Tirupati: ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಹೈ - ಅಲರ್ಟ್: ತಿರುಪತಿ ತಿರುಮಲ ಭಕ್ತಾದಿಗಳಿಗೆ ಸಂಕಷ್ಟ! Imd Weather Forecast
Imd Weather Forecast: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಭಾರೀ ಅಲರ್ಟ್ ಘೋಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಆಳವಾದ ವಾಯುಭಾರ ಕುಸಿತದಿಂದಾಗಿ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತದ ಪ್ರಭಾವ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಅಲ್ಲದೇ ಭಾರೀ ಮಳೆಯಿಂದಾಗಿ ತಿರುಪತಿ ತಿರುಮಲ ದೇವಸ್ಥಾನ ಪ್ರದೇಶದಲ್ಲಿ ಸಂಕಷ್ಟ ಎದುರಾಗಿದೆ. ಭಾರೀ ಮಳೆಯಿಂದಾಗಿ ಈ ಭಾಗದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ದೇಶದ ವಿವಿಧ ರಾಜ್ಯಗಳ ಮೇಲೆ ವಾಯುಭಾರ ಕುಸಿತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಭಾರೀ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನೂ ಸೈಕ್ಲೋನ್ ಪ್ರಭಾವದಿಂದ ಆಂಧ್ರಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ಅಲರ್ಟ್ ಆಗಿರುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿ ಈಚೆಗೆ ಸುರಿದ ಮಳೆಯಿಂದ ಭಾರೀ ಅನಾಹುತ ಸಂಭವಿಸಿತ್ತು. ಇದೀಗ ಮತ್ತೆ ಭಾರೀ ಮಳೆಯ ಆತಂಕ ಶುರುವಾಗಿದೆ.
ವಾಯುಭಾರ ಕುಸಿತವು ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಕಡೆಗೆ ಚಲಿಸುತ್ತಿದ್ದು, ಗುರುವಾರ ಬೆಳಿಗ್ಗೆ ವೇಳೆಗೆ ಅದು ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದೆ ಎಂದು ಐಎಂಡಿಯ ಹವಾಮಾನ ಬುಲೆಟಿನ್ ತಿಳಿಸಿದೆ. ಪ್ರಕಾಶಂ, ವೈಎಸ್ಆರ್ ಕಡಪ, ಎಸ್ಪಿಎಸ್ ನೆಲ್ಲೂರು, ಅನ್ನಮಯ್ಯ, ತಿರುಪತಿ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಕರ್ನೂಲ್, ನಂದ್ಯಾಲ್, ಅನಂತಪುರ ಹಾಗೂ ಶ್ರೀ ಸತ್ಯ ಸಾಯಿ ಜಿಲ್ಲೆಗಳಲ್ಲೂ ಮಳೆ ಆರ್ಭಟ ಇರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು ಆಂಧ್ರಪ್ರದೇಶದ ಪಲ್ನಾಡು ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ರಾಯಲಸೀಮಾ ಮತ್ತು ಕರಾವಳಿ ಆಂಧ್ರದ ಕೆಲವು ಭಾಗಗಳಲ್ಲಿ ಹಠಾತ್ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ, ಈ ಭಾಗದಲ್ಲಿ ಭಾರೀ ಎಚ್ಚರಿಕೆ ನೀಡಲಾಗಿದೆ. ಆಂಧ್ರಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಮುಂದುವರಿದಿದೆ.
ತಿರುಪತಿ ತಿರುಮಲ ದೇವಸ್ಥಾನದಲ್ಲಿ ಸಂಕಷ್ಟ: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಾರೀ ಮಳೆಯಿಂದಾಗಿ ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಚರಂಡಿಗಳು ತುಂಬಿ ಹರಿಯುತ್ತಿದ್ದು, ಮ್ಯಾನ್‌ಹೋಲ್‌ಗಳು ಹಾನಿಗೊಳಗಾಗಿವೆ. ಇದರಿಂದ ನಿವಾಸಿಗಳು ಹಾಗೂ ಭಕ್ತಾದಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ವೆಂಕಟೇಶ್ವರ ಸ್ವಾಮಿ ವಾಸಸ್ಥಾನವಾದ ತಿರುಮಲದಲ್ಲಿಯೂ ಸಹ ಭಾರಿ ಮಳೆಯಾಗಿದ್ದು, ಭಕ್ತರು ದರ್ಶನ ಸರತಿ ಸಾಲುಗಳು ಮತ್ತು ಕೌಂಟರ್‌ಗಳನ್ನು ತಲುಪಲು ಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳು ಪಾಪವಿನಾಶನಂ, ಆಕಾಶ ಗಂಗಾ, ಶ್ರೀವರಿ ಮೆಟ್ಟಿಲುಗಳು ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ನಿರಂತರ ಮಳೆಯಿಂದಾಗಿ ಭೂಕುಸಿತವಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ಭಕ್ತಾದಿಗಳ ಸುರಕ್ಷತೆಯ ದೃಷ್ಟಿಯಿಂದ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications