ತಿರುಮಲದಲ್ಲಿ ಪ್ರತಿದಿನ ಭಗವಂತನಿಗೆ ಅರ್ಪಿಸುವ ಮೊದಲ ಪ್ರಸಾದ ಯಾವುದು? ಅದನ್ನು ತಯಾರಿಸುವ ಬಗೆ ಹೇಗೆ?
ತಿರುಪತಿ ತಿರುಮಲ ದೇವಾಲಯವನ್ನು ಭೂಮಿಯ ಮೇಲಿನ ವೈಕುಂಠ ಎಂದೇ ಕರೆಯಲಾಗುತ್ತದೆ. ಇಲ್ಲಿ ವೆಂಕಟೇಶ್ವರ ದರ್ಶನಕ್ಕೆ ಪ್ರತಿ ದಿನ ಲಕ್ಷಾಂತರ ಭಕ್ತರು ಬರುತ್ತಾರೆ. ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಾರೆ. ಇಲ್ಲಿ ಪ್ರತಿ ನಿತ್ಯ ದೆವರಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯುತ್ತವೆ. ತಿರುಪತಿ ತಿರುಮಲ ದೇವಸ್ಥಾನದಲ್ಲಿ ನಡೆಯುವ ಪ್ರತಿಯೊಂದು ಆಚರಣೆ ಮತ್ತು ಪ್ರತಿಯೊಂದು ಸೇವೆಯು ಕೂಡಾ ವಿಶೇಷ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಅವುಗಳಲ್ಲಿ, ಭಗವಂತನಿಗೆ ಮೊದಲು ಅರ್ಪಿಸುವ ನೈವೇದ್ಯವಾದ "ನವನೀತ ಪ್ರಸಾದ"ವು ಬಹಳ ವಿಶೇಷವಾಗಿದೆ.
ತಿರುಮಲ ದೇವಸ್ಥಾನದಲ್ಲಿ ಎಲ್ಲಾ ಪೂಜಾ ಕಾರ್ಯಕ್ರಮಗಳನ್ನು ವೈಖಾನಸ ಆಗಮ ಶಾಸ್ತ್ರದ ಪ್ರಕಾರ ನಡೆಸಲಾಗುತ್ತದೆ. ಈ ಶಾಸ್ತ್ರದ ನಿಯಮಗಳ ಪ್ರಕಾರ ಪ್ರತಿದಿನ ಬೆಳಿಗ್ಗೆ ಭಗವಂತನಿಗೆ ಹಾಲು ಮತ್ತು ನವನೀತವನ್ನು ಅರ್ಪಿಸುವ ಸಂಪ್ರದಾಯವು ಶತಮಾನಗಳಿಂದ ನಡೆದುಕೊಂಡು ಬಂದಿದೆ.

ಭಗವಂತನಿಗೆ ಮೊದಲ ನೈವೇದ್ಯ:
ಪ್ರತಿದಿನ ಬೆಳಿಗ್ಗೆ, ಸುಪ್ರಭಾತ ಸೇವೆ ಪೂರ್ಣಗೊಂಡ ನಂತರ, ಗರ್ಭಗುಡಿಯ ಬಾಗಿಲುಗಳನ್ನು ತೆರೆಯಲಾಗುತ್ತದೆ. ಶುದ್ಧೀಕರಣ ಕಾರ್ಯವನ್ನು ನಡೆಸಲಾಗುತ್ತದೆ. ಇದರ ನಂತರ, ಭಗವಂತನಿಗೆ ಮೊದಲ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಇದನ್ನು "ಬಾಲ ಭೋಗ" ಎಂದೂ ಕರೆಯುತ್ತಾರೆ. ಇದರಲ್ಲಿ, ಶುದ್ಧ ಹಸುವಿನ ಹಾಲು, ಹಾಗೆಯೇ ನವನೀತ, ಅಂದರೆ ತಾಜಾ ಬೆಣ್ಣೆಯನ್ನು ಅರ್ಪಿಸಲಾಗುತ್ತದೆ. ಕಲಿಯುಗದ ಜೀವಂತ ದೇವರು ಶ್ರೀ ವೆಂಕಟೇಶ್ವರ ಸ್ವಾಮಿ, ದ್ವಾಪರ ಯುಗದಲ್ಲಿ ಅವತರಿಸಿದ ಶ್ರೀಕೃಷ್ಣನ ರೂಪ ಎಂಬ ನಂಬಿಕೆಯಿದೆ. ಈ ಕಾರಣದಿಂದಲೇ ಈ ನವನೀತವನ್ನು ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಲಾಗುತ್ತದೆ. ಕೃಷ್ಣನಿಗೆ ಬಾಲ್ಯದಲ್ಲಿ ಬೆಣ್ಣೆ ಎಂದರೆ ತುಂಬಾ ಇಷ್ಟ. ಮುದ್ದು ಕೃಷ್ಣನ ನೆನಪಿಗಾಗಿ ಈ ಪದ್ಧತಿಯನ್ನು ಇಲ್ಲಿ ಇನ್ನು ಕೂಡಾ ಮುಂದುವರಿಸಿಕೊಂಡು ಬರಲಾಗಿದೆ.
