West Bengal Violence: ಕೇಂದ್ರ ಸಚಿವರ ಬೆಂಗಾವಲು ವಾಹನಗಳ ಮೇಲೆ ಬಾಂಬ್- ನನಗೇನೂ ಗೊತ್ತಿಲ್ಲವೆಂದ ಟಿಎಂಸಿ
ಕೋಲ್ಕತ್ತ, ಜೂನ್ 17: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಕೇಂದ್ರ ಸಚಿವ ನಿಸಿತ್ ಪ್ರಮಾಣಿಕ್ ಅವರ ಬೆಂಗಾವಲು ವಾಹನದ ಮೇಲೆ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಶನಿವಾರ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ಬಿಜೆಪಿ ಆರೋಪವನ್ನು ಅಲ್ಲಗಳೆದಿದೆ.
ಮುಂಬರುವ ಪಂಚಾಯತ್ ಚುನಾವಣೆಗೆ ನಾಮಪತ್ರಗಳ ಪರಿಶೀಲನೆ ನಡೆಯುತ್ತಿರುವ ಬ್ಲಾಕ್ ಡೆವಲಪ್‌ಮೆಂಟ್ ಕಛೇರಿಗೆ ಪ್ರಾಮಾಣಿಕ್ ಅವರು ಭೇಟಿ ನೀಡಲು ಯತ್ನಿಸಿದಾಗ ಈ ಘಟನೆ ನಡೆದಿದೆ.
ಟಿಎಂಸಿ ಕಾರ್ಯಕರ್ತರು ಬಿಡಿಒ ಕಚೇರಿಗೆ ತೆರಳುವ ರಸ್ತೆ ತಡೆದು ಅವ್ಯವಹಾರ ನಡೆಸುತ್ತಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ತಾನು ಅಲ್ಲಿಗೆ ಹೋಗಿದ್ದೆ ಎಂದು ಸಚಿವರು ಹೇಳಿದ್ದಾರೆ.

'ನಾನು ಬಿಡಿಒ ಕಚೇರಿಗೆ ಭೇಟಿ ನೀಡಲು ಪ್ರಯತ್ನಿಸಿದಾಗ, ನನ್ನ ಬೆಂಗಾವಲು ಪಡೆಗೆ ಕಲ್ಲು ತೂರಲಾಯಿತು, ನಮ್ಮ ಮೇಲೆ ಬಾಂಬ್‌ಗಳನ್ನು ಎಸೆಯಲಾಯಿತು, ಟಿಎಂಸಿ ಕಾರ್ಯಕರ್ತರು ನಮ್ಮ ಪಕ್ಷದ ಕಾರ್ಯಕರ್ತರನ್ನು ಥಳಿಸಿದರು ಮತ್ತು ನಮ್ಮ ಅಭ್ಯರ್ಥಿಗಳ ಪತ್ರಗಳನ್ನು ನಾಶಪಡಿಸಿದರು. ಪೊಲೀಸರು ಸುಮ್ಮನೆ ನಿಂತಿರುವುದು ನಾಚಿಕೆಗೇಡಿನ ಸಂಗತಿ' ಎಂದು ಪ್ರಾಮಾಣಿಕ್ ಆರೋಪಿಸಿದ್ದಾರೆ.
ಸಿಆರ್‌ಪಿಸಿ ಸೆಕ್ಷನ್ 144 ಅನ್ನು ಉಲ್ಲೇಖಿಸಿ ಬಿಜೆಪಿ ಕಾರ್ಯಕರ್ತರನ್ನು ಬಿಡಿಒ ಕಚೇರಿಗೆ ಪ್ರವೇಶಿಸದಂತೆ ತಡೆಯಲಾಗಿದೆ. ಆದರೆ, ಟಿಎಂಸಿ ಕಾರ್ಯಕರ್ತರು ಕಚೇರಿ ಆವರಣದ ಹೊರಗೆ ಸೇರಲು ಅನುಮತಿಸಲಾಗಿದೆ' ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಕೇಂದ್ರ ಪಡೆಗಳ ಉಪಸ್ಥಿತಿಯಲ್ಲಿ ನಾಮಪತ್ರಗಳ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ ಆದಾಗ್ಯೂ, ಟಿಎಂಸಿ ಈ ಆರೋಪಗಳನ್ನು ಆಧಾರರಹಿತ ಎಂದು ತಿಳಿಸಿದೆ.

ಸಿಸಿಟಿವಿ ದೃಶ್ಯಾವಳಿಗಳು ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಯನ್ನು ತೋರಿಸಿವೆ. ವಾಗ್ವಾದದ ಸಮಯದಲ್ಲಿ ಕಚ್ಚಾ ಬಾಂಬ್‌ಗಳನ್ನು ಎಸೆದಿರುವುದು ಕಂಡುಬಂದಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ ನಾಯಕ ಮತ್ತು ಉತ್ತರ ಬಂಗಾಳ ಅಭಿವೃದ್ಧಿ ಸಚಿವ ಉದಯನ್ ಗುಹಾ, 'ರಾಜ್ಯದಲ್ಲಿ ಶಾಂತಿಯುತ ವಾತಾವರಣವನ್ನು ಅಡ್ಡಿಪಡಿಸಲು ಬಿಜೆಪಿ ತನ್ನ ಕಾರ್ಯಕರ್ತರನ್ನು ಪ್ರಚೋದಿಸುತ್ತಿದೆ' ಎಂದು ಆರೋಪಿಸಿದ್ದಾರೆ.
'ಬಿಜೆಪಿಯು ಅಶಾಂತಿ ಸೃಷ್ಟಿಸುವ ಮೂಲಕ ಮುಂಬರುವ ಚುನಾವಣೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಪಡೆಗಳೊಂದಿಗೆ ತೆರಳಿದ ಕೇಂದ್ರ ಸಚಿವರು ಪರಿಶೀಲನೆ ಪ್ರಕ್ರಿಯೆಗೆ ಅಡ್ಡಿಪಡಿಸಲು ಪ್ರಯತ್ನಿಸಿದರು. ಅವರು ಭಯವನ್ನು ಹರಡಲು ಕೇಂದ್ರೀಯ ಪಡೆಗಳನ್ನು ಬಳಸುತ್ತಿದ್ದಾರೆ' ಎಂದು ಹೇಳಿದ್ದಾರೆ.
ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿದಂತೆ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.












Click it and Unblock the Notifications