UPI: ಉಚಿತ ಯುಪಿಐ ಸೇವೆಗೆ ಬೀಳುತ್ತಾ ಬ್ರೇಕ್? ಯಾರ ಜೇಬಿಗೆ ಕತ್ತರಿ?; ಇಲ್ಲಿದೆ ಮಾಹಿತಿ
UPI: ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿವಾಗಿದ್ದ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದೆ. 2,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಯುಪಿಐ ವಹಿವಾಟುಗಳ ಮೇಲೆ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (ಎಂಡಿಆರ್) ಅಂದರೆ ವರ್ತಕರ ಸೇವಾ ಶುಲ್ಕವನ್ನು ವಿಧಿಸಲು ಅವಕಾಶ ಕಲ್ಪಿಸುವ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದೆ. ಹಾಗಾದ್ರೆ ಯಾರ ಜೇಬಿಗೆ ಕತ್ತರಿ ಬೀಳಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆ ಕಾಯ್ದೆಗೆ (Payment and Settlement Systems Act) ತಿದ್ದುಪಡಿ ತರಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ನಿರ್ದಿಷ್ಟ ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ಕಾನೂನಾತ್ಮಕ ಹಾದಿಯನ್ನು ಸುಲಭಗೊಳಿಸಲಾಗಿದೆ.

ಗಮನಿಸಬೇಕಾದ ಪ್ರಮುಖ ಮುಖ್ಯಾಂಶಗಳು
* ತಕ್ಷಣವೇ ಯಾವುದೇ ಶುಲ್ಕ ಜಾರಿಯಿಲ್ಲ: ಸಂಸತ್ತಿನಲ್ಲಿ ಮಂಡಿಸಲಾದ ಈ ತಿದ್ದುಪಡಿ ಮಸೂದೆಯು ತಕ್ಷಣದಿಂದಲೇ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಬದಲಿಗೆ ಸರ್ಕಾರವು ಮುಂದಿನ ದಿನಗಳಲ್ಲಿ ಅಗತ್ಯ ಇದ್ದರೆ ಎಂಡಿಆರ್ ಜಾರಿಗೊಳಿಸಲು ಅಗತ್ಯವಿರುವ ಕಾನೂನು ಚೌಕಟ್ಟನ್ನು ಮಾತ್ರ ಕಾರ್ಯರೂಪಕ್ಕೆ ತರಲಿದೆ.
* ಸಾಮಾನ್ಯ ಗ್ರಾಹಕರಿಗೆ ಹೊರೆಯಿಲ್ಲ: ಈ ಶುಲ್ಕವು ವರ್ತಕರಿಗೆ ಅನ್ವಯಿಸುತ್ತದೆಯೇ ಹೊರತು ಸಾಮಾನ್ಯ ಗ್ರಾಹಕರಿಗೆ ಅಲ್ಲ. ಹೀಗಾಗಿ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ.
* ಪರಿಶೀಲನೆಯಲ್ಲಿರುವ ಪ್ರಸ್ತಾವನೆಯ ಪ್ರಕಾರ, 2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಶೇಕಡಾ 0.3 ರಿಂದ 0.5 ರಷ್ಟು ಶುಲ್ಕ ವಿಧಿಸುವ ಸಾಧ್ಯತೆಯಿದೆ.
* ಸಣ್ಣ ವರ್ತಕರಿಗೆ ವಿನಾಯಿತಿ: ವರ್ಷಕ್ಕೆ 1.5 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ವರ್ತಕರು ಮತ್ತು ಬ್ರ್ಯಾಂಡ್‌ಗಳಿಗೆ ಮಾತ್ರ ಈ ಶುಲ್ಕ ಅನ್ವಯವಾಗುವ ಸಾಧ್ಯತೆಯಿದೆ. ತರಕಾರಿ ಮಾರಾಟಗಾರರು, ರಸ್ತೆಬದಿ ವ್ಯಾಪಾರಿಗಳು ಹಾಗೂ ಸಣ್ಣ ಅಂಗಡಿಯವರು ಇದು ಅನ್ವಯ ಆಗುವುದಿಲ್ಲ.