ನವನೀತ ಪ್ರಸಾದ ತಯಾರಿಸುವ ವಿಧಾನ:
ನವನೀತ ಪ್ರಸಾದ ತಯಾರಿಕೆಯೂ ಸಹ ಅತ್ಯಂತ ಪವಿತ್ರ ಮತ್ತು ಸಾಂಪ್ರದಾಯಿಕವಾಗಿದೆ. ಸಾಮಾನ್ಯ ಪ್ರಸಾದಗಳಿಗಿಂತ ಭಿನ್ನವಾಗಿ, ಇದಕ್ಕಾಗಿ ವಿಶೇಷ ವಿಧಾನವನ್ನು ಅನುಸರಿಸಲಾಗುತ್ತದೆ. ತಿರುಮಲದ ಶ್ರೀ ವೆಂಕಟೇಶ್ವರ ಗೋಶಾಲೆಯಲ್ಲಿ ಸಾಕಲಾದ ದೇಶೀಯ ಹಸುಗಳಿಂದ ಸಂಗ್ರಹಿಸಿದ ಹಾಲನ್ನು ಮಾತ್ರ ಇದಕ್ಕಾಗಿ ಬಳಸಲಾಗುತ್ತದೆ. ಈ ಹಾಲನ್ನು ಮೊಸರಾಗಿ ಪರಿವರ್ತಿಸಲಾಗುತ್ತದೆ. ನಂತರ ಯಾವುದೇ ವಿದ್ಯುತ್ ಯಂತ್ರೋಪಕರಣಗಳ ಬಳಕೆಯಿಲ್ಲದೆ ಸಾಂಪ್ರದಾಯಿಕ ಮಂಥನದೊಂದಿಗೆ ಕೈಯಿಂದಲೇ ಬೆಣ್ಣೆಯನ್ನು ತೆಗೆಯಲಾಗುತ್ತದೆ. ಈ ಪ್ರಕ್ರಿಯೆಯನ್ನು ಮಣ್ಣಿನ ಮಡಿಕೆಗಳು ಅಥವಾ ಸಾಂಪ್ರದಾಯಿಕ ಬಟ್ಟಲುಗಳಲ್ಲಿ ಮಾಡಲಾಗುತ್ತದೆ.
ನವನೀತ ಸೇವೆ ಆರಂಭ:
ಈ ಸೇವೆಗಾಗಿ ಟಿಟಿಡಿ ವಿಶೇಷವಾಗಿ "ನವನೀತ ಸೇವೆ"ಯನ್ನು ಪ್ರಾರಂಭಿಸಿದೆ. ಆನ್‌ಲೈನ್‌ನಲ್ಲಿ ಆಯ್ಕೆಯಾದ ಮಹಿಳಾ ಭಕ್ತರು ಬೆಳಿಗ್ಗೆ ಬೇಗನೆ ಗೋಶಾಲೆಗೆ ತಲುಪಿ ಗೋವಿಂದನ ನಾಮ ಸ್ಮರಣೆ ಮಡುತ್ತಾ ಭಕ್ತಿಯಿಂದ ಬೆಣ್ಣೆಯನ್ನು ತಯಾರಿಸುತ್ತಾರೆ. ಹೀಗೆ ತಯಾರಿಸಿದ ಶುದ್ಧ, ಬಿಳಿ ಬೆಣ್ಣೆಗೆ ಸ್ವಲ್ಪ ಕಲ್ಲು ಸಕ್ಕರೆ ಅಥವಾ ಸಕ್ಕರೆಯನ್ನು ಸೇರಿಸಲಾಗುತ್ತದೆ. ನಂತರ ಅದನ್ನು ಬೆಳ್ಳಿಯ ಪಾತ್ರೆಯಲ್ಲಿ ಇರಿಸಿ ತುಳಸಿ ಎಲೆಗಳಿಂದ ಅಲಂಕರಿಸಲಾಗುತ್ತದೆ.
ನಂತರ, ಶುಭ ವಾದ್ಯಗಳು ಮತ್ತು ಶಂಖಗಳ ನಾದದ ನಡುವೆ, ಈ ನವನೀತ ಪ್ರಸಾದವನ್ನು ಗೋಶಾಲೆಯಿಂದ ದೇವಾಲಯದ ಗರ್ಭಗುಡಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಅಲ್ಲಿ, ಭಗವಂತನಿಗೆ ಅರ್ಪಿಸಿದ ನಂತರ, ಅದನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಸಾಮಾನ್ಯವಾಗಿ, ಈ ಪ್ರಸಾದವನ್ನು ವೀಳ್ಯದ ಎಲೆಯಲ್ಲಿ ವಿತರಿಸಲಾಗುತ್ತದೆ. ಈ ನವನೀತ ಪ್ರಸಾದವನ್ನು ಸ್ವೀಕರಿಸುವುದು ತುಂಬಾ ಶುಭ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.
ತಿರುಮಲದಲ್ಲಿ ಈ ಸಂಪ್ರದಾಯವು ಕೇವಲ ನೈವೇದ್ಯ ಅರ್ಪಿಸುವ ಆಚರಣೆಯಲ್ಲ. ಇದು ಶ್ರೀಕೃಷ್ಣನ ಬಾಲ್ಯದ ಲೀಲೆಗಳನ್ನು ನೆನಪಿಸುವ ಪವಿತ್ರ ಪೂಜೆಯಾಗಿದೆ. ಗೋಮಾತೆಯ ಮೇಲಿನ ಗೌರವ, ಸಂಪ್ರದಾಯಗಳ ಸಂರಕ್ಷಣೆ, ಭಕ್ತಿ ಮತ್ತು ಆಗಮ ಶಾಸ್ತ್ರದ ಸಂಪ್ರದಾಯ ಎಲ್ಲವೂ ಸೇರಿ ನವನೀತ ಸೇವೆಯನ್ನು ತಿರುಮಲದಲ್ಲಿ ಅತ್ಯಂತ ವಿಶಿಷ್ಟ ಸೇವೆಗಳಲ್ಲಿ ಒಂದನ್ನಾಗಿ ಮಾಡುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications