TvK Vijay: 100 ದಿನ ಆಡಳಿತ ಬೆನ್ನಲ್ಲೇ ತಮಿಳುನಾಡು ಸಿಎಂ ವಿಜಯ್ ದಳಪತಿ ವಿರುದ್ಧ 5.54 ಕೋಟಿ ರೂ.ಭ್ರಷ್ಟಾಚಾರ ಸದ್ದು!
TvK Vijay: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಗಂಭೀರ ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿದ್ದಾರೆ. ಹೌದು ತಮಿಳುನಾಡಿನ ಮುಖ್ಯಮಂತ್ರಿ ಕಚೇರಿ ವಿಷಯಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ತಮಿಳುನಾಡಿನಲ್ಲಿ ಇದೇ ಮೊದಲ ಬಾರಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ, ನಟ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ದಳಪತಿ ಅವರ ನೂತನ ಕಚೇರಿಗೆ ಸಂಬಂಧಿಸಿದಂತೆ ಭಾರೀ ಭ್ರಷ್ಟಾಚಾರ ಸದ್ದು ಮಾಡುತ್ತಿದೆ.
ತಮಿಳುನಾಡಿನಲ್ಲಿ ಭ್ರಷ್ಟಾಚಾರವನ್ನು ಕಿತ್ತೆಸೆಯುತ್ತೇನೆ - ಯಾರಾದರೂ ಹಣ ಕೇಳಿದರೆ ನನ್ನ ಹೆಸರು ಹೇಳಿ ಎಂದೂ ವಿಜಯ್ ಅವರು ಹೇಳಿದ್ದರು. ಆದರೆ ಇದೀಗ ಅವರ ಕಚೇರಿಗೆ ಸಂಬಂಧಿಸಿದಂತೆಯೇ ಗಂಭೀರವಾದ ಆರೋಪ ಕೇಳಿ ಬಂದಿದೆ. ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಯಾವಾಗಲೂ ಟಿವಿಕೆ "ಭ್ರಷ್ಟಾಚಾರ ಮುಕ್ತ ಸರ್ಕಾರ" ನೀಡುವ ಗುರಿಯನ್ನು ಹೊಂದಿದ್ದಾರೆ ಎಂದು ಪ್ರತಿಪಾದಿಸಿದ್ದರು. ಆದರೆ, ಇದೀಗ ಹೊಸ ಕಚೇರಿಗೆ ಸ್ಥಳಾಂತರಗೊಳ್ಳುವ ಮೊದಲೇ ವಿಜಯ್ ಅವರ ಯೋಜನೆಯು ಭಾರಿ ವಿವಾದವನ್ನು ಸೃಷ್ಟಿ ಮಾಡಿದೆ. ಇತ್ತೀಚೆಗೆ 100 ದಿನಗಳನ್ನು ಪೂರೈಸಿದ ಸರ್ಕಾರದ ವಿರುದ್ಧ ಬಿಜೆಪಿ ಗಂಭೀರ ಭ್ರಷ್ಟಾಚಾರ ಆರೋಪವನ್ನು ಮಾಡಿದೆ. ಮುಖ್ಯಮಂತ್ರಿಯ ನೂತನ ಕಚೇರಿ ಸ್ಥಳಾಂತರಕ್ಕಾಗಿ ನೀಡಲಾದ 5.54 ಕೋಟಿ ರೂ.ಗಳ ಟೆಂಡರ್‌ನಲ್ಲಿ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಈ ಆರೋಪವನ್ನು ಆಡಳಿತರೂಢ ಟಿವಿಕೆ ನಿರಾಕರಿಸಿದೆ. ಏನಿದು ಯೋಜನೆ ಈ ಭ್ರಷ್ಟಾಚಾರ ಆರೋಪವೇಕೆ ಎನ್ನುವ ವಿವರ ಮುಂದೆ ನೋಡೋಣ.

ತಮಿಳುನಾಡಿ ಮುಖ್ಯಮಂತ್ರಿ ಕಚೇರಿಯನ್ನು (ಸಿಎಂಒ) ಫೋರ್ಟ್ ಸೇಂಟ್ ಜಾರ್ಜ್‌ನ ಮುಖ್ಯ ಬ್ಲಾಕ್‌ನಿಂದ ಪಕ್ಕದ ನಮಕ್ಕಲ್ ಕವಿಂಗರ್ ಮಾಳಿಗೈ ಕಟ್ಟಡಕ್ಕೆ ಸ್ಥಳಾಂತರಿಸುವ ವಿಜಯ್ ಅವರ ಯೋಜನೆ ವಿವಾದವನ್ನು ಸೃಷ್ಟಿಸಿದೆ. ಇದನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ನಿರ್ಮಿಸಿದ್ದರು. ಈ ಸ್ಥಳಾಂತರವು ವೈಯಕ್ತಿಕ ಐಷಾರಾಮಿ ಅಲ್ಲ, ಆದರೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹೆಚ್ಚು ಆರಾಮದಾಯಕ ಮತ್ತು ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುವುದು ಎಂದು ಟಿವಿಕೆ ಹೇಳಿದೆ.
