ಮಗಳ ಪುಸ್ತಕ ಓದಿ NEET ಪಾಸ್ ಮಾಡಿದ 49 ವರ್ಷದ ತಾಯಿ: ಅಮ್ಮ-ಮಗಳ ಒಟ್ಟಿಗೆ ಕಾಲೇಜು ಮೆಟ್ಟಿಲೇರಲು ಸಜ್ಜಾದ ಸ್ಫೂರ್ತಿದಾಯಕ ಕಥೆ

ಸಾಧನೆಗೆ ಯಾವೂದೇ ವಯಸ್ಸಿನ ಮಿತಿಯಿಲ್ಲ, ಕಂಡ ಕನಸ್ಸನ್ನಾ ನನಸು ಮಾಡಿಕೊಳ್ಳಲು ನಮ್ಮಲ್ಲಿ ಛಲವಿರಬೇಕೇ ಹೊರತು ಇತರೆ ಯಾವುದೇ ಮಾನದಂಡಗಳಲ್ಲ ಎನ್ನುವುದನ್ನಾ ತಮಿಳುನಾಡಿನ 49 ವರ್ಷದ ತಾಯಿಯೊಬ್ಬರು ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಹೌದು, ತಮ್ಮ 18 ವರ್ಷದ ಮಗಳ ಜೊತೆಯಲ್ಲೇ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಅಂದರೆ ನೀಟ್‌ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಮೂರು ದಶಕಗಳ ಹಿಂದಿನ ತಾವು ಕಂಡಿದ್ದ ವೈದ್ಯಕೀಯ ಕನಸಿಗೆ ಅವರು ಮರುಜೀವ ನೀಡಿದ್ದಾರೆ.

ತಮಿಳುನಾಡಿನ ತೆಂಕಾಸಿ ಜಿಲ್ಲೆಯ ನಿವಾಸಿಯಾಗಿರುವ ಅಮುದವಲ್ಲಿ ಮತ್ತು ಅವರ ಮಗಳು ಸಂಯುಕ್ತಾ ಒಟ್ಟಾಗಿ ನೀಟ್ ಪಾಸ್‌ ಮಾಡಿ ಇದೀಗ ವೈದ್ಯಕೀಯ ಕಾಲೇಜು ಸೇರಲು ಸಜ್ಜಾಗಿದ್ದಾರೆ. ಈ ತಾಯಿ-ಮಗಳ ಅಪರೂಪದ ಸಾಧನೆ ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Tamil Nadu

ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿರುವ ಅಮುದವಲ್ಲಿ ಅವರು , ಸುಮಾರು 30 ವರ್ಷಗಳ ಹಿಂದೆಯೇ ತಮ್ಮ ಶಾಲಾ ಶಿಕ್ಷಣದ ಬಳಿಕ ಎಂಬಿಬಿಎಸ್ ಓದಬೇಕೆಂದು ಕನಸು ಕಂಡಿದ್ದರು. ಆದರೆ ಅವರ ಕನಸಿಗೆ ಆರ್ಥಿಕ ಸಂಕಷ್ಟಗಳು ಹಾಗೂ ಕೌಟುಂಬಿಕ ಜವಾಬ್ದಾರಿಗಳು ಅಡ್ಡಿಯಾಗಿದ್ದವು. ಹೀಗಾಗಿ ಅವರು ಅನಿವಾರ್ಯವಾಗಿ ಡಾಕ್ಟರ್‌ ಆಗೋ ಕನಸನ್ನ ಬದಿಗಿಟ್ಟು ಫಿಸಿಯೋಥೆರಪಿ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಅವರ 18 ವರ್ಷದ ಮಗಳು ಸಂಯುಕ್ತಾ, ತಾನೂ ವೈದ್ಯೆಯಾಗಬೇಕೆಂಬ ಹಂಬಲದಿಂದ ನೀಟ್ ಪರೀಕ್ಷೆಗೆ ಸಿದ್ಧತೆ ಆರಂಭಿಸಿದಾಗ, ಅಮುದವಲ್ಲಿ ಅವರ ಮನಸ್ಸಿನ ಮೂಲೆಯಲ್ಲಿದ್ದ ವೈದ್ಯೆಯಾಗುವ ಕನಸು ಮತ್ತೆ ಚಿಗುರೊಡೆಯಿತು ನೋಡಿ.

