4 ಬಾರಿ ಸೋತರೂ ಧೃತಿಗೆಡದ ಛಲಗಾರ್ತಿ; ಸಮವಸ್ತ್ರದಲ್ಲೇ ಐಎಎಸ್ ಮಗಳಿಗೆ ಪೊಲೀಸ್ ತಂದೆಯಿಂದ ಸೆಲ್ಯೂಟ್, ಭಾರಿ ಮೆಚ್ಚುಗೆ
Success Story: ಪೊಲೀಸ್ ಅಕಾಡೆಮಿಯೊಂದರಲ್ಲಿ ಕಲ್ಪನೆಗೂ ಮೀರಿದ ಅದ್ಭುತ ಸನ್ನಿವೇಶ ನಡೆದಿದೆ. ಸತತ 4 ಪ್ರಯತ್ನಗಳಲ್ಲಿ ಸೋತರೂ ಧೃತಿಗೆಡದೆ 5ನೇ ಯತ್ನದಲ್ಲಿ ದೇಶಕ್ಕೇ 3ನೇ ರ್‍ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದ ಮಗಳು ಉಮಾಹಾರತಿಗೆ, ಎಸ್‌ಪಿ ವೆಂಕಟೇಶ್ವರ್ಲು ಅವರು ಕಟ್ಟುನಿಟ್ಟಿನ ಸಮವಸ್ತ್ರದಲ್ಲಿದ್ದುಕೊಂಡೇ ಗೌರವಪೂರ್ವಕವಾಗಿ ಸೆಲ್ಯೂಟ್ ಹೊಡೆದು ಪುಷ್ಪಗುಚ್ಛ ನೀಡಿ ಗಮನ ಸೆಳೆದಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಉಮಾಹಾರತಿ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 3ನೇ ರ್‍ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆ ಉಮಾ ಹಾರತಿ ಅವರಿಗೆ ಅವರ ತಂದೆ ಎನ್.ವೆಂಕಟೇಶ್ವರ್ಲು ಅವರು ಗೌರವಪೂರ್ವಕವಾಗಿ ಸೆಲ್ಯೂಟ್ ಹೊಡೆದು ಸ್ವಾಗತಿಸಿದ ಹೃದಯಸ್ಪರ್ಶಿ ಹಾಗೂ ಭಾವನಾತ್ಮಕ ಘಟನೆಯ ವರದಿ ಇಲ್ಲಿದೆ ನೋಡಿ.

ತಂದೆಯಿಂದ ಐಎಎಸ್ ಮಗಳಿಗೆ ಸೆಲ್ಯೂಟ್
ಎನ್. ವೆಂಕಟೇಶ್ವರ್ಲು ಅವರು ತಲಂಗಾಣ ರಾಜ್ಯ ಪೊಲೀಸ್ ಅಕಾಡೆಮಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಾಗಿ (SP) ಸೇವೆ ಸಲ್ಲಿಸುತ್ತಿದ್ದಾರೆ. ಅವರು ತರಬೇತಿಯ ಭಾಗವಾಗಿ ಅಕಾಡೆಮಿಗೆ ಭೇಟಿ ನೀಡಿದ್ದ ತಮ್ಮ ಮಗಳು ಹಾಗೂ ಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ಉಮಾ ಹಾರತಿ ಅವರಿಗೆ ಅಧಿಕೃತ ಸಮವಸ್ತ್ರದಲ್ಲಿದ್ದುಕೊಂಡು ಸೆಲ್ಯೂಟ್ ಹೊಡೆದು, ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಇದು ಇದೀಗ ಸಖತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿರುವ ಈ ದೃಶ್ಯ ಯಾವುದೇ ತಂದೆಗೆ ಸಿಗಬಹುದಾದ ಅತ್ಯುನ್ನತ ಸಮ್ಮಾನ ಮತ್ತು ಹೆಮ್ಮೆಯ ಕ್ಷಣವನ್ನು ಬಿಂಬಿಸುತ್ತದೆ. ಹಾಗಾದ್ರೆ ಉಮಾ ಹಾರತಿ ಅವರ ಈ ಸಾಧನೆಗೆ ಸ್ಫೂರ್ತಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಉಮಾಹಾರತಿ ಸಾಧನೆಯ ಹಾದಿ ಮತ್ತು ಹಿನ್ನೆಲೆ
ಉಮಾಹಾರತಿ ಅವರು ಐಐಟಿ ಹೈದರಾಬಾದ್‌ನಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದು, ಸತತ 5ನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಲ್ ಇಂಡಿಯಾ 3ನೇ ರ್‍ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದರು. ತಮ್ಮ ಸತತ ಪ್ರಯತ್ನ ಮತ್ತು ನಿಸ್ವಾರ್ಥ ಸೇವಾ ಮನೋಭಾವಕ್ಕೆ ತಂದೆಯವರ ಕರ್ತವ್ಯ ಪ್ರಜ್ಞೆಯೇ ಮುಖ್ಯ ಸ್ಫೂರ್ತಿ ಎಂದು ಉಮಾ ಹಾರತಿ ಅವರು ಹೇಳಿಕೊಂಡಿದ್ದಾರೆ.
