3,800ಕ್ಕೂ ಹೆಚ್ಚು ಬಡಮಕ್ಕಳ ಜೀವ ಉಳಿಸಿದ ಬಾಲಿವುಡ್ ಗಾಯಕಿ: ಪಲಕ್ ಮುಚ್ಚಲ್ ಸಮಾಜ ಸೇವೆಗೆ ಗಿನ್ನೆಸ್ ದಾಖಲೆ ಗರಿ
ಬಾಲಿವುಡ್ ನ ಖ್ಯಾತ ಗಾಯಕಿ ಪಲಕ್ ಮುಚ್ಚಲ್ ತಮ್ಮ ಸುಮಧುರ ಧ್ವನಿಯಿಂದ ಮಾತ್ರವಲ್ಲ, ತಮ್ಮ ವಿಶಾಲ ಹೃದಯದಿಂದಲೂ ಇಂದು ಜಗತ್ತಿನ ಗಮನ ಸೆಳೆದಿದ್ದಾರೆ. ಸಂಗೀತ ಜಗತ್ತಿನಲ್ಲಿ ಅಪಾರ ಸಾಧನೆ ಮಾಡಿರುವ ಈ ಗಾಯಕಿ, ಇದೀಗ ತಮ್ಮ ಅಸಾಧಾರಣ ಮಾನವೀಯ ಕಾರ್ಯಕ್ಕಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹಾಗೂ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಹೌದು, ಇದುವರೆಗೆ ಬರೋಬ್ಬರಿ 3,800ಕ್ಕೂ ಹೆಚ್ಚು ಬಡಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಹಣಕಾಸಿನ ನೆರವು ನೀಡುವ ಮೂಲಕ ಜೀವ ಉಳಿಸಿರುವ ಇವರ ಈ ನಿಸ್ವಾರ್ಥ ಸೇವೆಗೆ ಗಿನ್ನೆಸ್ ದಾಖಲೆಯ 'ಹಾಲ್ ಆಫ್ ಫೇಮ್' ಗೌರವ ಒಲಿದುಬಂದಿದೆ.

ಬಾಲ್ಯದಲ್ಲೇ ಸಮಾಜ ಸೇವೆಯತ್ತ ಪಲಕ್ ಮುಚ್ಚಲ್
ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ ಪಲಕ್ ಮುಚ್ಚಲ್ ಅವರಿಗೆ ಸಮಾಜ ಸೇವೆಯ ಬಗ್ಗೆ ಬಾಲ್ಯದಲ್ಲೇ ಆಸಕ್ತಿ ಮೂಡಿತ್ತು. ಚಿಕ್ಕವಳಿದ್ದಾಗ ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಬಡಮಕ್ಕಳು ಪಡುತ್ತಿದ್ದ ಕಷ್ಟವನ್ನು ಕಣ್ಣಾರೆ ಕಂಡಿದ್ದರು. ಆ ಕ್ಷಣ ಅವರ ಮನಸ್ಸಿನಲ್ಲಿ ಆಳವಾದ ಪರಿಣಾಮ ಬೀರಿತ್ತು.
"ಒಂದಲ್ಲ ಒಂದು ದಿನ ನಾನು ಈ ಬಡಮಕ್ಕಳಿಗೆ ಖಂಡಿತಾ ಸಹಾಯ ಮಾಡುತ್ತೇನೆ" ಎಂದು ಅಂದೇ ಅವರು ತಮಗೆ ತಾವೇ ಮಾತುಕೊಟ್ಟುಕೊಂಡಿದ್ದರು. ವರ್ಷಗಳು ಉರುಳಿದಂತೆ, ಆ ಭರವಸೆಯೇ ಅವರ ಜೀವನದ ಅತಿದೊಡ್ಡ ಗುರಿಯಾಗಿ ಬದಲಾಯಿತು. ತಾವು ಸ್ಥಾಪಿಸಿದ ಪಲಕ್ ಪಲಾಶ್ ಚಾರಿಟೇಬಲ್ ಫೌಂಡೇಶನ್ ಮೂಲಕ ತಮ್ಮ ಸಂಗೀತ ಕಚೇರಿಗಳಿಂದ ಬರುವ ಪ್ರತಿಯೊಂದು ರೂಪಾಯಿ ಆದಾಯ ಹಾಗೂ ವೈಯಕ್ತಿಕ ಉಳಿತಾಯವನ್ನ ಬಡಮಕ್ಕಳ ಜೀವ ಉಳಿಸುವ ವೈದ್ಯಕೀಯ ಚಿಕಿತ್ಸೆಗಳಿಗಾಗಿ ಮೀಸಲಿಡುತ್ತಾ ಬಂದಿದ್ದಾರೆ.