ಮಗಳೇ ತಾಯಿಗೆ ಗುರುವಾದಳು

ತನ್ನ ಮಗಳು ಪ್ರತಿದಿನ ಕಷ್ಟಪಟ್ಟು ಓದುವುದನ್ನ ಗಮನಿಸಿದ ಅಮುದವಲ್ಲಿ, ತಾವೂ ಏಕೆ ಮತ್ತೆ ಈಗೊಮ್ಮೆ ಪ್ರಯತ್ನಿಸಬಾರದು ಎಂದು ಯೋಚಿಸಿದರು. ಇವರ ಈ ಆಲೋಚನೆಗೆ ಪತಿಯ ಬೆಂಬಲವೂ ಸಿಕ್ಕಿದ್ದರಿಂದ ಅವರು ಮಗಳ ಪಠ್ಯಪುಸ್ತಕಗಳನ್ನಾ ಪಡೆದು ಓದಲು ಆರಂಭಿಸಿದರು. ಪ್ರಸ್ತುತ ಪಠ್ಯಕ್ರಮವು ಅವರ ಶಾಲಾ ದಿನಗಳ ಪಠ್ಯಕ್ರಮಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು ಹಾಗೂ ಅತ್ಯಂತ ಕಠಿಣವಾಗಿತ್ತು. ಆದರೆ ಛಲ ಬಿಡದ ಅವರು ಮಗಳು ಜೋರಾಗಿ ಓದುವಾಗ ಗಮನವಿಟ್ಟು ಕೇಳುತ್ತಿದ್ದರು. ಸಂಯುಕ್ತಾ ತಾನು ಓದಿದ್ದನ್ನು ತಾಯಿಗೆ ವಿವರಿಸುವ ಮೂಲಕ, ತಾಯಿಗೆ ಪಾಠ ಹೇಳಿಕೊಡುವ ಗುರುವಾದಳು ನೋಡಿ. ತದನಂತರ ಅದೇ ತಾಯಿಗೆ ಆಕೆ ಸಹಪಾಠಿಯೂ ಆದಳು. ಈ ತಾಯಿ-ಮಗಳ ಜೋಡಿ ಜೊತೆಯಾಗಿ ವ್ಯಾಸಂಗ ಮಾಡಿ, ಕಠಿಣ ಪರಿಶ್ರಮದಿಂದ ಪರೀಕ್ಷೆ ಬರೆದರು.

ತಾಯಿ ಮಗಳು ನೀಟ್ ಪಾಸ್: ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರವೇಶ

ಈ ವರ್ಷ ನಡೆದ ನೀಟ್ ಪರೀಕ್ಷೆಯಲ್ಲಿ ತಾಯಿ ಹಾಗೂ ಮಗಳು ಇಬ್ಬರೂ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಅಮುದವಲ್ಲಿ ಅವರು ನೀಟ್‌ನಲ್ಲಿ 147 ಅಂಕಗಳನ್ನು ಗಳಿಸಿದ್ದು, ವಿಕಲಚೇತನರ ಕೋಟಾದಡಿ ಬಿರುದುನಗರ್‌ನ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದಾರೆ. ಇತ್ತ, ಅವರ ಮಗಳು ಸಂಯುಕ್ತಾ 450 ಅಂಕಗಳನ್ನ ಪಡೆದಿದ್ದು, ಸಾಮಾನ್ಯ ವರ್ಗದ ಕೌನ್ಸೆಲಿಂಗ್‌ಗಾಗಿ ಕಾಯುತ್ತಿದ್ದಾಳೆ. ವಿಶೇಷವೆಂದರೆ, ತಾಯಿ ಮತ್ತು ಮಗಳು ಒಂದೇ ಕಾಲೇಜಿನಲ್ಲಿ ಓದುವುದು ಬೇಡ, ಬೇರೆ ಬೇರೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡೋಣ ಎಂದು ನಿರ್ಧರಿಸಿದ್ದಾರೆ. ಅಮುದವಲ್ಲಿ ಅವರ ಪತಿ ವೃತ್ತಿಯಲ್ಲಿ ವಕೀಲರಾಗಿದ್ದು, ಇವರ ಈ ಪಯಣದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ್ದಾರೆ.

"ನಾನು ನನ್ನ ಮಗಳೊಂದಿಗೆ ಓದಲು ಶುರು ಮಾಡಿದಾಗ, ಈಗ ಸಾಧ್ಯವಾಗದಿದ್ದರೆ, ಇನ್ನೆಂದಿಗೂ ನನಗೆ ಸಾಧ್ಯವಿಲ್ಲ ಎಂದು ಭಾವಿಸಿದ್ದೆ" ಎಂದು ತಮ್ಮ ಯಶಸ್ಸಿನ ಕುರಿತು ಅಮುದವಲ್ಲಿ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳಿಗೆ ಅವರ ಕನಸುಗಳನ್ನ ಬೆನ್ನಟ್ಟಲು ಕಲಿಸುವ ಅತ್ಯುತ್ತಮ ಮಾರ್ಗವೆಂದರೆ, ಮೊದಲು ನಮ್ಮ ಕನಸುಗಳನ್ನು ನಾವೇ ಬೆನ್ನಟ್ಟುವುದು ಎಂಬುದನ್ನು ಈ ತಾಯಿ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ತಮ್ಮ ದೃಢಸಂಕಲ್ಪ, ಕಠಿಣ ಪರಿಶ್ರಮ ಮತ್ತು ಮಗಳ ಸ್ಫೂರ್ತಿಯಿಂದ ಅಮುದವಲ್ಲಿ ಅವರು ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾದರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+