Scrapping Vehicle: ಗುಜುರಿಗೆ ಹೋಗುವ ವಾಹನಗಳಿಗೆ ಎಷ್ಟು ಹಣ ಸಿಗುತ್ತೆ? ನಿತಿನ್ ಗಡ್ಕರಿ ಮಹತ್ವದ ಮಾಹಿತಿ
ಕೇಂದ್ರ ಸರ್ಕಾರವು ಈ ಬಜೆಟ್‌ನಲ್ಲಿ ವಾಹನ ಗುಜುರಿ ನೀತಿಯನ್ನು (scrapping policy) ಘೋಷಣೆ ಮಾಡಿದೆ. ಇದು ವಾಹನ ಮಾಲೀಕರಿಗೆ ನುಂಗಲಾರದ ತುಪ್ಪವಾಗಿದ್ದು, ನೆಚ್ಚಿನ ವಾಹನಗಳನ್ನು ಗುಜುರಿಗೆ ಕಳಿಸಿ ಕಣ್ಣೀರ ವಿದಾಯ ಹೇಳಬೇಕಾಗಿದೆ. ಇನ್ನು ಗುಜುರಿಗೆ ಸೇರಲಿರೋ ವಾಹನಗಳಿಗೆ ಎಷ್ಟು ಬೆಲೆ ಸಿಗಲಿದೆ ಎಂಬ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
20 ವರ್ಷಗಳನ್ನು ಹಳೆಯದಾದ ಖಾಸಗಿ ವಾಹನಗಳು ಹಾಗೂ 15 ವರ್ಷಗಳನ್ನು ಪೂರೈಸಿರುವ ವಾಣಿಜ್ಯ ವಾಹನಗಳನ್ನು ಗುಜುರಿಗೆ ಹಾಕುವ ನೀತಿ ಇದಾಗಿದೆ. ಇಂತಹ ವಾಹನಗಳ ಫಿಟ್ನೆಸ್ ಪರೀಕ್ಷೆಗೆ ಒಳಪಡಿಸಬೇಕು. ಆಗ ವಾಹನಗಳು ರಸ್ತೆಯಲ್ಲಿ ಸಂಚರಿಸಲು ಯೋಗ್ಯವೇ? ಅಲ್ಲವೇ? ಎಂಬುದನ್ನು ಗುಜುರಿ ನೀತಿ ನಿರ್ಧರಿಸಲಿದೆ. ಇದಕ್ಕಾಗಿ ಹೊಸ ನೀತಿಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಕಳೆದ ವರ್ಷವೇ ಈ ನಿಯಮ ಜಾರಿಯಾಗಲಿದೆ ಎಂದು ಹೇಳಲಾಗಿತ್ತು. ಇನ್ನು ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಲಿಖಿತ ಉತ್ತರ ನೀಡಿದ್ದಾರೆ. ಗುಜುರಿಗೆ ಹೋಗುವ ವಾಹನಕ್ಕೆ ನ್ಯಾಯಯುತ ಬೆಲೆಯನ್ನು ನಿರ್ಧರಿಸಲು ಯಾವುದೇ ಸರ್ಕಾರದ ಮಧ್ಯಸ್ಥಿಕೆ ಇರುವುದಿಲ್ಲ. ಗುಜುರಿಗೆ ಹೋಗುವ ವಾಹನಗಳ ನ್ಯಾಯಯುತ ಬೆಲೆಯನ್ನು ಮಾರುಕಟ್ಟೆಯೇ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ಅಲ್ಲದೆ ಖಾಸಗಿ ಸಂಸ್ಥೆಗಳಾಗಿ ಸ್ಥಾಪಿಸಿರುವ ರಿಸರ್ವ್ ವೆಹಿಕಲ್ ಸ್ಕ್ರ್ಯಾಪಿಂಗ್ ಫೆಸಿಲಿಟಿ (ಆರ್‌ವಿಎಸ್‌ಎಫ್) ಘಟಕಗಳು ವಾಹನಗಳ ಸ್ಥಿತಿಯ ಆಧಾರದ ಮೇಲೆ ಗುಜುರಿ ವಾಹನ ಬೆಲೆಯನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿವೆ ಎಂದೂ ನಿತಿನ್ ಗಡ್ಕರಿ ಹೇಳಿದ್ದಾರೆ. ಇನ್ನು ವಾಹನ ಮಾಲೀಕರಿಗೆ ಪರಿಹಾರ ನೀಡುವಾಗ, ಸರ್ಕಾರಿ ವಾಹನಗಳಿಗೆ ಉಕ್ಕು ಸಚಿವಾಲಯವು ಮೀಸಲು ಬೆಲೆಯನ್ನು ನಿಗದಿಪಡಿಸುತ್ತವೆ. ಖಾಸಗಿ ವಾಹನಗಳ ಸ್ಕ್ರ್ಯಾಪ್ ಮೌಲ್ಯವನ್ನು ಮಾರುಕಟ್ಟೆಯೇ ನಿರ್ಧರಿಸುತ್ತದೆ ಎಂದು ಗಡ್ಕರಿ ವಿವರಿಸಿದ್ದಾರೆ.

