Union Budget 2025: ಕೇಂದ್ರ ಬಜೆಟ್‌ಗೂ ಮುನ್ನ ನಡೆಯಲಿರುವ ಹಲ್ವಾ ಕಾರ್ಯಕ್ರಮದ ಮಹತ್ವ ತಿಳಿಯಿರಿ
Union Budget 2025: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಹಲ್ವಾ ಕಾರ್ಯಕ್ರಮ ನಡೆಯಲಿದೆ ಹಾಗಾದರೆ ಇದರ ಮಹತ್ವದ ಏನು ಹಾಗೂ ಇದನ್ನಯ ಯಾಕೆ ಮಾಡಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಮೂಲಕ ಅವರು 8ನೇ ಬಾರಿ ಬಜೆಟ್ ಮಂಡಿಸುವ ಕೀರ್ತಿಗೆ ಪಾತ್ರರಾಗಲಿದ್ದಾರೆ. ಈಗಾಗಲೇ ಸಮಾಲೋಚನೆಗಳನ್ನು ಪೂರ್ತಿಗೊಳಿಸಿ ಬಜೆಟ್ ಪ್ರತಿಯನ್ನು ಸಿದ್ಧಪಡಿಸುವುದರ ಕಡೆಗೆ ವಿತ್ತ ಸಚಿವಾಲಯ ಗಮನಹರಿಸಿದೆ.

ಸಾರ್ವಜನಿಕರಿಂದಲೂ ಸಲಹೆ, ಸೂಚನೆಗಳನ್ನು ಆಹ್ವಾನಿಸಲಾಗಿತ್ತು. ಅವೆಲ್ಲವನ್ನೂ ಸಂಗ್ರಹಿಸಿ ಸಚಿವಾಲಯದ ಅಧಿಕಾರಿಗಳು ಅರ್ಹ ಸಲಹೆ ಸೂಚನೆಗಳನ್ನು ಸಚಿವರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ 1ರಂದು ನಡೆಯಲಿದ್ದು, ಈ ಹಿನ್ನೆಲೆ ಅದಕ್ಕೂ ಹಲ್ವಾ ಕಾರ್ಯಕ್ರಮ ಎಂದೇ ಗುರುತಿಸಲ್ಪಟ್ಟ ಹಲ್ವಾ ಹಂಚುವ ಕಾರ್ಯಕ್ರಮವೂ ಆಯೋಜನೆಯಾಗುತ್ತದೆ.
ಹಲ್ವಾ ಕಾರ್ಯಕ್ರಮದ ಮಹತ್ವ: ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗುವ ಮೊದಲು ನಡೆಯುವ ಕಾರ್ಯಕ್ರಮವೇ ಹಲ್ವಾ ಕಾರ್ಯಕ್ರಮ ಆಗಿದೆ. ಇದು ಬಜೆಟ್ ಪ್ರತಿಯನ್ನ ಸಿದ್ಧಪಡಿಸುವುದಕ್ಕೆ ಮುಂಚೆ ಆ ಕೆಲಸದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಸಿಹಿ ತಿನಿಸುವ ಕಾರ್ಯಕ್ರಮ. ಬಳಿಕ ಬಜೆಟ್ ಪ್ರತಿ ಸಿದ್ಧಪಡಿಸುವ ಸಿಬ್ಬಂದಿ ಹೊರ ಜಗತ್ತಿನ ಸಂಪರ್ಕವಿಲ್ಲದಂತೆ ಕೆಲಸ ಮಾಡುತ್ತಾರೆ.
ಹಲ್ವಾ ಕಾರ್ಯಕ್ರಮ ದೀರ್ಘಕಾಲದಿಂದ ನಡೆದುಕೊಂಡು ಬಂದ ಕಾರ್ಯವಾಗಿದೆ. ದೊಡ್ಡ ಬಾಣಲೆಯಲ್ಲಿ ಬಿಸಿಬಿಸಿ ಹಲ್ವಾ ಸಿದ್ಧಪಡಿಸಿ ಸಿಬ್ಬಂದಿಗೆ ಹಂಚಲಾಗುತ್ತದೆ. ಹಣಕಾಸು ಸಚಿವರೇ ಖುದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಅವರೇ ಹಣಕಾಸು ಸಚಿವಾಲಯದ ಸಿಬ್ಬಂದಿಗೆ ಹಲ್ವಾ ಹಂಚುತ್ತಾರೆ. ಹಣಕಾಸು ಸಚಿವಾಲಯ ಇರುವಂತಹ ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಹಲ್ವಾ ಪಡೆದುಕೊಂಡ ಸಿಬ್ಬಂದಿ ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿರುವ ಮುದ್ರಣಾಲಯದಲ್ಲಿ ಬಜೆಟ್ ಪ್ರತಿ ಸಿದ್ದಪಡಿಸಲು ಮುಂದಾಗುತ್ತಾರೆ.
ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಯಾವುದೇ ಸೋರಿಕೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾರ್ತ್ ಬ್ಲಾಕ್ ನೆಲಮಾಳಿಗೆಯನ್ನ ಕೋಟೆಯಾಗಿ ಪರಿವರ್ತಿಸಲಾಗುತ್ತದೆ. ಬಜೆಟ್ ತಯಾರಿಕೆ ಅಥವಾ ಮುದ್ರಣದಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಸುಮಾರು 100 ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಹೊರ ಜಗತ್ತಿನಿಂದ ದೂರ ಉಳಿಯುತ್ತಾರೆ. ಹಣಕಾಸು ಸಚಿವರು ಬಜೆಟ್ ಮಂಡಿಸುವ ತನಕ ಇವರು ಯಾರೂ ಹೊರಗೆ ಬರುವುದಿಲ್ಲ.
ಇಲೆಕ್ಟ್ರಾನಿಕ್ ಜಾಮರ್, ಸೈಬರ್ ಸೆಕ್ಯುರಿಟಿಗಳನ್ನು ಬಳಸಲಾಗುತ್ತದೆ. ಹಣಕಾಸು ಸಚಿವರು ಮಾತ್ರವೇ ಮುದ್ರಣ ಸ್ಥಳಕ್ಕೆ ಬಂದು ಹೋಗಬಹುದು. ಆದರೆ ಮೊಬೈಲ್ ಫೋನ್ ಕೊಂಡೊಯ್ಯುವಂತೆ ಇಲ್ಲ. 1950ನೇ ಇಸವಿಯಲ್ಲಿ ಬಜೆಟ್ ಪ್ರತಿಯ ವಿವರ ಸೋರಿಕೆ ಆದ ಬಳಿಕ ಈ ರೀತಿ ಮುಂಜಾಗ್ರತಾ ಕ್ರಮವನ್ನ ಹಣಕಾಸು ಸಚಿವಾಲಯ ತೆಗೆದುಕೊಳ್ಳುತ್ತಿದೆ. 1980ರಲ್ಲಿ ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿ ಮುದ್ರಣಾಲಯ ಸ್ಥಾಪಿಸಲಾಯಿತು. ಅಲ್ಲಿಂದೀಚೆಗೆ ಇದೇ ಮುದ್ರಣಾಲಯದಲ್ಲಿ ಕೇಂದ್ರ ಬಜೆಟ್ ಪ್ರತಿಗಳ ಮುದ್ರಣ ನಡೆಯುತ್ತದೆ.












Click it and Unblock the Notifications