾಂಡೋಮ್‌ಗಳನ್ನೇ ಬಂಡವಾಳ ಮಾಡಿಕೊಂಡು ವ್ಯಕ್ತಿಯೊಬ್ಬ ಬರೋಬ್ಬರಿ 63 ಹೋಟೆಲ್ ರೂಂಗಳಲ್ಲಿ ಮಾಡಬಾರದ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ. ಈತ ಮಾಡುತ್ತಿದ್ದ ಕೆಲಸ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಇಂತವರೂ ಇರ್ತಾರಾ ಗುರು? ಎಂದು ಜನ ಶಾಕ್ ಆಗಿದ್ದಾರೆ.
ಚೀನಾದ ಜಿಯಾಂಗ್ ಎನ್ನುವ 21 ವರ್ಷ ವಯಸ್ಸಿನ ಯುವಕನೊಬ್ಬ ಬರೋಬ್ಬರಿ 300ಕ್ಕೂ ಹೆಚ್ಚು ಹೋಟೆಲ್‌ಗಳಿಗೆ ಭೇಟಿ ತಂಗಿದ್ದಲ್ಲದೆ ಹೋಟೆಲ್‌ನವರಿಂದಲೇ ಹಣ ವಸೂಲಿ ಮಾಡಿ ಸಿಕ್ಕಿಬಿದ್ದಿದ್ದಾನೆ.

ಮೊದಲೇ ಪ್ಲ್ಯಾನ್ ಮಾಡಿಕೊಂಡು ರೂಂಗಳನ್ನು ಪಡೆಯುತ್ತಿದ್ದ ಭೂಪ ಸತ್ತ ಜಿರಳೆಗಳು ಹಾಗೂ ಬಳಸಿದ ಕಾಂಡೋಮ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಕೊಂಡೊಯ್ದು ಅದನ್ನು ಕೋಣೆಯಲ್ಲಿ ಬಿಸಾಡುತ್ತಿದ್ದ. ಬಳಿಕ ಕೋಣೆಯಲ್ಲಿ ಸ್ವಚ್ಛತೆ ಇಲ್ಲ ಎಂದು ಮ್ಯಾನೇಜ್‌ಮೆಂಟ್ ವಿರುದ್ಧ ಜೋರು ಮಾಡುತ್ತಿದ್ದ. ಅಲ್ಲದೆ ಈ ವಿಷಯವನ್ನು ಹೊರಗೆ ಬಹಿರಂಗಪಡಿಸುತ್ತೇನೆ ಎಂದು ಬೆದರಿಸಿ, ಅವರಿಂದಲೇ ಭಾರಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.
ಹೌದು, ಚೀನಾದ ಜಿಯಾಂಗ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಹೋಟೆಲ್ ರೂಂಗಳನ್ನು ಈತನೇ ಗಲೀಜು ಮಾಡಿ, ಬಳಿಕ ಅಲ್ಲಿ ಕ್ಲೀನ್ ಇಲ್ಲ ಎಂದು ಪ್ರದರ್ಶಿಸುತ್ತಿದ್ದ. ಇದನ್ನು ದೊಡ್ಡದು ಮಾಡಬೇಡಿ ಎಂದು ಮ್ಯಾನೇಜ್‌ಮೆಂಟ್‌ಗಳು ಕೂಡ ಈತನಿಗೆ ಭಾರಿ ಹಣ ನೀಡಿ ವಂಚನೆಗೆ ಒಳಗಾಗಿವೆ. ಇನ್ನು ಈತ ಹೋದ ಹೋಟೆಲ್‌ಗಳಲ್ಲಿ ಈ ಕೃತ್ಯ ಎಸಗುವ ಮೂಲಕ ಉಚಿತ ವಾಸ್ತವ್ಯ ಪಡೆದುಕೊಂಡು ಸುಲಿಗೆ ಮಾಡುತ್ತಿದ್ದ.

ಸದ್ಯ ಈತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ ಪ್ರಕಾರ ಈತ 63 ಹೋಟೆಲ್‌ಗಳಿಗೆ ಈ ರೀತಿ ವಂಚಿಸಿದ್ದಾನೆ. 10 ತಿಂಗಳುಗಳಲ್ಲಿ ಈ ರೀತಿ ವಂಚನೆ ಮಾಡಿ 5,200 ಡಾಲರ್‌ಗಳಷ್ಟು ಸುಲಿಗೆ ಮಾಡಿದ್ದಾನೆ.
ಜಿಯಾಂಗ್ ತನ್ನ ಕಾಲೇಜು ದಾಖಲಾತಿಗೆ ಹಣ ಹೊಂದಿಸಲು ಈ ಕೃತ್ಯಕ್ಕೆ ಇಳಿದಿದ್ದ ಎಂದು ವರದಿಯಾಗಿದೆ. ಕೇವಲ 10 ತಿಂಗಳ ಅವಧಿಯಲ್ಲಿ ಈತ ಆಗಾಗ ಹೋಟೆಲ್‌ಗಳಲ್ಲಿ ಒಂದು ದಿನದ ಮಟ್ಟಿಗೆ ತಂಗುತ್ತಿದ್ದ. ಮೊದಲೇ ತನ್ನ ಬ್ಯಾಗ್‌ನಲ್ಲಿ ಜಿರಳೆಗಳು, ಇತರ ಕೀಟಗಳು ಹಾಗೂ ಬಳಸಿ ಬಿಸಾಡಿರುವ ಕಾಂಡೋಮ್‌ಗಳನ್ನು ಕೊಂಡೊಯ್ಯುತ್ತಿದ್ದ. ಅಲ್ಲಿ ಚೆನ್ನಾಗಿ ತಿಂದು ತೇಗಿ ಆರಾಮವಾಗಿ ವಾಸ್ತವ್ಯ ಮಾಡುತ್ತಿದ್ದ. ಚೆಕ್‌ಔಟ್ ಆಗುವ ಮುನ್ನ ಅಲ್ಲಿ ಕ್ಲೀನ್‌ನೆಸ್ ಇಲ್ಲ ಎಂದು ಕ್ಯಾತೆ ತೆಗೀತಿದ್ದ ಎಂದು ತಿಳಿದುಬಂದಿದೆ.

ಇನ್ನು ಹೋಟೆಲ್ ಸಿಬ್ಬಂದಿಗೆ ಈ ವಿಚಾರ ಸಾರ್ವಜನಿಕರಿಗೆ ರಿವೀಲ್ ಮಾಡ್ತೀನಿ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕ್ತೀನಿ ಎಂದು ಬೆದರಿಕೆ ಹಾಕುತ್ತಿದ್ದನಂತೆ. ಇದಕ್ಕೆ ಹೆದರುತ್ತಿದ್ದ ಹೋಟೆಲ್‌ನವರು ಪ್ರತಿಷ್ಠೆಯ ಕಾರಣಕ್ಕೆ ಹಣ ನೀಡಿ ಸುಮ್ಮನಾಗುತ್ತಿದ್ದರು. ಇದನ್ನೇ ಈ ಭೂಪ ಆಗಾಗ ಮಾಡುತ್ತಾ ಹಣ ಸುಲಿಗೆ ಮಾಡಿಕೊಳ್ಳುತ್ತಿದ್ದ.
ಇನ್ನು ಹಲವು ತಿಂಗಳ ಕಾಲ ಈ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಕೊನೆಗೆ ಹೋಟೆಲ್‌ಗಳ ಮಾಲೀಕರ ನಡುವೆಯೇ ಈ ವಿಚಾರ ಚರ್ಚೆಯಾದಾಗ ಎಲ್ಲ ಕಡೆ ಒಂದೇ ರೀತಿಯ ಕೃತ್ಯ ಗೊತ್ತಾಗಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಜಿಯಾಂಗ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಫೀಲ್ಡಿಗಿಳಿದ ಪೊಲೀಸರ ಕೈಗೆ ಜಿಯಾಂಗ್ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಜಿಯಾಂಗ್ 300ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದು, ಅವುಗಳಲ್ಲಿ 63 ಹೋಟೆಲ್‌ಗಳನ್ನು ಈ ವಂಚನೆಯನ್ನು ಯಶಸ್ವಿಯಾಗಿ ಮಾಡಿದ್ದಾನೆ ಎಂದು ಗೊತ್ತಾಗಿದೆ.












Click it and Unblock the Notifications