ಡೆಲಿವರಿ ಬಾಯ್‌ಗೆ ರಾಖಿ ಕಟ್ಟಿ, ಕಾಲು ಮುಟ್ಟಿ ನಮಸ್ಕರಿಸಿದ ಮಹಿಳೆ: ಅಣ್ಣನಾಗಿ 50 ರೂ. ಉಡುಗೊರೆ ನೀಡಿದ ಯುವಕನ ವಿಡಿಯೋ ವೈರಲ್!
ರಕ್ಷಾಬಂಧನ ಎಂದರೆ ಕೇವಲ ಒಡಹುಟ್ಟಿದ ಅಣ್ಣ-ತಂಗಿಯರ ನಡುವಿನ ಆಚರಣೆಯಲ್ಲ, ಅದೊಂದು ಪ್ರೀತಿ ಮತ್ತು ನಂಬಿಕೆಯ ಸಂಕೇತ ಎಂಬುದನ್ನ ಈ ಘಟನೆ ಸಾಬೀತುಪಡಿಸಿದೆ. ಹಬ್ಬದ ದಿನದಂದೂ ತಮ್ಮ ಕುಟುಂಬದಿಂದ ದೂರ ಉಳಿದು ಕೆಲಸ ಮಾಡುವ ಕಾರ್ಮಿಕರಿಗೆ, ಡೆಲಿವರಿ ಬಾಯ್‌ಗಳಿಗೆ ಹಬ್ಬದ ಸಂಭ್ರಮ ಸವಿಯಲು ಸಾಧ್ಯವಾಗುವುದಿಲ್ಲ.
ಆದರೆ, ಗುಜರಾತ್‌ನ ವಡೋದರಾದಲ್ಲಿ ಮಹಿಳೆಯೊಬ್ಬಳು ಆರ್ಡರ್ ತಂದುಕೊಟ್ಟ ಜೆಪ್ಟೊ ಡೆಲಿವರಿ ಪಾರ್ಟ್‌ನರ್‌ಗೆ ರಾಖಿ ಕಟ್ಟಿ, ಹಬ್ಬದ ಸಂಭ್ರಮವನ್ನ ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಹೃದಯ ಗೆದ್ದಿದೆ.

ವಡೋದರಾ ನಿವಾಸಿ ಆಕಾಂಕ್ಷಾ ಸಿಂಗ್ ಎಂಬುವವರು ಈ ಸುಂದರ ಕ್ಷಣದ ವಿಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕಾಂಕ್ಷಾ ಮತ್ತು ಅವರ ಸ್ನೇಹಿತರು ತಮ್ಮಷ್ಟಕ್ಕೆ ತಾವೇ ರಕ್ಷಾಬಂಧನ ಆಚರಿಸಿಕೊಳ್ಳುವ ಬದಲು, ಏನಾದರೂ ವಿಶೇಷವಾಗಿ ಮಾಡಬೇಕೆಂದು ನಿರ್ಧರಿಸಿದ್ದರು. ಅದೇ ಸಮಯಕ್ಕೆ ಸರಿಯಾಗಿ ಆರ್ಡರ್ ತಲುಪಿಸಲು ಬಂದ ಡೆಲಿವರಿ ಬಾಯ್‌ಗೆ ರಾಖಿ ಕಟ್ಟಲು ಅವರು ತೀರ್ಮಾನಿಸಿದರು.
ಡೆಲಿವರಿ ಬಾಯ್ ಬಾಗಿಲಿಗೆ ಬರುತ್ತಿದ್ದಂತೆ ಆತನನ್ನ ಪ್ರೀತಿಯಿಂದ ಸ್ವಾಗತಿಸಿದ ಆಕಾಂಕ್ಷಾ, ಆತನ ಕೈಗೆ ರಾಖಿ ಕಟ್ಟಿ, ಆಶೀರ್ವಾದ ಪಡೆಯಲು ಕಾಲಿಗೆ ನಮಸ್ಕರಿಸಿದರು. ಅಪರಿಚಿತರ ಈ ಅನಿರೀಕ್ಷಿತ ಪ್ರೀತಿಯಿಂದ ಡೆಲಿವರಿ ಯುವಕ ಒಂದು ಕ್ಷಣ ಭಾವುಕನಾದ.
50 ರೂ.ಗಳ ಅಮೂಲ್ಯ ಉಡುಗೊರೆ
ರಾಖಿ ಕಟ್ಟಿಸಿಕೊಂಡ ನಂತರ, ಆ ಯುವಕ ತನ್ನ ತಂಗಿಗೆ ಏನಾದರೂ ಉಡುಗೊರೆ ನೀಡಲೇಬೇಕೆಂದು ನಿರ್ಧರಿಸಿದ. ಆಕಾಂಕ್ಷಾ ಬಳಿ ಕ್ಯೂಆರ್ ಕೋಡ್ ಸ್ಕ್ಯಾನರ್ ಇದೆಯೇ, ಹಣ ಕಳುಹಿಸುತ್ತೇನೆ ಎಂದು ಅತ್ಯಂತ ಮುಗ್ಧವಾಗಿ ಕೇಳಿದ. ಆಕಾಂಕ್ಷಾ ಬೇಡ ಎಂದು ಎಷ್ಟೇ ನಿರಾಕರಿಸಿದರೂ ಕೇಳದ ಆತ, ತನ್ನ ಜೇಬಿನಿಂದ 50 ರೂಪಾಯಿ ನೋಟನ್ನ ತೆಗೆದು ಶಗುನ್ ಅಂದರೆ ಉಡುಗೊರೆಯಾಗಿ ನೀಡಿದ. "ಈಗ ನನ್ನನ್ನು ತಂಗಿ ಎಂದು ಕರೆದಿದ್ದೀಯಲ್ಲ, ನಾನು ನನ್ನ ದುಡಿಮೆಯಿಂದ ಈ 50 ರೂಪಾಯಿ ಕೊಡಲೇಬೇಕು" ಎಂದು ನಗುತ್ತಲೇ ಹೇಳಿದ.
ಅಷ್ಟೇ ಅಲ್ಲದೆ, "ಭವಿಷ್ಯದಲ್ಲಿ ಯಾವುದೇ ಸಹಾಯ ಬೇಕಿದ್ದರೂ ನಿನ್ನ ಈ ಅಣ್ಣನನ್ನು ನೆನಪಿಸಿಕೊ" ಎಂದು ಭರವಸೆ ನೀಡಿದ. ಈ ರಕ್ಷಾಬಂಧನ ವೈರಲ್ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಜೆಪ್ಟೊ ಡೆಲಿವರಿ ಪಾರ್ಟ್‌ನರ್ ಜೊತೆಗಿನ ಅಪರೂಪದ ಕ್ಷಣ
ತಮ್ಮ ಈ ಅನುಭವದ ಕುರಿತು ಮಾತನಾಡಿರುವ ಆಕಾಂಕ್ಷಾ ಸಿಂಗ್, "ಇದೊಂದು ದಿಢೀರ್ ನಿರ್ಧಾರವಾಗಿತ್ತು. ಅಪರಿಚಿತರಿಗೆ ರಾಖಿ ಕಟ್ಟುತ್ತಿರುವುದರಿಂದ ಆತ ಹೇಗೆ ಪ್ರತಿಕ್ರಿಯಿಸುತ್ತಾನೋ ಎಂಬ ಆತಂಕ ನಮಗಿತ್ತು. ಆದರೆ ಆತನ ಪ್ರತಿಕ್ರಿಯೆ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿತು. ಆತ ಕೊಟ್ಟ 50 ರೂಪಾಯಿ ಕೇವಲ ಹಣವಲ್ಲ, ಅದೊಂದು ಆಶೀರ್ವಾದ ಮತ್ತು ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅದ್ಭುತ ಕ್ಷಣ. ಹಬ್ಬದ ದಿನದಂದು ನಮ್ಮೆಲ್ಲರ ಕೆಲಸಗಳನ್ನ ಸುಲಭವಾಗಿಸಲು ದುಡಿಯುವ ಇಂತಹ ಜೆಪ್ಟೊ ಡೆಲಿವರಿ ಪಾರ್ಟ್‌ನರ್ ಗಳ ಶ್ರಮಕ್ಕೂ ಬೆಲೆ ಸಿಗಬೇಕು" ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ಪ್ರೀತಿಯ ಮಳೆಯನ್ನೇ ಸುರಿಸುತ್ತಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಎಮೋಜಿಗಳು ತುಂಬಿಹೋಗಿವೆ. "ಯುವಕ ಕ್ಯೂಆರ್ ಕೋಡ್ ಕೇಳಿದ ರೀತಿ ಮತ್ತು ಸಹಾಯ ಬೇಕಾದರೆ ಅಣ್ಣನನ್ನು ನೆನಪಿಸಿಕೊ ಎಂದ ಪರಿ ನಿಜಕ್ಕೂ ಅದ್ಭುತ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.


Click it and Unblock the Notifications
