ಕೇಂದ್ರ ಬಜೆಟ್: ರೈಲ್ವೆ ಮೂಲ ಸೌಕರ್ಯಕ್ಕೆ 2030 ರವರೆಗೆ 50 ಲಕ್ಷ ಕೋಟಿ ರೂ.
ನವದೆಹಲಿ, ಜುಲೈ 05: ರೈಲ್ವೇ ಮೂಲಸೌಕರ್ಯ ಅಭಿವೃದ್ಧಿಗೆ 2030 ರವರೆಗೆ 50 ಲಕ್ಷ ಕೋಟಿ ರೂ. ಬಂಡವಾಳದ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಶುಕ್ರವಾರ ಹಣಕಾಸು ಸಚಿವರಾಗಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಅವರು, ಈಗಾಗಲೇ ಪ್ರತಿ ವರ್ಷ ರೈಲ್ವೇ ಮೂಲಸೌಕರ್ಯ ಅಭಿವೃದ್ಧಿಗಾಗಿ 1.4 ರಿಂದ 1.6 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ ಒಂದು ಯೋಜನೆಯನ್ನು ಪೂರ್ಣಗೊಳಿಸಲು ದಶಕಗಳೇ ಬೇಕಾಗುತ್ತಿದೆ. ಆದ್ದರಿಂದ ಇದನ್ನು ಖಾಸಗೀಕರಣಗೊಳಿಸುವುದು ಅನಿವಾರ್ಯ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಇದರೊಟ್ಟಿಗೆ ರಸ್ತೆ ರಸ್ತೆಗಳನ್ನು ಬೆಸೆವ ಭಾರತಮಾಲಾ ಮತ್ತು ನೌಕಾ ಹಾದಿಯನ್ನು ಬೆಸೆವ ಸಾಗರಮಾಲಾ ಯೋಜನೆಯನ್ನೂ ಅಭಿವೃದ್ಧಿಗೊಳಿಸುವುದಾಗಿ ಅವರು ಹೇಳಿದರು.

ಉಡಾನ್ ನಂಥ ಯೋಜನೆಗಳು ಭಾರತದ ಗ್ರಾಮೀಣ ಪ್ರದೇಶಗಳನ್ನು ನಗರ ಪ್ರದೇಶದೊಂದಿಗೆ ಸುಲಭವಾಗಿ ಬೆಸೆವ ಕಾರ್ಯ ಮಾಡುತ್ತಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಲೋಕಸಭೆ ಚುನಾವಣೆಯ ನಂತರ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಇದಾಗಿದ್ದು, 2025 ರ ಹೊತ್ತಿಗೆ ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯ ದೇಶವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.












Click it and Unblock the Notifications