ಬಡಮಕ್ಕಳ ಹೃದಯ ಶಸ್ತ್ರಚಿಕಿತ್ಸೆ
ಪಲಕ್ ಮುಚ್ಚಲ್ ಅವರ ಸಹಾಯ ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದಾದ್ಯಂತ ಹಾಗೂ ಹೊರಗಿನ ಒಟ್ಟು 3,800ಕ್ಕೂ ಹೆಚ್ಚು ಬಡಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗುವುದರ ಜೊತೆಗೆ, ಕಾರ್ಗಿಲ್ ಹುತಾತ್ಮರ ಕುಟುಂಬಗಳಿಗೂ ಅವರು ಆರ್ಥಿಕ ಬೆಂಬಲ ನೀಡಿದ್ದಾರೆ.
ಅಲ್ಲದೆ, ಗುಜರಾತ್ ಭೂಕಂಪದ ಸಂತ್ರಸ್ತರಿಗೆ ಪರಿಹಾರವಾಗಿ 10 ಲಕ್ಷ ರೂಪಾಯಿಗಳನ್ನ ದೇಣಿಗೆ ನೀಡುವ ಮೂಲಕ ತಮ್ಮ ಉದಾರತೆಯನ್ನ ಮೆರೆದಿದ್ದಾರೆ. 'ಮೇರಿ ಆಶಿಕಿ', 'ಕೌನ್ ತುಜೆ' ಮತ್ತು 'ಪ್ರೇಮ್ ರತನ್ ಧನ್ ಪಾಯೋ' ಮುಂತಾದ ಸೂಪರ್‌ಹಿಟ್ ಹಾಡುಗಳ ಮೂಲಕ ಬಾಲಿವುಡ್‌ನಲ್ಲಿ ಉತ್ತುಂಗಕ್ಕೇರಿದರೂ, ಪಲಕ್ ಅವರು ತಮ್ಮ ಫೌಂಡೇಶನ್‌ಗಾಗಿ ದುಡಿಯುವುದನ್ನ ಇಂದಿಗೂ ನಿಲ್ಲಿಸಲಿಲ್ಲ. ಅವರ ಈ ಸೇವಾ ಮನೋಭಾವವೇ ಇಂದು ಅವರನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನೆಸ್ ದಾಖಲೆಯ ಪುಟಗಳಲ್ಲಿ ರಾರಾಜಿಸುವಂತೆ ಮಾಡಿದೆ.
ಬೆನ್ನೆಲುಬಾಗಿ ನಿಂತ ಪತಿ, ಪಲಕ್ ಮುಚ್ಚಲ್ ಗಿನ್ನೆಸ್ ದಾಖಲೆ
ಪಲಕ್ ಅವರ ಈ ಒಳ್ಳೆಯ ಕಾರ್ಯದಲ್ಲಿ ಅವರ ಪತಿ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಮಿಥುನ್ ಅವರು ಕೂಡ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಈ ದಂಪತಿಯು ತಮ್ಮ ಸಮಾಜ ಸೇವೆಯನ್ನ ಒಂದು ವ್ರತದಂತೆ ಪಾಲಿಸುತ್ತಿದ್ದಾರೆ. ಮಿಥುನ್ ಅವರು ಒಮ್ಮೆ ಹೇಳಿದಂತೆ, "ಸಂಗೀತ ಕಚೇರಿಗಳು ಇಲ್ಲದಿದ್ದರೂ, ನಮಗೆ ಯಾವುದೇ ಆದಾಯವಿಲ್ಲದಿದ್ದರೂ, ಮಗುವಿನ ಶಸ್ತ್ರಚಿಕಿತ್ಸೆ ಮಾತ್ರ ಎಂದಿಗೂ ನಿಲ್ಲುವುದಿಲ್ಲ"
ಆರ್ಥಿಕ ಅಡೆತಡೆಗಳು ಎಷ್ಟೇ ಬಂದರೂ ತಮ್ಮ ಮಿಷನ್ ಅನ್ನು ಜೀವಂತವಾಗಿಡುವ ದಂಪತಿಯ ದೃಢಸಂಕಲ್ಪವನ್ನ ಈ ಮಾತುಗಳು ಪ್ರತಿಬಿಂಬಿಸುತ್ತವೆ. ತಮ್ಮ ಗಾಯನದ ಮೂಲಕ ಕಲಾಭಿಮಾನಿಗಳನ್ನು ರಂಜಿಸುವ ಜೊತೆಗೆ, ಬಡಮಕ್ಕಳ ಪಾಲಿನ ಆಶಾಕಿರಣವಾಗಿರುವ ಪಲಕ್ ಮುಚ್ಚಲ್ ಅವರ ಕಾರ್ಯ ನಿಜಕ್ಕೂ ಜಗತ್ತಿಗೆ ಸ್ಫೂರ್ತಿ.


Click it and Unblock the Notifications