ಉಮಾಹಾರತಿ ಐಎಎಸ್ ಸಾಧನೆ ಮಾಡುವ ಜೊತೆಗೆ, ಅವರ ಸಹೋದರ ಸಾಯಿ ವಿಕಾಸ್ ಕೂಡ ಇಂಡಿಯನ್ ಎಂಜಿನಿಯರಿಂಗ್ ಸರ್ವೀಸಸ್ (IES) ಪರೀಕ್ಷೆಯಲ್ಲಿ ದೇಶಕ್ಕೆ 9ನೇ ರ್‍ಯಾಂಕ್ ಪಡೆದು ಅಧಿಕಾರಿಯಾಗಿದ್ದಾರೆ. ಒಂದೇ ಕುಟುಂಬದ ಇಬ್ಬರು ಮಕ್ಕಳು ದೇಶದ ಅತ್ಯುನ್ನತ ಹುದ್ದೆಗೇರಿರುವುದು ತಂದೆ ವೆಂಕಟೇಶ್ವರ್ಲು ಅವರಿಗೆ ಅಪಾರ ಹೆಮ್ಮೆ ತಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ತಂದೆಯೊಬ್ಬರಿಗೆ ತಮ್ಮ ವೃತ್ತಿಜೀವನದಲ್ಲಿ ಮಗಳ ಯಶಸ್ಸಿಗೆ ಗೌರವ ಸಲ್ಲಿಸುವುದಕ್ಕಿಂತ ದೊಡ್ಡ ಸಾರ್ಥಕತೆ ಮತ್ತೊಂದಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಉದ್ಯೋಗದ ನಿಷ್ಠೆ ಮತ್ತು ತಂದೆ-ಮಗಳ ನಡುವಿನ ಅಪಾರ ಪ್ರೀತಿಯನ್ನು ಈ ಅಪರೂಪದ ಕ್ಷಣ ಎತ್ತಿಹಿಡಿದಿದೆ ಎನ್ನಬಹುದು.
ನೆಟ್ಟಿಗರಿಂದ ಮೆಚ್ಚುಗೆಗಳ ಸುರಿಮಳೆ
'ಒಬ್ಬ ತಂದೆಗೆ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಸಿಗಬಹುದಾದ ಅತ್ಯುನ್ನತ ಮತ್ತು ಸಾರ್ಥಕತೆಯ ಬಹುಮಾನ ಎಂದರೆ ಇದೇ.. ತಮ್ಮದೇ ರಕ್ತದ ಕುಡಿಗೆ ಸಮವಸ್ತ್ರದಲ್ಲಿದ್ದುಕೊಂಡು ಸೆಲ್ಯೂಟ್ ಹೊಡೆಯುವಾಗ ಆ ತಂದೆಯ ಎದೆ ಹೆಮ್ಮೆಯಿಂದ ಎಷ್ಟು ಉಬ್ಬಿರಬೇಡ?,' ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
'ಸತತ 4 ಬಾರಿ ಸೋತರೂ ಧೃತಿಗೆಡದೆ 5ನೇ ಯತ್ನದಲ್ಲಿ ದೇಶಕ್ಕೇ 3ನೇ ರ್‍ಯಾಂಕ್ ಪಡೆದ ಉಮಾ ಹಾರತಿ ಅವರ ಛಲ ಪ್ರತಿಯೊಬ್ಬ ಯುಪಿಎಸ್‌ಸಿ ಆಕಾಂಕ್ಷಿಗೂ ದಾರಿದೀಪ. ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ ಎಂಬುದಕ್ಕೆ ಈ ಭಾವಚಿತ್ರವೇ ಸಾಕ್ಷಿ,' ಎಂದು ತರಬೇತಿ ಆಕಾಂಕ್ಷಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಒಂದೇ ಮನೆಯಲ್ಲಿ ಮಗಳು ಐಎಎಸ್ ಹಾಗೂ ಮಗ ಐಇಎಸ್ (IES 9ನೇ ರ್‍ಯಾಂಕ್) ಅಧಿಕಾರಿಯಾಗಿ ದೇಶಸೇವೆಗೆ ನಿಂತಿರುವುದು ಸಣ್ಣ ವಿಷಯವಲ್ಲ. ಮಕ್ಕಳನ್ನು ಈ ಮಟ್ಟಕ್ಕೆ ಬೆಳೆಸಿದ ತಂದೆಯ ಶಿಸ್ತು ಮತ್ತು ಸಂಸ್ಕಾರಕ್ಕೆ ನಿಜಕ್ಕೂ ನಮ್ಮದೊಂದು ದೊಡ್ಡ ಸೆಲ್ಯೂಟ್,' ಎಂದು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಅಲ್ಲದೆ 'ಮಗಳ ಸಾಧನೆಗೆ ಗೌರವ ನೀಡುವ ತಂದೆಯ ಈ ನಡೆ ದೇಶದ ಪ್ರತಿಯೊಬ್ಬ ತಂದೆಗೂ ಸ್ಪೂರ್ತಿ. ಹೆಣ್ಣುಮಕ್ಕಳಿಗೆ ಸೂಕ್ತ ಪ್ರೋತ್ಸಾಹ ಮತ್ತು ಸ್ವಾತಂತ್ರ್ಯ ನೀಡಿದರೆ ಅವರು ದೇಶದ ಅತ್ಯುನ್ನತ ಹುದ್ದೆಗೇರಿ ಹೆಮ್ಮೆ ತರುತ್ತಾರೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ,' ಅಂತಲೂ ನೆಟ್ಟಿಗರು ಹೇಳಿದ್ದಾರೆ.


Click it and Unblock the Notifications
