ಸಂಸದೀಯ ಸ್ಥಾಯಿ ಸಮಿತಿಗೆ 'ವೈದ್ಯಕೀಯ ಆಯೋಗ ಮಸೂದೆ': ಅನಂತ್ ಕುಮಾರ್
ನವದೆಹಲಿ, ಜನವರಿ 2: ವೈದ್ಯಕೀಯ ಆಯೋಗ ಮಸೂದೆ (ಎನ್ಎಂಸಿ) ಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗುವುದು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ದೇಶದಾದ್ಯಂತ ವೈದ್ಯಕೀಯ ಆಯೋಗ ಮಸೂದೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ನೇತೃತ್ವದಲ್ಲಿ ವೈದ್ಯರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರದಾದ್ಯಂತ ಒಪಿಡಿಗಳನ್ನು ಮುಚ್ಚಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದೀಗ ವೈದ್ಯರ ಮುಷ್ಕರಕ್ಕೆ ತಲೆಬಾಗಿರುವ ಕೇಂದ್ರ ಸರಕಾರ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ನೀಡಲು ಒಪ್ಪಿಕೊಂಡಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಸೋಮವಾರ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, 'ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ'ದ ಬದಲು ಬೇರೆ ಸಂಸ್ಥೆ ಸ್ಥಾಪಿಸಲು ಈ ಮಸೂದೆ ಮಂಡಿಸಲಾಗುತ್ತಿದೆ. ಇದರಿಂದ ಹಲವು ಸಮಸ್ಯೆಗಳು ಎದುರಾಗಲಿವೆ ಎಂದಿದ್ದರು. ಈ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ವರ್ಗಾಯಿಸುವಂತೆ ಅವರು ಆಗ್ರಹಿಸಿದ್ದರು.
'ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ'ದ ಬದಲು ಪಾರದರ್ಶಕತೆಗಾಗಿ ಬೇರೆಯದೇ ಸಂಸ್ಥೆಯನ್ನು ತೆರೆಯಲು ಕೇಂದ್ರ ಸರಕಾರ ಕೆಲವು ದಿನಗಳ ಹಿಂದೆ ಲೋಕಸಭೆಯಲ್ಲಿ ಈ ಮಸೂದೆ ಮಂಡಿಸಿತ್ತು. ಈ ಮಸೂದೆ ಪ್ರಕಾರ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ವೈದ್ಯರು ತಾವು ವೃತ್ತಿ ಆರಂಭಿಸುವ ಮೊದಲು 'ಬ್ರಿಡ್ಜ್ ಕೋರ್ಸ್' ಮಾಡಬೇಕಾಗಿದೆ.
ಈ ಮಸೂದೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲಿದೆ ಎಂದುಕೊಳ್ಳಲಾಗಿದೆ. ಈಗಾಗಲೇ ವೈದ್ಯಕೀಯ ಶಿಕ್ಷಣ ಕ್ಷೇತ್ರ ಭ್ರಷ್ಟಾಚಾರ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂಬ ದೂರಿನ ನಡುವೆ ಈ ಮಸೂದೆಯನ್ನು ಮಂಡಿಸಲಾಗಿದೆ.












Click it and Unblock the Notifications