ಏನಿದು HMPV ವೈರಸ್?; ಹರಡಿಕೊಂಡಿದ್ದು ಯಾವಾಗ ಹಾಗೂ ತಜ್ಞರು ಹೇಳೋದೇನು?
HMPV Virus: ಚೀನಾದಲ್ಲಿ ಭೀತಿ ಹುಟ್ಟಿಸಿದ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಇದೀಗ ಕರ್ನಾಟಕಕ್ಕೂ ಲಗ್ಗೆ ಇಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗದರೆ ಇದು ಮೊದಲಿಗೆ ಹುಟ್ಟಿಕೊಂಡಿದ್ದು ಎಲ್ಲಿ? ಯಾವಾಗ? ಈ ಬಗ್ಗೆ ತಜ್ಞರು ಹೇಳುವುದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮಹಾಮಾರಿ ಕೊರೊನಾ ಬಳಿ ಇದೀಗ ಎಚ್‌ಎಂಪಿವಿ ವೈರಲ್ ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿದೆ. ಇನ್ನೂ ತಜ್ಞರು ಹೇಳುವ ಪ್ರಕಾರ ಎಚ್‌ಎಂಪಿವಿ ವೈರಸ್ ಹೊಸದೇನಲ್ಲ. ಇದನ್ನು ಮೊದಲು 2001ರಲ್ಲಿ ಕಂಡುಹಿಡಿಯಲಾಯಿತು ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳಿದೆ. ಇನ್ನು ಕೆಲವು ಸೆರೋಲಾಜಿಕ್ ಪುರಾವೆಗಳು ಈ ವೈರಸ್ 1958ರಿಂದಲೇ ವ್ಯಾಪಕವಾಗಿ ಹರಡಿತ್ತು ಎಂಬುದನ್ನು ನಿರೂಪಿಸಿರುವುದಾಗಿಯೂ ತಜ್ಞರು ಹೇಳಿದ್ದಾರೆ.

COVID-19 ಒಂದು ಸಾಂಕ್ರಾಮಿಕ ಕಾಯಿಲೆ ಆಗಿದೆ. ಇದು SARS-CoV-2 ವೈರಸ್‌ನಿಂದ ಉಂಟಾಗುತ್ತದೆ. ಎಚ್‌ಎಂಪಿವಿ ವೈರಸ್ ಮತ್ತು ಕೊರೊನಾ ವೈರಸ್ ಕೆಲವು ರೀತಿಯಲ್ಲಿ ಹೋಲಿಕೆಯನ್ನ ಹೊಂದಿವೆ. ಎರಡೂ ವೈರಸ್‌ಗಳು ಎಲ್ಲಾ ವಯಸ್ಸಿನ ಜನರಲ್ಲಿ ಉಸಿರಾಟದ ಕಾಯಿಲೆಗೆ ಕಾರಣ ಆಗುತ್ತವೆ. ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಹೆಚ್ಚು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಈ ಹಿಂದೆ ಕೊರೊನಾದಿಂದ ತುಂಬಾ ಜನ ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಆದ್ದರಿಂದ ಮುಂಜಾಗ್ರತೆಯಿಂದ ಇರುವುದು ಉತ್ತಮ ಎಂದು ತಜ್ಞರು ಹೇಳುವ ಮಾತಾಗಿದೆ. ಇನ್ನು ಎಚ್‌ಎಂಪಿವಿ ವೈರಸ್ ಹರಡುವಿಕೆಯ ನಿಯಂತ್ರಣಕ್ಕೆ ಯಾವುದೇ ಲಸಿಕೆ ಕಂಡುಹಿಡಿದಿಲ್ಲ. ಆದರೆ, ಭಾರತದಲ್ಲಿ ಸದ್ಯ ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯ ವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ವೈರಸ್ ದೃಢಪಟ್ಟಿದೆ. ಮಗುವಿಗೆ ಜ್ವರ ಬಂದ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪರೀಕ್ಷೆ ಮಾಡಿಸಿದ ವೇಳೆ ವೈರಸ್ ಇರುವುದು ಪತ್ತೆ ಆಗಿದೆ. ಆದರೆ, ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಮಗುವಿನಲ್ಲಿ ವೈರಸ್ ಪತ್ತೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.












Click it and Unblock the Notifications