Madhya Pradesh: ಕೆಲಸ ಕೊಟ್ಟಿದ್ದು 21, ನಿರ್ವಹಣೆ ಖರ್ಚು 16.74 ಕೋಟಿ! ಇದು ಶಿವರಾಜ್ ಸಿಂಗ್ ಚೌಹಾಣ್ ಸರಕಾರದ 'ಮಹಾಗಣಿತ'
ಸರಕಾರೀ ಕೆಲಸಕ್ಕಾಗಿ ನೊಂದಾಯಿಸಿದವರು 39 ಲಕ್ಷ ನಿರುದ್ಯೋಗಿಗಳು, 23 ವರ್ಷದಲ್ಲಿ ಸರಕಾರ ಕೆಲಸ ಕೊಟ್ಟಿದ್ದು 21 ಪುರುಷರಿಗೆ ಮಾತ್ರ. ಆದರೆ, ಕಚೇರಿ ನಿರ್ವಹಣೆಗೆ ತಗಲಿದ ಖರ್ಚು ಬೆಚ್ಚಿ ಬೀಳಿಸುವಂತಿದೆ. ಇಲ್ಲಿದೆ ವರದಿ..
ಭೋಪಾಲ್, ಮಾರ್ಚ್ 15: ಸರಕಾರೀ ಕೆಲಸಕ್ಕಾಗಿ ನೊಂದಾಯಿಸಿದವರು 39 ಲಕ್ಷ ನಿರುದ್ಯೋಗಿಗಳು, 23 ವರ್ಷದಲ್ಲಿ ಸರಕಾರ ಕೆಲಸ ಕೊಟ್ಟಿದ್ದು 21 ಪುರುಷರಿಗೆ ಮಾತ್ರ. ಆದರೂ ಪ್ರಣಾಳಿಕೆಯಲ್ಲಿ ಹೇಳಿದ್ದನ್ನೆಲ್ಲಾ ಮಾಡಿದ್ದೇವೆ ಎನ್ನುತ್ತಿದ್ದಾರೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್.
ಈ ಲೆಕ್ಕಾಚಾರವನ್ನು ನೀಡಿದವರು ಶಿವರಾಜ್ ಸಿಂಗ್ ಸರಕಾರವೇ.. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ಸಿನ ಮೇವರಾಂ ಜಾತವ್ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಸ್ಪಷ್ಟನೆಗೆ ಸರಕಾರದಿಂದ ಬಂದ ಉತ್ತರವಿದು. ರಾಜ್ಯದ 52 ಜಿಲ್ಲೆಗಳಲ್ಲಿನ ಸರಕಾರೀ ಉದ್ಯೋಗ ಕಚೇರಿಯ ನಿರ್ವಹಣೆಯ ಖರ್ಚು ಕೋಟಿ ಕೋಟಿ ಮಾತ್ರ ತೆರಿಗೆ ಪಾವತಿದಾರರ ಮೇಲೆ ಬೀಳುತ್ತಿದೆ.

ಸರಕಾರ ನೀಡಿದ ಅಂಕಿಅಂಶದ ಪ್ರಕಾರ, ಉದ್ಯೋಗ ಕಚೇರಿಗಳನ್ನು ನಿರ್ವಹಿಸಲು ಸುಮಾರು 16.74 ಕೋಟಿ ಖರ್ಚು ಮಾಡಲಾಗಿದೆ. ಅಲ್ಲಿ 37,80,679 ವಿದ್ಯಾವಂತರು ಮತ್ತು 1,12,470 ಅವಿದ್ಯಾವಂತರು ಅರ್ಜಿ ನೋಂದಾಯಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಬೆರಳಣಿಕೆಯ ಅಂದರೆ 21 ಅರ್ಜಿದಾರರಿಗೆ ಮಾತ್ರ ಸರ್ಕಾರಿ ಕಚೇರಿಗಳು ಅಥವಾ ವಿವಿಧ ನಿಗಮ ಮಂಡಳಿಗಳಲ್ಲಿ ಕೆಲಸವನ್ನು ನೀಡಲಾಗಿದೆ.
ಈ ಲೆಕ್ಕಾಚಾರದ ಪ್ರಕಾರ ಮತ್ತು ಸರಕಾರದ ಉದ್ಯೋಗ ನೀತಿಯನ್ನು ಅವಲೋಕಿಸುವುದಾದರೆ, ಕೆಲಸ ಸಿಕ್ಕ 21 ಅರ್ಜಿದಾರರು ಮತ್ತು ಉದ್ಯೋಗ ಕಚೇರಿಯನ್ನು ನಿರ್ವಹಿಸಲು ತಗಲುವ ಖರ್ಚನ್ನು ತುಲನೆ ಮಾಡಿದರೆ ಒಂದು ಕೆಲಸಕ್ಕೆ ಮಾಸಿಕ 80 ಲಕ್ಷ ರೂಪಾಯಿ ಸರಕಾರ ಖರ್ಚು ಮಾಡಿದಂತಾಗುತ್ತದೆ.
ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಶಿವರಾಜ್ ಸಿಂಗ್ ಚೌಹಾಣ್ ಸರಕಾರ ಅಭಿವೃದ್ದಿ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ. "ಸಾಲ ಮಾಡಿ ಸರಕಾರ ತುಪ್ಪವನ್ನು ತಿನ್ನುತ್ತಿದೆ, ಮುಖ್ಯಮಂತ್ರಿ ಸರಕಾರ ನಡೆಸುತ್ತಿಲ್ಲ, ಬದಲಿಗೆ ಸರ್ಕಸ್ ಮಾಡುತ್ತಿದ್ದಾರೆ"ಎಂದು ಕಾಂಗ್ರೆಸ್ ಶಾಸಕ ಪಿ.ಸಿ.ಶರ್ಮಾ ಆರೋಪಿಸಿದ್ದಾರೆ.

"ಆಗಸ್ಟ್ 15 ರೊಳಗೆ ಒಂದು ಲಕ್ಷ ಉದ್ಯೋಗ ನೀಡುವುದಾಗಿ ನಮ್ಮ ಸರಕಾರ ಭರವಸೆ ನೀಡಿದೆ. ಟೀಚರ್, ಇಂಜಿನಿಯರಿಂಗ್, ಅರಣ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿನ ಹುದ್ದೆಗಳನ್ನು ತುಂಬಲು ಸರಕಾರ ಕ್ರಮ ಕೈಗೊಳ್ಳಲಿದೆ"ಎಂದು ಬಿಜೆಪಿ ಶಾಸಕ ಗೌರಿಶಂಕರ್ ಬಿಸೆನ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. (ಚಿತ್ರಕೃಪೆ: ಪಿಟಿಐ)












Click it and Unblock the Notifications