ತಾಯಿಯಿಂದಲೇ ಮಗನ 'ಶೌಚ' ಕ್ಲೀನ್ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ: ವೈರಲ್‌ ವಿಡಿಯೋ ನೋಡಿ ನೆಟ್ಟಿಗರು ಕೆಂಡ

ಆಸ್ಪತ್ರೆಗಳು ಎಂದರೆ ಜಾತಿ, ಧರ್ಮ, ಲಿಂಗ ತಾರತಮ್ಯವಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರ ಆರೋಗ್ಯ ಕಾಪಾಡುವ,ಜೀವ ಉಳಿಸುವ ಒಂದು ಪವಿತ್ರ ತಾಣವೆಂದು ಎಲ್ಲರೂ ನಂಬಿರುತ್ತೇವೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಆಗುತ್ತಿರುವ ಕಿರುಕುಳ, ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಅವ್ಯವಸ್ಥೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಮಧ್ಯಪ್ರದೇಶದ ದಮೋಹ್ ಜಿಲ್ಲಾ ಆಸ್ಪತ್ರೆಯಿಂದ ಇಂತಹದ್ದೇ ಒಂದು ಅಮಾನವೀಯ ಘಟನೆ ವರದಿಯಾಗಿದೆ ನೋಡಿ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗ ನೆಲದ ಮೇಲೆ ಶೌಚ ಮಾಡಿದ್ದ ಕಾರಣಕ್ಕೆ, ಸ್ವತಃ ಆತನ ತಾಯಿಯೇ ಆಸ್ಪತ್ರೆಯ ನೆಲವನ್ನ ಸ್ವಚ್ಛಗೊಳಿಸುತ್ತಿರುವ ವಿಡಿಯೋವೊಂದು ಸೋಶಿಯಲ್‌ ಮಿಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದು ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Viral Video Mother Forced to Clean Floor at Damoh District Government Hospital in Madhya Pradesh

ತಾಯಿಯ ಕೈಗೆ ಮಾಪ್ ಕೊಟ್ಟ ಆಸ್ಪತ್ರೆ ಸಿಬ್ಬಂದಿ

ವರದಿಗಳ ಪ್ರಕಾರ, ಮಧ್ಯಪ್ರದೇಶದ ದಮೋಹ್ ಜಿಲ್ಲಾ ಆಸ್ಪತ್ರೆಗೆ ಮಹಿಳೆಯೊಬ್ಬರು ತಮ್ಮ ಅನಾರೋಗ್ಯ ಪೀಡಿತ ಮಗನನ್ನು ಚಿಕಿತ್ಸೆಗಾಗಿ ಕರೆತಂದಿದ್ದರು. ಆತ ತೀವ್ರವಾದ ಅತಿಸಾರದಿಂದ ಬಳಲುತ್ತಿದ್ದನು. ರಾತ್ರಿಯ ವೇಳೆ ಚಿಕಿತ್ಸೆ ಪಡೆಯುವಾಗ ಆಕಸ್ಮಿಕವಾಗಿ ರೋಗಿ ಆಸ್ಪತ್ರೆಯ ನೆಲದ ಮೇಲೆ ಮಲ ವಿಸರ್ಜನೆ ಮಾಡಿದ್ದಾನೆ.

ಈ ವೇಳೆ ಅಲ್ಲಿನ ಸ್ವಚ್ಛತಾ ಸಿಬ್ಬಂದಿಯನ್ನ ಕರೆದು ಶುಚಿಗೊಳಿಸುವ ಬದಲು, ಕರ್ತವ್ಯದಲ್ಲಿದ್ದ ನರ್ಸಿಂಗ್ ಸಿಬ್ಬಂದಿ ನೇರವಾಗಿ ಆ ರೋಗಿಯ ತಾಯಿಯ ಕೈಗೇ ಮಾಪ್ ಕೊಟ್ಟು ನೆಲ ಒರೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ವಿಡಿಯೋದಲ್ಲಿ ವಯಸ್ಸಾದ ಆ ತಾಯಿ ಅಸಹಾಯಕಳಾಗಿ ನೆಲವನ್ನ ಶುಚಿಗೊಳಿಸುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ. ವಯಸ್ಸಾದ ತಾಯಿಗೆ ಈ ರೀತಿಯ ಕೆಲಸ ಮಾಡಿಸಿರುವುದು ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆ ನಡೆಯನ್ನ ತೋರಿಸುತ್ತದೆ.

