Union Budget 2024: ಸರ್ಕಾರಿ ನೌಕರರ ನಿರೀಕ್ಷೆಗಳೇನು?-ಮಾಹಿತಿ ತಿಳಿಯಿರಿ
ನವದೆಹಲಿ, ಜನವರಿ, 29: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಇನ್ನು ಬಜೆಟ್‌ನಲ್ಲಿ ಆಯಾ ಕ್ಷೇತ್ರವಾರು ಏನೆಲ್ಲ ಘೋಷಣೆ ಮಾಡಬೇಕು ಎನ್ನುವ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಹಾಗಾದರೆ ಸರ್ಕಾರಿ ನೌಕಕರ ನಿರೀಕ್ಷೆಗಳೇನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಈ ಬಾರಿ ಸಾರ್ವತ್ರಿಕ ಚುನಾವಣೆ ಇರುವುದರಿಂದ ಇದು ಮಧ್ಯಂತರ ಬಜೆಟ್ ಆಗಲಿದೆ. ಚುನಾವಣೆ ಬಳಿಕ ಹೊಸ ಸರ್ಕಾರ ರಚನೆಯಾದ ನಂತರ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು. ಇದು ಮಧ್ಯಂತರ ಬಜೆಟ್ ಆಗಿರುವುದರಿಂದ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡಲಾಗುವುದಿಲ್ಲ. ಆದರೆ ಮತದಾರರನ್ನು ಸೆಳೆಯಲು ಸರ್ಕಾರ ಕೆಲವು ಪ್ರಮುಖ ಘೋಷಣೆಗಳನ್ನು ಮಾಡುವ ಸಾಧ್ಯೆತೆಯಿದೆ ಎಂದು ಹೇಳಲಾಗುತ್ತದೆ.

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗಾಗಿ ಕೆಲವು ಮಹತ್ವದ ಘೋಷಣೆಗಳು ಆಗಲಿವೆ ಎಂದು ಹೇಳಲಾಗುತ್ತಿದೆ. ನೌಕರರ ಬಹುದಿನಗಳ ಮಹತ್ವಾಕಾಂಕ್ಷಿಯ ಬೇಡಿಕೆಗಳಿಗೆ ಸರ್ಕಾರ ಸಮ್ಮತಿ ಸೂಚಿಸಬಹುದು. ಸರ್ಕಾರಿ ನೌಕರರು ಫಿಟ್‌ಮೆಂಟ್ ಅಂಶ ಹೆಚ್ಚಿಸಬೇಕು ಎಂದು ಬಹಳ ದಿನಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಈ ಬೇಡಿಕೆ ಈಡೇರಿದರೆ ನೌಕರರು ಪಡೆಯುವ ಮೂಲ ವೇತನ ಸಹ ಹೆಚ್ಚಳ ಆಗಲಿದೆ.
ಈ ಬಾರಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಫಿಟ್ ಮೆಂಟ್ ಅಂಶ ಹೆಚ್ಚಿಸಲಿದೆ ಎಂಬ ವಿಶ್ವಾಸ ನೌಕರರದ್ದಾಗಿದೆ. ಇದು 2024ರ ಬಜೆಟ್ ನಂತರ ನೌಕರರ ಮೂಲ ವೇತನವನ್ನು ಹೆಚ್ಚಿಸಲಿದೆ ಎನ್ನಲಾಗುತ್ತಿದೆ.
ಬೇಡಿಕೆಗಳ ವಿವರ
* ಫಿಟ್‌ಮೆಂಟ್ ಅಂಶ ಹೆಚ್ಚಳ ಮಾಡುವಂತೆ ನೌಕರರ ಸಂಘಗಳು ತುಂಬಾ ದಿನಗಳಿಂದಲೂ ಸರಕಾರಕ್ಕೆ ಮನವಿ ಮಾಡುತ್ತಲೇ ಬಂದಿವೆ.
* ಸರ್ಕಾರಿ ನೌಕರರ ವೇತನವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಿಗದಿ ಮಾಡಲಾಗಿದೆ.
* ಪ್ರಸ್ತುತ ಫಿಟ್‌ಮೆಂಟ್ ಅಂಶವು ಶೇಕಡಾ 2.57ರಷ್ಟಿದೆ.
* ಈ ಫಿಟ್‌ಮೆಂಟ್ ಅಂಶವನ್ನು 3.68ಕ್ಕೆ ಹೆಚ್ಚಿಸಲು ನೌಕರರ ಸಂಘ ಒತ್ತಾಯ ಮಾಡುತ್ತಿದೆ.
* ಈ ಹೆಚ್ಚಳದಿಂದ ಕನಿಷ್ಟ ವೇತನವನ್ನು 18,000 ರೂಪಾಯಿಂದ 26,000 ರೂಪಾಯಿಗೆ ಹೆಚ್ಚಳ ಆದಂತಾಗುತ್ತದೆ.
* ಕೇಂದ್ರ ಸರ್ಕಾರದ ಮೂಲ ವೇತನವನ್ನು ಲೆಕ್ಕಾಚಾರ ಮಾಡುವ ಸೂತ್ರದಲ್ಲಿ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವ ಮೂಲಕ ಸುಮಾರು 48 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನ ಆಗಲಿದೆ. ಅವರ ಮೂಲ ವೇತನ ಹೆಚ್ಚಾದಂತೆ ಅವರು ಪಡೆಯುವ ಭತ್ಯೆಗಳೂ ಹೆಚ್ಚಳ ಆದಂತಾಗುತ್ತದೆ.
* ಫಿಟ್‌ಮೆಂಟ್ ಅಂಶವನ್ನು ಬದಲಾವಣೆ ಮಾಡಿದಂತೆ ಕೇಂದ್ರ ನೌಕರರು ಬಹಳ ದಿನಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಸರ್ಕಾರದ ಮೂಲಗಳ ಪ್ರಕಾರ, 2024ರ ಚುನಾವಣೆಯ ಮೊದಲು ಅದನ್ನು ಘೋಷಿಸಲು ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಒಂದು ಹೆಚ್ಚಳ ಮಾಡಿದರೆ, ಇದರಿಂದ ಸರ್ಕಾರಿ ನೌಕರರು ಚುನಾವಣೆಗೆ ಮುನ್ನ ಸವಲತ್ತುಗಳನ್ನು ಪಡೆಯಬಹುದಾಗಿದೆ.
* ಇನ್ನು 2024-25ರ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಫಿಟ್‌ಮೆಂಟ್ ಅಂಶದ ಕುರಿತು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಫಿಟ್‌ಮೆಂಟ್ ಅಂಶವು ಶೇಕಡಾ 2.57ರಿಂದ 3 ಅಥವಾ 3.68ಕ್ಕೆ ಹೆಚ್ಚಳ ಆಗುವ ಸಾಧ್ಯತೆ ಇದೆ. ಹೀಗಾದರೆ ಮೂಲ ವೇತನ 8000 ರೂಪಾಯಿಯಷ್ಟು ಹೆಚ್ಚಳವಾಗುತ್ತದೆ. ಅಂದರೆ ಮೂಲ ವೇತನ 18,000ದಿಂದ 26,000 ರೂಪಾಯಿಗೆ ಏರಿಕೆ ಆಗಲಿದೆ. ಆದರೆ, ಇದನ್ನು ಸರ್ಕಾರ ಇನ್ನೂ ದೃಢಪಡಿಸಿಲ್ಲ. ಈ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಫೆಬ್ರವರಿ 1ರವರೆಗೂ ಕಾಯಬೇಕಾಗುತ್ತದೆ.












Click it and Unblock the Notifications