ವಾಹನ ಮಾಲೀಕರ ಮೇಲೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು, ವಿಶೇಷವಾಗಿ ಕಡಿಮೆ-ಆದಾಯದ ಹಿನ್ನೆಲೆಯಿರುವ ಮಾಲೀಕರ ಸ್ಕ್ರ್ಯಾಪಿಂಗ್ ವಾಹನಗಳಿಗೆ ಪ್ರೋತ್ಸಾಹವನ್ನು ಕೂಡ ನೀಡಲಾಗುತ್ತದೆ. ಗುಜುರಿಗೆ ಸೇರಿದ ನಂತರ ನೀಡುವ ಠೇವಣಿ ಪ್ರಮಾಣಪತ್ರದೊಂದಿಗೆ ಹೊಸದಾಗಿ ಖರೀದಿಸುವ ವಾಹನಗಳಿಗೆ ನೋಂದಣಿ ಶುಲ್ಕ ಮನ್ನಾ ಆಗಲಿದೆ ಎಂದಿದ್ದಾರೆ.
ಅಲ್ಲದೆ ಹೆಚ್ಚುವರಿಯಾಗಿ ವಾಹನ ತೆರಿಗೆಯಲ್ಲಿ ರಿಯಾಯಿತಿ ಕೂಡ ಸಿಗಲಿದೆ. ಖಾಸಗಿ ವಾಹನಗಳಿಗೆ ಶೇ 25ರಷ್ಟು ಹಾಗೂ ವಾಣಿಜ್ಯ ವಾಹನಗಳಿಗೆ ಶೇ 15ರಷ್ಟು ತೆರಿಗೆ ವಿನಾಯಿತಿಯು ಹೊಸ ವಾಹನವನ್ನು ಖರೀದಿ ವೇಳೆ ಸಿಗಲಿದೆ. ಈ ರಿಯಾಯಿತಿಯು ಸಾರಿಗೆ ವಾಹನಗಳಿಗೆ ಮುಂದಿನ ಎಂಟು ವರ್ಷಗಳವರೆಗೆ ಹಾಗೂ ಸಾರಿಗೆಯೇತರ ವಾಹನಗಳಿಗೆ ಹದಿನೈದು ವರ್ಷಗಳವರೆಗೆ ಲಭ್ಯವಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪರಿಸರಸ್ನೇಹಿ ಕ್ರಮಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೊಸ ವಾಹನಗಳ ವಿಚಾರದಲ್ಲಿ ಪ್ರಧಾನಮಂತ್ರಿ ಎಲೆಕ್ಟ್ರಿಕ್ ಡ್ರೈವ್ ಕ್ರಾಂತಿ (PM E-DRIVE) ಯೋಜನೆಯು ಬರೋಬ್ಬರಿ 10,900 ಕೋಟಿ ರೂಪಾಯಿ ಮೊತ್ತದ ಬಜೆಟ್ ಒಳಗೊಂಡಿದೆ. ಚಾರ್ಜಿಂಗ್ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವ ಗುರಿ ಹೊಂದಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.












Click it and Unblock the Notifications