ಆದಾಗ್ಯೂ, ವಿರೋಧ ಪಕ್ಷ ಡಿಎಂಕೆ ಮತ್ತು ಬಿಜೆಪಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಹೊಸ ಕಚೇರಿಯ ಕೆಲಸ ಪ್ರಾರಂಭವಾಗಿದೆ ಎಂದು ಆರೋಪಿಸಿವೆ. ವಾಸ್ತವವಾಗಿ, ನಿರ್ಮಾಣ ಪ್ರಾರಂಭವಾದ ಒಂದು ತಿಂಗಳ ನಂತರ 5.5 ಕೋಟಿ ರೂ.ಗಳ ಟೆಂಡರ್ ಅನ್ನು ಕರೆಯಲಾಗಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ವಿಜಯ್ ಸರ್ಕಾರದ ಹೊಸ ಕಚೇರಿಯ ಮೇಲಿನ ಆರೋಪವೇನು?
ತಮಿಳುನಾಡು ಸರ್ಕಾರದಲ್ಲಿನ ಭ್ರಷ್ಟಾಚಾರ ನಡೆದಿದೆ ಎನ್ನುವುದು ಬಿಜೆಪಿಯ ಆರೋಪವಾಗಿದೆ. ತಮಿಳುನಾಡಿನ ಸಿಎಂ ಸಿ. ಜೋಸೆಫ್ ವಿಜಯ್, ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ, ಅವರು ತಮ್ಮ ಕಚೇರಿಯನ್ನು ಮತ್ತೊಂದು ಕಟ್ಟಡವಾದ ನಮಕ್ಕಲ್ ಕವಿಗ್ನರ್ ಮಾಲಿಗೈಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ ಈ ಉದ್ದೇಶಕ್ಕಾಗಿ, ಅವರು ಒಂದು ಸಂಪೂರ್ಣ ಮಹಡಿಯನ್ನು ಅಂದರೆ 10 ನೇ ಮಹಡಿಯನ್ನು ಮೀಸಲಿಟ್ಟಿದ್ದಾರೆ. ನವೀಕರಣ ಕಾರ್ಯವನ್ನು ಕೈಗೊಳ್ಳಲು ಅವರು ಪಿಡಬ್ಲ್ಯೂಡಿ ಇಲಾಖೆಗೆ ತಿಳಿಸಿದ್ದಾರೆ. ಈ ಕೆಲಸ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದೆ.
ಆದರೆ ಇದ್ದಕ್ಕಿದ್ದಂತೆ, ಆಗಸ್ಟ್ 12ರಂದು ಲೋಕೋಪಯೋಗಿ ಇಲಾಖೆ (PWD) ಸಿಎಂ ಕಚೇರಿಗೆ ಮೂರು ಬ್ಲಾಕ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್‌ನ್ನು ಸಲ್ಲಿಸಿದೆ. ಎಲ್ಲವನ್ನೂ ಸೇರಿಸಿ ಈ ಟೆಂಡರ್‌ನ ಒಟ್ಟು ಮೌಲ್ಯ 5.54 ಕೋಟಿ ರೂ. ಆಗಿದೆ. ಈಗ ಪ್ರಶ್ನೆ ಏನೆಂದರೆ ಕೆಲಸ ಈಗಾಗಲೇ ಆರಂಭವಾಗಿದ್ದು, PWDಯ ಅಧಿಕೃತ ಎಂಜಿನಿಯರ್‌ಗಳ ಮೇಲ್ವಿಚಾರಣೆಯಲ್ಲೇ ನಡೆಯುತ್ತಿರುವಾಗ, ಒಂದು ತಿಂಗಳ ನಂತರ ಈ ಟೆಂಡರ್‌ನ್ನು ಏಕೆ ಕರೆಯಲಾಯಿತು ಎಂದು ಬಿಜೆಪಿ ಪ್ರಶ್ನಿಸಿದೆ.


Click it and Unblock the Notifications
