ಬಡತನ ಮೆಟ್ಟಿನಿಂತ ಟೈಲರ್ ಮಗ: ಕೆನಡಾ ಕಂಪನಿಯಲ್ಲಿ ವಾರ್ಷಿಕ 1.06 ಕೋಟಿ ರೂ. ಪ್ಯಾಕೇಜ್ ಪಡೆದ ಯುವಕ
ಅಮರಾವತಿ: ಸಾಧಿಸುವ ಛಲವೊಂದಿದ್ದರೆ ಬಡತನ ಹಾಗೂ ಯಾವುದೇ ಕುಟುಂಬದ ಹಿನ್ನೆಲೆಯಾಗಲಿ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನ ಆಂಧ್ರಪ್ರದೇಶದ ಯುವಕನೊಬ್ಬ ಸಾಬೀತು ಮಾಡಿದ್ದಾನೆ ನೋದಡಿ. ಕಿವುಡ ಹಾಗೂ ಮೂಕರಾಗಿರುವ ಬಟ್ಟೆ ಹೋಲಿಯು ಟೈಲರ್ ಒಬ್ಬರ ಮಗನಾಗಿರುವ ಅಖಿಲೇಶ್ ಮಾಲ್ತಿ , ಇಂದು ಕೆನಡಾ ಮೂಲದ ಪ್ರತಿಷ್ಠಿತ ಫ್ಯಾಬ್ರಾಂಟಿಕ್ ಎಐ ಕಂಪನಿಯಲ್ಲಿ ವಾರ್ಷಿಕ 1.06 ಕೋಟಿ ರೂಪಾಯಿ ಪ್ಯಾಕೇಜ್‌ನ ರಿಮೋಟ್ ಉದ್ಯೋಗವನ್ನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಇಂಜಿನಿಯರಿಂಗ್ ಓದಿ ಮುಗಿಯುತ್ತಿದ್ದಂತೆಯೇ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಈ ಸಾಧನೆ ಮಾಡಿರುವ ಅಖಿಲೇಶ್ ಅವರ ಯಶೋಗಾಥೆ ಇದೀಗ ದೇಶಾದ್ಯಂತ ಹಲವು ವಿದ್ಯಾರ್ಥಿಗಳಿಗೆ ಸ್ಪೂರ್ತಿ.

ಕಷ್ಟದ ಹಿನ್ನೆಲೆಯಿಂದ ಬಂದ ಅಖಿಲೇಶ್ ಮಾಲ್ತಿ ಯಶೋಗಾಥೆ
ಆಂಧ್ರಪ್ರದೇಶದ ಅತ್ಯಂತ ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿದ ಅಖಿಲೇಶ್ ಮಾಲ್ತಿ ಅವರ ಜೀವನ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ. ಅವರ ತಂದೆ ವೃತ್ತಿಯಲ್ಲಿ ಟೈಲರ್ ಆಗಿದ್ದು, ಅವರಿಗೆ ಕಿವಿ ಕೇಳಿಸುತ್ತಿರಲ್ಲಿಲ್ಲ ಜೊತೆಗೆ ಮಾತು ಕೂಡ ಬರಲ್ಲ. ತಂದೆಯ ಜೊತೆಗೆ ತಾಯಿ ಕೂಡ ಬಟ್ಟೆ ಹೊಲಿಯುವ ಕೆಲಸದಲ್ಲಿ ಸಹಾಯ ಮಾಡುತ್ತಾ ಕುಟುಂಬದ ಆರ್ಥಿಕ ಹೊರೆಯನ್ನು ನಿಭಾಯಿಸುತ್ತಿದ್ದರು. ಮನೆಯಲ್ಲಿ ತೀವ್ರ ಆರ್ಥಿಕ ಕಷ್ಟಗಳಿದ್ದರೂ, ಹೆತ್ತವರು ಎಂದಿಗೂ ತಮ್ಮ ಬಡತನವನ್ನ ಮಗನ ಶಿಕ್ಷಣಕ್ಕೆ ಅಡ್ಡಿಯಾಗಲು ಬಿಡಲಿಲ್ಲ.
ಮಗನಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ತಂದೆ ತಾಯಿಯರ ಈ ತ್ಯಾಗ ಹಾಗೂ ಪರಿಶ್ರಮಕ್ಕೆ ಇದೀಗ ಫಲ ಸಿಕ್ಕಿದೆ. ಆರ್ಥಿಕ ಸಮಸ್ಯೆಯ ನಡುವೆಯೂ ತಮ್ಮ ಕನಸನ್ನ ಬೆನ್ನಟ್ಟಿದ ಅಖಿಲೇಶ್, ಇಂದು ಕೋಟ್ಯಂತರ ರೂಪಾಯಿ ವೇತನದ ಉದ್ಯೋಗ ಗಿಟ್ಟಿಸಿಕೊಂಡು ಕುಟುಂಬದ ಆರ್ಥಿಕ ಸ್ಥಿತಿಯನ್ನೇ ಬದಲಾಯಿಸಿದ್ದಾರೆ.
ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಒಲಿದ ಈ ಅವಕಾಶ
ಅಖಿಲೇಶ್ ಮಾಲ್ತಿ ಅವರು ಆಂಧ್ರಪ್ರದೇಶದ ಆದಿತ್ಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಡೇಟಾ ಸೈನ್ಸ್ ವಿಭಾಗದಲ್ಲಿ ಬಿ.ಟೆಕ್ ವ್ಯಾಸಂಗ ಮಾಡಿದ್ದಾರೆ. ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಪ್ಲೇಸ್‌ಮೆಂಟ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅವರು, ತಮ್ಮ ತಾಂತ್ರಿಕ ಕೌಶಲ್ಯ ಹಾಗೂ ಜ್ಞಾನದಿಂದ ಕೆನಡಾ ಮೂಲದ ಫ್ಯಾಬ್ರಾಂಟಿಕ್ ಎಐ ಕಂಪನಿ ನಡೆಸಿದ ಇಂಟರ್‌ರ್ವ್ಯೂನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅಖಿಲೇಶ್ ಅವರಿಗೆ ಕಂಪನಿಯು 'ಎಐ ಇಂಜಿನಿಯರ್' ಹುದ್ದೆ ನೀಡಿ, ವಾರ್ಷಿಕ 1.06 ಕೋಟಿ ರೂಪಾಯಿಗಳ ಭಾರಿ ಪ್ಯಾಕೇಜ್ ಘೋಷಿಸಿದೆ. ವಿಶೇಷವೆಂದರೆ, ಇದು ರಿಮೋಟ್ ಉದ್ಯೋಗವಾಗಿದ್ದು, ಅವರು ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಭಾರಿ ಮೆಚ್ಚುಗೆ
ಬಡ ಕುಟುಂಬದಿಂದ ಬಂದು ವಾರ್ಷಿಕ 1 ಕೋಟಿ ರೂ.ಗೂ ಅಧಿಕ ಪ್ಯಾಕೇಜ್ ಪಡೆದ ಅಖಿಲೇಶ್ ಅವರ ಸಾಧನೆಯ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಯುವಕನ ಕಠಿಣ ಪರಿಶ್ರಮ ಹಾಗೂ ಹೆತ್ತವರ ತ್ಯಾಗಕ್ಕೆ ಗೌರವ ಸಲ್ಲಿಸುತ್ತಿದ್ದಾರೆ. "ವಾರ್ಷಿಕ 1.06 ಕೋಟಿ ರೂಪಾಯಿ ಪ್ಯಾಕೇಜ್ ಹಾಗೂ ಅದೂ ಕೂಡ ರಿಮೋಟ್ ಉದ್ಯೋಗ. ಅವರ ಪರಿಶ್ರಮವು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನೇ ಸಂಪೂರ್ಣವಾಗಿ ಬದಲಾಯಿಸಿದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸಿ, "ಬಡತನದ ಹಿನ್ನೆಲೆಯಿಂದ ಬಂದು 1 ಕೋಟಿ ರೂ. ಪ್ಯಾಕೇಜ್ ಪಡೆಯುವುದು ನಿಜಕ್ಕೂ ದೊಡ್ಡ ಸಾಧನೆ. ಪ್ಯಾಕೇಜ್‌ಗಿಂತಲೂ ಅವರ ಪರಿಶ್ರಮ ಕುಟುಂಬದ ಭವಿಷ್ಯವನ್ನ ಉಜ್ವಲಗೊಳಿಸಿರುವುದು ಅತ್ಯಂತ ಸುಂದರ ಕ್ಷಣ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಪೂರ್ತಿ
ಅಖಿಲೇಶ್ ಅವರ ಈ ಯಶೋಗಾಥೆ ಪ್ರಸ್ತುತ ಇಂಜಿನಿಯರಿಂಗ್ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ದೊಡ್ಡ ಪಾಠ. ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಬಳಕೆದಾರರು ಬರೆದುಕೊಂಡಂತೆ, "ಬಿ.ಟೆಕ್ ವ್ಯಾಸಂಗದ ಸಮಯದಲ್ಲಿ ನಮಗೆ ಸಾಕಷ್ಟು ಸಮಯ ಸಿಗುತ್ತದೆ. ಪ್ರತಿದಿನ ಕನಿಷ್ಠ 2 ಗಂಟೆಗಳ ಕಾಲ ಹೊಸ ತಾಂತ್ರಿಕ ಕೌಶಲ್ಯಗಳನ್ನ ಕಲಿಯಲು ಮೀಸಲಿಟ್ಟರೆ ಯಾರೂ ಬೇಕಾದರೂ ಇಂತಹ ಅದ್ಭುತ ಸಾಧನೆ ಮಾಡಬಹುದು" ಎಂಬ ಮಾತನ್ನ ಅಖಿಲೇಶ್ ಸಾಬೀತು ಮಾಡಿ ತೋರಿಸಿದ್ದಾರೆ.


Click it and Unblock the Notifications
