ರೈಲು ಪ್ರಯಾಣ ದರ ಮತ್ತೆ ಹೆಚ್ಚಳ, ಯಾವುದಕ್ಕೆ ಎಷ್ಟು ಇಲ್ಲಿದೆ ವಿವರ
ನವ ದೆಹಲಿ: ಭಾರತೀಯ ರೈಲ್ವೆಯು ದೇಶದ ರೈಲು ಪ್ರಯಾಣಿಕರಿಗೆ ಮತ್ತೊಮ್ಮೆ ಶಾಕ್ ಕೊಡುವುದಕ್ಕೆ ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ರೈಲು ಪ್ರಯಾಣ ದರ, ಟಿಕೆಟ್ ರದ್ದು ಸೇರಿದಂತೆ ಹಲವು ಬದಲಾವಣೆಗಳು ಆಗಿವೆ. ಬೆಲೆ ಹೆಚ್ಚಳ ಹಾಗೂ ಶುಲ್ಕ ಕಡಿತ ಪ್ರಮಾಣ ಹೆಚ್ಚಳ ಸೇರಿದಂತೆ ಜನ ಸಾಮಾನ್ಯರು ಹಾಗೂ ಬಡವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ರೀತಿ ಇರುವಾಗಲೇ ಮತ್ತೊಮ್ಮೆ ರೈಲು ಟಿಕೆಟ್ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅದೂ ಸಹ ವರ್ಷಾಂತ್ಯದಲ್ಲಿ ಹೆಚ್ಚು ಜನ ಪ್ರಯಾಣ ಮಾಡುವ ಸಂದರ್ಭದಲ್ಲಿಯೇ ಆಗುತ್ತಿದೆ.
ಭಾರತೀಯ ರೈಲ್ವೆಯು ಇದೇ ಡಿಸೆಂಬರ್ 26ರಿಂದ ರೈಲು ಪ್ರಯಾಣ ದರಗಳನ್ನು ಹೆಚ್ಚಳ ಮಾಡುವುದಾಗಿ ಹೇಳಿದೆ. ಇದರಿಂದ ದೂರದ ಊರುಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಟಿಕೆಟ್ ಬೆಲೆ ದುಬಾರಿ ಆಗಲಿದೆ. ಈ ಪರಿಷ್ಕರಣೆಯು ದೀರ್ಘ ಪ್ರಯಾಣ ಮತ್ತು ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಪ್ರಯಾಣ ಮಾಡುವವರಿಗೆ ಸಣ್ಣ ಪ್ರಮಾಣದ ಬೆಲೆ ಏರಿಕೆ ಆಗಲಿದೆ. ಆದರೆ ಉಪನಗರ ಮತ್ತು ಅಲ್ಪ-ದೂರದ ರೈಲು ದರಗಳಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡಿಲ್ಲ.

ರೈಲಿನಲ್ಲಿ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಬೇಕು ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಬೆಲೆ ಏರಿಕೆಯನ್ನು ಮಾಡಲಾಗಿದೆ. ಅಲ್ಲದೇ ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚವನ್ನು ಸಮತೋಲನಗೊಳಿಸುವ ಗುರಿಯನ್ನು ಸಹ ಹಾಕಿಕೊಂಡಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಪ್ರಯಾಣ ದರ / ಟಿಕೆಟ್ ಬೆಲೆ ಎಷ್ಟು ಹೆಚ್ಚಳ
ಇನ್ನು ರೈಲಿನಲ್ಲಿ 215 ಕಿ.ಮೀ. ಮೀರಿದ ಸಾಮಾನ್ಯ ವರ್ಗದ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದೆ. ಇದರರ್ಥ ಹೆಚ್ಚಿನ ದೂರದ ಪ್ರಯಾಣಿಕರಿಗೆ ಹೆಚ್ಚಳವು ಕನಿಷ್ಠವಾಗಿರುತ್ತದೆ. ಮೇಲ್ ಮತ್ತು ಎಕ್ಸ್‌ಪ್ರೆಸ್ ಎಸಿ ಅಲ್ಲದ ರೈಲುಗಳಲ್ಲಿ, ದರಗಳು ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಳವಾಗಲಿದೆ. ಎಸಿ ಕೋಚ್‌ಗಳ ದರಗಳು ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಎಸಿ ಅಲ್ಲದ ಕೋಚ್‌ನಲ್ಲಿ 500 ಕಿ.ಮೀ ಪ್ರಯಾಣಿಸುವ ಪ್ರಯಾಣಿಕರು ಕೇವಲ 10 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ ಎಂದು ದರ ಏರಿಕೆ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಉಪನಗರ ಮತ್ತು ಸಮೀಪದ ಪ್ರಯಣ ದರಗಳ ಬದಲಾವಣೆ ಇಲ್ಲ
ದೈನಂದಿನ ಪ್ರಯಾಣಿಕರಿಗೆ ಪರಿಹಾರ ನೀಡುವ ಉಪನಗರ ರೈಲು ಸೇವೆಗಳು ಅಥವಾ ಮಾಸಿಕ ಟಿಕೆಟ್‌ಗಳ ದರಗಳಲ್ಲಿ ಯಾವುದೇ ಹೆಚ್ಚಳವಿರುವುದಿಲ್ಲ. 215 ಕಿಲೋಮೀಟರ್‌ಗಳವರೆಗಿನ ಸಾಮಾನ್ಯ ವರ್ಗದ ಪ್ರಯಾಣ / ಟಿಕೆಟ್ ದರವು ಯಥಾಸ್ಥಿತಿಯಲ್ಲಿ ಉಳಿಯಲಿವೆ. ನಿಯಮಿತ ಮತ್ತು ಕಡಿಮೆ ಆದಾಯದ ಪ್ರಯಾಣಿಕರಿಗೆ ಕೈಗೆಟುಕುವ ದರವನ್ನು ಖಚಿತಪಡಿಸಿಕೊಳ್ಳಲು ಈ ಮಾದರಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ರೈಲ್ವೆ ತಿಳಿಸಿದೆ.
ಹೆಚ್ಚುತ್ತಿರುವ ವೆಚ್ಚ ಸರಿದೂಗಿಸಲು ಈ ಕ್ರಮ
ಭಾರತೀಯ ರೈಲ್ವೆಯು ಬೆಲೆ ಏರಿಕೆಗೆ ಏನು ಕಾರಣ ಎನ್ನುವುದನ್ನೂ ತಿಳಿಸಿದೆ. ರೈಲ್ವೆ ಇಲಾಖೆಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 600 ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ. ಇತ್ತೀಚಿನ ವರ್ಷಗಳಲ್ಲಿ ಕಾರ್ಯಾಚರಣೆಯ ವೆಚ್ಚಗಳು ತೀವ್ರವಾಗಿ ಏರಿವೆ. ನಿರ್ವಹಣೆ ವೆಚ್ಚ (ಅಧಿಕಾರಿ, ಸಿಬ್ಬಂದಿ ಮತ್ತು ಸ್ವಚ್ಛತಾ ಸಿಬ್ಬಂದಿ ವೇತನ) 1.15 ಲಕ್ಷ ಕೋಟಿ ರೂ.ಗಳಿಗೆ ಏರಿವೆ. ಆದರೆ ಪಿಂಚಣಿ ವೆಚ್ಚಗಳು ಈಗ 60,000 ಕೋಟಿ ರೂ.ಗಳಷ್ಟಿವೆ. 2024-25ರಲ್ಲಿ ಕಾರ್ಯಾಚರಣೆಯ ಒಟ್ಟು ವೆಚ್ಚವು 2.63 ಲಕ್ಷ ಕೋಟಿ ರೂ.ಗಳನ್ನು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಜಾಲದ ವಿಸ್ತರಣೆ ಮತ್ತು ಸುರಕ್ಷತೆಯನ್ನು ಸುಧಾರಿಸುವ ಪ್ರಯತ್ನಗಳಿಗೆ ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇದೆ. ಹೀಗಾಗಿ ಅನಿವಾರ್ಯ ಕಾರಣಗಳಿಗೆ ರೈಲು ಟಿಕೆಟ್ ದರ ಹೆಚ್ಚಳ ಮಾಡಿರುವುದಾಗಿ ತಿಳಿಸಲಾಗಿದೆ. ಹೆಚ್ಚಿನ ವೆಚ್ಚಗಳನ್ನು ನಿರ್ವಹಿಸಲು, ರೈಲ್ವೆ ಸೀಮಿತ ಪ್ರಯಾಣಿಕರ ದರ ಪರಿಷ್ಕರಣೆ ಮಾಡುವುದರೊಂದಿಗೆ ಸರಕು ಲೋಡಿಂಗ್ ಅನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದೆ. ಈ ಕ್ರಮಗಳು ಕಾರ್ಯಾಚರಣೆಯ ದಕ್ಷತೆ ಮತ್ತು ಸುರಕ್ಷತಾ ಮಾನದಂಡಗಳನ್ನು ಸುಧಾರಿಸಲು ಸಹಾಯ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications