Karnataka CM : ಸಿಎಂ ಆಯ್ಕೆ ಟೆನ್ಷನ್ ನಡುವೆಯೂ ಶಿಳ್ಳೆ ಹೊಡೆದ ಸಿದ್ದರಾಮಯ್ಯ: ವಿಡಿಯೋ ನೋಡಿ
ಕರ್ನಾಟಕ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪೈಪೋಟಿ ಜೋರಾಗಿದೆ. ಚುನಾವಣೆಗೂ ಮುನ್ನ ಜೋಡೆತ್ತುಗಳಂತೆ ಜೊತೆಯಲ್ಲೇ ಹೆಜ್ಜೆ ಹಾಕಿ ಕಾಂಗ್ರೆಸ್ ಜನ ಗಳಿಸಲು ಕಾರಣವಾಗಿದ್ದ ಇಬ್ಬರೂ ನಾಯಕರು, ಈ ಸಿಎಂ ರೇಸ್‌ನಲ್ಲಿ ಒಬ್ಬರ ವಿರುದ್ಧ ಮತ್ತೊಬ್ಬರು ಸ್ಪರ್ಧೆಗೆ ಬಿದ್ದಿದ್ದಾರೆ.
ಸೋಮವಾರವೇ ಆಪ್ತ ಶಾಸಕರ ಜೊತೆ ದೆಹಲಿಗೆ ದೌಡಾಯಿಸಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ತನಗೆ ಯಾಕೆ ನೀಡಬೇಕು ಎಂದು ಹಲವು ಕಾರಣಗಳನ್ನು ಮುಂದಿಟ್ಟಿದ್ದಾರೆ. ಇತ್ತ ಕಡೆ ಡಿಕೆ ಶಿವಕುಮಾರ್ ಸೋಮವಾರ ಹುಟ್ಟುಹಬ್ಬದ ಸಂಭ್ರಮದಲ್ಲಿ ಬೆಂಗಳೂರಿನಲ್ಲಿದ್ದುಕೊಂಡೇ ತಮ್ಮ ದಾಳಗಳನ್ನು ಉರುಳಿಸಿದ್ದರು. ಅನಾರೋಗ್ಯದ ಕಾರಣದಿಂದ ದೆಹಲಿ ಭೇಟಿ ತಪ್ಪಿಸಿಕೊಂಡ ಅವರು, ಮಂಗಳವಾರ ಬೆಳಿಗ್ಗೆ ದೆಹಲಿಗೆ ತೆರಳಿದ್ದಾರೆ.

ಸಿಎಂ ಆಯ್ಕೆ ವಿಚಾರದಲ್ಲಿ ಇಷ್ಟೆಲ್ಲಾ ಟೆನ್ಷನ್ ಇದ್ದರೂ ಸಿದ್ದರಾಮಯ್ಯ ಮಾತ್ರ ಏನೂ ಆಗೇ ಇಲ್ಲವೇನೋ ಅನ್ನುವಂತೆ ಇದ್ದಾರೆ. ದೆಹಲಿ ಹೋಟೆಲ್‌ನಲ್ಲಿ ಅವರು ಶಿಳ್ಳೆ ಹೊಡೆಯುತ್ತಾ ಆರಾಮಾಗಿ ಇರುವ ವಿಡಿಯೋವೊಂದು ಸದ್ಯ ಸಖತ್ ವೈರಲ್ ಆಗಿದೆ.
Whistler #Siddaramaiah! pic.twitter.com/rGf2K9jq5L
— Imran Khan (@KeypadGuerilla) May 15, 2023
ವಿಡಿಯೋದಲ್ಲಿ ಶಿಳ್ಳೆ ಹೊಡೆಯುತ್ತಾ ಅವರು ಏನನ್ನೋ ಯೋಚನೆ ಮಾಡುತ್ತಿರುವುದನ್ನು ಕಾಣಬಹುದು. ಬಹುಷ ಮುಂದಿನ ರಾಜಕೀಯ ಪಟ್ಟುಗಳ ಬಗ್ಗೆ ಚಿಂತಿಸುತ್ತಿರಬಹುದೇನೋ ಎಂದು ಅನಿಸುತ್ತದೆ.
ಇದೇ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರ ಕೊಡಲು ಅವರು ನಿರಾಕರಿಸಿದರು. ಸಿಎಂ ಆಯ್ಕೆ ಮಾಡುವುದಕ್ಕಿಂತೆ 135 ಸ್ಥಾನಗಳನ್ನು ಗೆಲ್ಲುವುದು ಸುಲಭ ಅನಿಸುತ್ತದೆಯಾ ಎನ್ನುವ ಪ್ರಶ್ನೆಗೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಈಗ ಯಾವ ಪ್ರಶ್ನೆಯನ್ನು ಕೇಳಬೇಡಿ ಎಂದರು.
ಅವರು ಶಿಳ್ಳೆ ಹೊಡೆಯುತ್ತಾ ನಿಂತಿದ್ದಾಗ ಮತ್ತೊಬ್ಬ ಪತ್ರಕರ್ತ ಈ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡ್ತೀರಾ ಎಂದು ಕೇಳಿದ್ದಕ್ಕೆ, ನಾನು ನಿನ್ನನ್ನು ಭೇಟಿ ಮಾಡುತ್ತೇನೆ, ಎಂದು ತೀಕ್ಷ್ಣವಾಗಿಯೇ ಉತ್ತರ ನೀಡಿದರು.
ಇಂದೇ ಸಿಎಂ ಆಯ್ಕೆ ಬಹುತೇಕ ಫೈನಲ್
ಸಿಎಂ ಆಯ್ಕೆ ವಿಚಾರವನ್ನು ಮುಂದುವರೆಸದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಮಂಗಳವಾರವೇ ಮುಂದಿನ ಸಿಎಂ ಬಗ್ಗೆ ನಿರ್ಧಾರ ಮಾಡಲಿದೆ. ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ಮಧ್ಯಾಹ್ನ ಸೋನಿಯಾ ಗಾಂಧಿ ದೆಹಲಿಗೆ ಆಗಮಿಸಲಿದ್ದು, ಚರ್ಚೆ ನಡೆಸಿದ ಬಳಿಕ ತೀರ್ಮಾನ ಮಾಡುವ ಸಾಧ್ಯತೆ ಇದೆ.
ಶಾಸಕರ ಅಭಿಪ್ರಾಯವನ್ನು ಆಧರಿಸಿಯೇ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ರಾಹುಲ್ ಗಾಂಧಿ ಕೂಡ ಒಲವು ತೋರಿದ್ದಾರೆ. ಸಿದ್ದರಾಮಯ್ಯ ಮತ್ತವರ ಚಿಂತನೆಗಳ ಮೇಲೆ ರಾಹುಲ್ ಗಾಂಧಿಗೆ ವಿಶೇಷ ಒಲವಿದೆ, ಅವರು ಕೂಡ ಸಿದ್ದರಾಮಯ್ಯಗೆ ಬೆಂಬಲ ನೀಡುವ ಸಾಧ್ಯತೆ. ಈಗಾಗಲೇ ಸಿದ್ದರಾಮಯ್ಯ ಬೆಂಬಲಿಗರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಸಂಭ್ರಮಿಸುತ್ತಿದ್ದಾರೆ.












Click it and Unblock the Notifications