ಶುಲ್ಕ ವಿಧಿಸಲು ಚರ್ಚೆ ನಡೆಯುತ್ತಿರುವುದೇಕೆ?
2020ರ ಜನವರಿಯಿಂದ ಕೇಂದ್ರ ಸರ್ಕಾರವು ಯುಪಿಐ ಮೇಲಿನ ಎಂಡಿಆರ್ ಶುಲ್ಕವನ್ನು ರದ್ದುಗೊಳಿಸಿತ್ತು. ಆದರೆ ದಿನದಿಂದ ದಿನಕ್ಕೆ ಡಿಜಿಟಲ್ ಪಾವತಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಬ್ಯಾಂಕ್‌ಗಳು ಮತ್ತು ಗೂಗಲ್ ಪೇ, ಫೋನ್ ಪೇ, ಪೇಟಿಎಂ ನಂತಹ ಪಾವತಿ ಸೇವಾ ಪೂರೈಕೆದಾರರಿಗೆ ಸರ್ವರ್ ನಿರ್ವಹಣೆ, ತಂತ್ರಜ್ಞಾನ ನವೀಕರಣ ಹಾಗೂ ಸುರಕ್ಷತಾ ವೆಚ್ಚಗಳನ್ನು ಭರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪಾವತಿ ಸಂಸ್ಥೆಗಳ ಒಕ್ಕೂಟವಾದ 'ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ' ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸುಸ್ಥಿರವಾಗಿಡಲು ಉದ್ಯಮಕ್ಕೆ ಆದಾಯದ ಅಗತ್ಯವಿದೆ ಎಂದು ಸರ್ಕಾರವನ್ನು ನಿರಂತರವಾಗಿ ಕೋರುತ್ತಿತ್ತು. ಪ್ರತಿದಿನ ನಡೆಯುವ ಶೇಕಡ 86ಕ್ಕೂ ಹೆಚ್ಚು ಯುಪಿಐ ಪಾವತಿಗಳು 500 ರೂಪಾಯಿಗಿಂತ ಕಡಿಮೆ ಇರುತ್ತವೆ. 2,000 ರೂಪಾಯಿಗಿಂತ ಹೆಚ್ಚಿನ ಪಾವತಿಗಳು ಒಟ್ಟು ವಹಿವಾಟುಗಳ ಸಂಖ್ಯೆಯಲ್ಲಿ ಶೇಕಡ 4 ರಷ್ಟಿದ್ದರೂ, ಮೌಲ್ಯದ ದೃಷ್ಟಿಯಿಂದ ಇವು ಒಟ್ಟು ವಹಿವಾಟಿನ ಶೇಕಡ 60ಕ್ಕೂ ಹೆಚ್ಚು ಭಾಗವನ್ನು ಒಳಗೊಂಡಿರುತ್ತವೆ.
ಶುಲ್ಕದ ದರ ಎಷ್ಟು ಇರಬೇಕು ಮತ್ತು ಯಾವ ಮಾದರಿಯಲ್ಲಿ ವಿಧಿಸಬೇಕು ಎಂಬ ಬಗ್ಗೆ ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯದ ಹಂತದಲ್ಲಿ ಇನ್ನೂ ಚರ್ಚೆಗಳು ನಡೆಯುತ್ತಿದ್ದು, ಅಂತಿಮ ಅಧಿಕೃತ ಆದೇಶ ಹೊರಬಿದ್ದಿಲ್ಲ. ಅಂತಿಮ ನಿರ್ಧಾರದ ಅಧಿಸೂಚನೆ ಹೊರಬೀಳುವವರೆಗೂ ಪ್ರಸ್ತುತ ಚಾಲ್ತಿಯಲ್ಲಿರುವ ಉಚಿತ ಯುಪಿಐ ಸೇವೆಗಳೇ ಮುಂದುವರಿಯಲಿವೆ.


Click it and Unblock the Notifications
