Mpox: ಮಂಕಿಪಾಕ್ಸ್ ಬಗ್ಗೆ ಮಹತ್ವದ ಸೂಚನೆ ಕೊಟ್ಟ ಕೇಂದ್ರ ಸರ್ಕಾರ
ಭಾರತದಲ್ಲಿ ಮಂಕಿಪಾಕ್ಸ್ ಕಾಯಿಲೆ ವರದಿಯಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಅಲರ್ಟ್ ಆಗಿದೆ. ದೇಶದೆಲ್ಲೆಡೆ ಈ ಕಾಯಿಲೆ ಹರಡದಂತೆ ಎಚ್ಚರ ವಹಿಸಲು ನಿರ್ದೇಶನ ಕೂಡ ನೀಡಿದೆ. ಹಾಗಾಗಿ, ಮಂಕಿಪಾಕ್ಸ್ ಕಾಯಿಲೆಯ ಶಂಕಿತರನ್ನು ಕೂಡಲೇ ತಪಾಸಣೆಗೆ ಒಳಪಡಿಸುವಂತೆ ಖಡಕ್ ಆದೇಶ ನೀಡಿದೆ. ಶಂಕಿತರು ಹಾಗೂ ಕಾಯಿಲೆ ದೃಢಪಟ್ಟವರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸುವಂತೆಯೂ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಇನ್ನು ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶಕ ಅಪೂರ್ವ ಚಂದ್ರ ಅವರು ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಮಂಕಿಪಾಕ್ಸ್ ಬಗ್ಗೆ ಜನರಲ್ಲಿರುವ ಭಯ ಹೋಗಲಾಡಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ದೇಶದಲ್ಲಿ ಹೊಸದಾಗಿ ಮಂಕಿಪಾಕ್ಸ್ ಕೇಸ್ ವರದಿಯಾಗಿದೆ. ಆದರೆ ಇಲ್ಲಿವರೆಗೂ ವರದಿಯಲ್ಲಿ ಮಂಕಿಪಾಕ್ಸ್ ಸೋಂಕು ಇರುವುದು ದೃಢವಾಗಿಲ್ಲ. ಏನೇ ಆದರೂ ಜನರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಹೇಳಿದ್ದಾರೆ.

ಮಂಕಿಪಾಕ್ಸ್ ಸಂಬಂಧ ಎಲ್ಲ ರಾಜ್ಯಗಳು ತಮ್ಮಲ್ಲಿರುವ ಆಸ್ಪತ್ರೆಗಳಲ್ಲಿ ಐಸೋಲೇಷನ್ ಸೌಲಭ್ಯ, ತರಬೇತಿ ಪಡೆದ ವೈದ್ಯರು ಹಾಗೂ ಚಿಕಿತ್ಸೆಗೆ ಬೇಕಾಗಿರುವ ಪರಿಕರಗಳನ್ನು ಸಿದ್ಧವಾಗಿ ಇಟ್ಟುಕೊಳ್ಳುವಂತೆ ಹೇಳಲಾಗಿದೆ. ಮಂಕಿಪಾಕ್ಸ್ ಶಂಕಿತರು ಅಥವಾ ಸೋಂಕು ದೃಢಪಟ್ಟವರೆ ಅವರೊಂದಿಗೆ ಸಂಪರ್ಕದಲ್ಲಿದ್ದ ಜನರನ್ನು ಕೂಡ ತ್ವರಿತವಾಗಿ ಪತ್ತೆ ಹಚ್ಚಬೇಕು. ಈ ವಿಚಾರದಲ್ಲಿ ಎಲ್ಲರೂ ಅಲರ್ಟ್ ಆಗಿರುವಂತೆ ರಾಜ್ಯಗಳಿಗೆ ಸಚಿವಾಲಯ ಸೂಚನೆ ನೀಡಿದೆ.