ಆಸ್ಪತ್ರೆಯ ಸ್ವಚ್ಛತಾ ವ್ಯವಸ್ಥೆ ಹಾಗೂ ಆಡಳಿತದ ಬಗ್ಗೆ ಪ್ರಶ್ನೆ

ಈ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಸಾರ್ವಜನಿಕರು ಹಾಗೂ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲೆಂದೇ ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ. ಅವರಿಗೆ ಸರ್ಕಾರದಿಂದ ವೇತನವೂ ಪಾವತಿಯಾಗುತ್ತದೆ.

ಅಲ್ಲದೇ ಆಸ್ಪತ್ರೆಯಲ್ಲಿ ಸಾಕಷ್ಟು ಮಂದಿ ಹೊರಗುತ್ತಿಗೆ ಸ್ವಚ್ಛತಾ ಕಾರ್ಮಿಕರು ಹಾಗೂ ಮೇಲ್ವಿಚಾರಕರು ಕೆಲಸ ಮಾಡುತ್ತಿರುತ್ತಾರೆ. ಹೀಗಿರುವಾಗ, ತಮ್ಮವರ ಕಾಯಿಲೆಯಿಂದ ಕಂಗಾಲಾಗಿರುವ ರೋಗಿಗಳ ಸಂಬಂಧಿಕರ ಕೈಯಲ್ಲಿ ಈ ರೀತಿ ಕಸ ಗುಡಿಸುವುದು, ನೆಲ ಒರೆಸುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ರೋಗಿಗಳಿಗೆ ನೈತಿಕ ಬೆಂಬಲ ನೀಡಲು, ಅವರ ಆರೈಕೆ ಮಾಡಲು ಬರುವ ಕುಟುಂಬಸ್ಥರಿಗೆ ಇಂತಹ ಶಿಕ್ಷೆ ನೀಡುವುದು ಆಸ್ಪತ್ರೆಯ ಸಿಬ್ಬಂದಿಯ ಬೇಜವಾಬ್ದಾರಿತನವನ್ನ ಎತ್ತಿ ತೋರಿಸುತ್ತದೆ.

ಆಸ್ಪತ್ರೆ ಆಡಳಿತ ಮಂಡಳಿಯ ಸ್ಪಷ್ಟನೆ

ದಮೋಹ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ. ವೈರಲ್ ಆಗಿರುವ ಈ ವಿಡಿಯೋ ಇತ್ತೀಚಿನದ್ದಲ್ಲ, ಇದು ಸುಮಾರು ಒಂದೂವರೆಯಿಂದ ಎರಡು ತಿಂಗಳ ಹಳೆಯ ವಿಡಿಯೋ ಎಂದು ಆಸ್ಪತ್ರೆಯ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.

ಆದರೆ, ವಿಡಿಯೋ ಹಳೆಯದೇ ಆಗಿರಲಿ, ಆ ಮಹಿಳೆಗೆ ನೆಲ ಒರೆಸಲು ಹೇಳಿದ್ದು ಯಾಕೆ? ಅಂದು ಸ್ವಚ್ಛತಾ ಸಿಬ್ಬಂದಿ ಎಲ್ಲಿ ಹೋಗಿದ್ದರು? ಎಂಬ ಪ್ರಶ್ನೆಗಳಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಷ್ಟ ಉತ್ತರ ನೀಡಿಲ್ಲ.

ಸದ್ಯಕ್ಕೆ ಕರ್ತವ್ಯದಲ್ಲಿದ್ದ ನರ್ಸಿಂಗ್ ಅಧಿಕಾರಿ, ಆಸ್ಪತ್ರೆಯ ಸಹಾಯಕ ಮ್ಯಾನೇಜರ್ ಹಾಗೂ ಸ್ವಚ್ಛತಾ ಏಜೆನ್ಸಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಏನೇ ಆದರೂ, ಈ ಘಟನೆಯು ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಕರನ್ನ ನಡೆಸಿಕೊಳ್ಳುವ ರೀತಿ ಹಾಗೂ ಅಲ್ಲಿನ ಸ್ವಚ್ಛತಾ ನಿರ್ವಹಣೆಯ ಬಗ್ಗೆ ಗಂಭೀರ ಚರ್ಚೆಯನ್ನ ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+