ಭಾರತದಲ್ಲಿ ಮಂಕಿಪಾಕ್ಸ್ ಶಂಕಿತ ಪ್ರಕರಣ ಪತ್ತೆಯಾಗಿದೆ. ಹಲವು ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಆತಂಕದ ನಡುವೆ ಭಾರತದಲ್ಲಿ ಕೂಡ ಸೋಂಕಿತ ಪ್ರಕರಣ ಪತ್ತೆಯಾಗಿದೆ. ವಿದೇಶದಿಂದ ವಾಪಸಾಗಿರುವ ಯುವಕನಲ್ಲಿ ಎಂಪಾಕ್ಸ್‌ನ ಲಕ್ಷಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ರೋಗಿಯನ್ನು ಆಸ್ಪತ್ರೆಯಲ್ಲಿ ಇರಿಸಲಾಗಿತ್ತು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದೆ.
ರೋಗಿಗೆ ಎಂಪಾಕ್ಸ್ ಸೋಂಕು ಇದೆಯೇ ಎಂದು ದೃಢಪಡಿಸಿಕೊಳ್ಳಲು ವಿವಿಧ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಎಂಪಾಕ್ಸ್ ಸೋಂಕು ಇರುವ ಬಗ್ಗೆ ಖಚಿತಪಡಿಸಲು ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದ್ದು, ಪ್ರೋಟೊಕಾಲ್‌ಗೆ ಅನುಗುಣವಾಗಿಯೇ ಪ್ರಕರಣವನ್ನು ನಿರ್ವಹಣೆ ಮಾಡಲಾಗುತ್ತಿದೆ. ಆತನ ಸಂಪರ್ಕಕ್ಕೆ ಯಾರಾದರೂ ಬಂದಿದ್ದಾರ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಆಫ್ರಿಕಾದ 12 ದೇಶಗಳಲ್ಲಿ ಎಂಪಾಕ್ಸ್ ಪ್ರಕರಣ ಹರಡುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದ ಮೂರು ವಾರಗಳ ಬಳಿಕ ಭಾರತದಲ್ಲಿ ಮೊದಲ ಎಂಪಾಕ್ಸ್ ಪ್ರಕರಣ ಪತ್ತೆಯಾಗಿದೆ.
ಏನಿದು ಮಂಕಿಪಾಕ್ಸ್?: ತಜ್ಞರು ಹೇಳಿರುವಂತೆ ಮಂಕಿಪಾಕ್ಸ್ ಒಂದು ವೈರಲ್ ಸೋಂಕು ರೋಗ. ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಈ ರೋಗ ಹರಡುತ್ತದೆ. ಇದು ಆರ್ಥೋಪಾಕ್ಸ್ ವೈರಸ್ ಜಾತಿಗೆ ಸೇರಿದೆ. ಸಿಡುಬು ರೋಗವನ್ನು ಉಂಟು ಮಾಡುವ ವೈರಸ್‌ನಂತೆಯೇ ಇರುತ್ತದೆ. ಈ ವೈರಸ್ ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಕಂಡುಬರುತ್ತದೆ. ಈ ರೋಗವು ಸೋಂಕು ಇರುವ ಪ್ರಾಣಿಗಳ ಜೊತೆ ನೇರ ಸಂಪರ್ಕವಿರುವ ಮನುಷ್ಯರಿಗೆ ಮೊದಲು ಹರಡುತ್ತದೆ. ರೋಗ ತಗುಲಿದ ಪ್ರಾಣಿಗಳ ಮಾಂಸ ಸೇವನೆಯಿಂದಲೂ ಈ ರೋಗ ಹರಡಬಹುದು. ಸೋಂಕಿತ ವ್ಯಕ್ತಿಗಳ ಉಸಿರಾಟದಿಂದ ಹೊರಸೂಸುವ ಕಣಗಳಿಂದ ಬೇರೆಯವರಿಗೂ ಸೋಂಕು ಹರಡುತ್ತದೆ ಎಂದು ಹೇಳಲಾಗಿದೆ.












Click it and Unblock the Notifications