Sanoj Mishra: ನಿರ್ದೇಶಕ ಸನೋಜ್ ಮಿಶ್ರಾ ಜೈಲಿಗೆ ಕಳುಹಿಸಿದ ಮಹಿಳೆ ಯುಟರ್ನ್
ಮಹಾಕುಂಭದಲ್ಲಿ ವೈರಲ್ ಆದ ಹುಡುಗಿ ಮೊನಾಲಿಸಾಗೆ ಚಿತ್ರದಲ್ಲಿ ಪಾತ್ರವನ್ನು ನೀಡುವ ಆಫರ್ ನೀಡಿ ನಿರ್ದೇಶಕ ಸನೋಜ್ ಮಿಶ್ರಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಆದರೆ ಇತ್ತೀಚೆಗೆ ಅವರ ಲಿವ್-ಇನ್ ಸಂಗಾತಿ ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದು, ಇದರಿಂದಾಗಿ ಸನೋಜ್ ಮಿಶ್ರಾ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಈಗ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ಆರೋಪ ಮಾಡಿದ ಮಹಿಳೆ ಯು-ಟರ್ನ್ ಹೊಡೆದಿದ್ದಾರೆ. ಈ ಮಹಿಳೆ ಈಗ ಮುಂದೆ ಬಂದು ತನ್ನ ಆರೋಪಗಳನ್ನು ಹಿಂತೆಗೆದುಕೊಂಡಿದ್ದಾರೆ.
ಹೌದು ನಿರ್ದೇಶಕ ಸನೋಜ್ ಮಿಶ್ರಾ ಅವರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊರಿಸಿದ್ದ ಮಹಿಳೆ ಇದೀಗ ಉಲ್ಟಾ ಹೊಡೆದಿದ್ದಾರೆ. ಈಗ ಆ ಮಹಿಳೆ ಮುಂದೆ ಬಂದು ಪ್ರಕರಣವನ್ನು ವಾಪಸ್ ಪಡೆದಿದ್ದಾರೆ. ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳೆ, ನಾನು 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್'ನಲ್ಲಿ ಸನೋಜ್ ಜೊತೆ ಕೆಲಸ ಮಾಡುತ್ತಿದ್ದೆ. ಚಿತ್ರದ ಚಿತ್ರೀಕರಣದ ನಂತರ ಸನೋಜ್ ಮಿಶ್ರಾ ಮೊನಾಲಿಸಾ ಚಿತ್ರರಂಗಕ್ಕೆ ತರಲು ಬಂದರು. ಮೊನಾಲಿಸಾ ಸನೋಜ್ ಅವರೊಂದಿಗೆ ವೈರಲ್ ಆದರು. ಕೆಲ ಜನರು ಅವರಿಬ್ಬರ ಬಗ್ಗೆ ನನಗೆ ನಕಲಿ ಚಿತ್ರಗಳನ್ನು ಕಳುಹಿಸಲು ಪ್ರಾರಂಭಿಸಿದರು. ಸನೋಜ್ ಮಿಶ್ರಾ ಬಗ್ಗೆ ನನಗೆ ಕೆಟ್ಟದಾಗಿ ಹೇಳಲು ಶುರು ಮಾಡಿದರು. ನಾನು ಕೋಪಗೊಂಡೆ.
ಆ ಸಮಯದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ನಾನು ಕೋಪಗೊಂಡು ಸನೋಜ್ ಮಿಶ್ರಾ ಅವರನ್ನು ಸಂಪರ್ಕಿಸಲು ಸುಮಾರು ಬಾರಿ ಪ್ರಯತ್ನ ಮಾಡಿದೆ. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ನಾನು ಅವರ ವಿರುದ್ಧ ಪ್ರಕರಣ ದಾಖಲಿಸಿದೆ' ಎಂದು ಆ ಮಹಿಳೆ ಹೇಳಿದ್ದಾಳೆ. 'ನಂತರ ಸತ್ಯ ತಿಳಿದಾಗ ನನಗೆ ತುಂಬಾ ಬೇಸರವಾಯಿತು. ಪ್ರಕರಣವನ್ನು ಹಿಂಪಡೆಯಲು ನಾನು ನ್ಯಾಯಾಲಯಕ್ಕೆ ಹೋಗಿದ್ದೆ' ಎಂದಿದ್ದಾರೆ.

ಇದೇ ವೇಳೆ ಆ ಮಹಿಳೆ ತನ್ನನ್ನು ಸನೋಜ್ ಮಿಶ್ರಾ ವಿರುದ್ಧ ಕೆಲವರು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಅವರ ಬೆದರಿಕೆಗೆ ಹೆದರಿ ನಾನು ಇದೆಲ್ಲಾ ಮಾಡುತ್ತಿದ್ದೇನೆ. ಆದರೂ ನಾನು ಕೇಸ್ ವಾಪಾಸ್ ಪಡೆಯಲು ಮುಂದಾಗಿದ್ದೇನೆ. ನನಗೆ ಏನಾದರೂ ತೊಂದರೆಯಾದರೆ, ಆ ನಾಲ್ವರು ಜನರು ಅದಕ್ಕೆ ಜವಾಬ್ದಾರರು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಆದರೆ ಆ ನಾಲ್ವರು ಯಾರು? ಯಾಕಾಗಿ ಈ ಕೆಲಸ ಮಾಡುತ್ತಿದ್ದಾರೆ ಅನ್ನೋದರ ಬಗ್ಗೆ ಸ್ಪಷ್ಟತೆ ಇಲ್ಲ.
ಮೊನಾಲಿಸಾಗೆ ನಟನೆ ಕಲಿಸುತ್ತಿರುವ ಸನೋಜ್
ಸನೋಜ್ ಮಿಶ್ರಾ ಇದೀಗ 'ದಿ ಡೈರಿ ಆಫ್ ಮಣಿಪುರ' ಚಿತ್ರವನ್ನು ನಿರ್ಮಿಸಲಿದ್ದಾರೆ. ಇದರಲ್ಲಿ ಅವರು ಮಹಾಕುಂಭದಲ್ಲಿ ವೈರಲ್ ಆದ ಮೊನಾಲಿಸಾಗೆ ಪ್ರಮುಖ ನಟಿಯ ಪಾತ್ರವನ್ನು ನೀಡಿದ್ದಾರೆ. ಇದಲ್ಲದೆ ಸನೋಜ್ ಮಿಶ್ರಾ ಅವರು ಮೊನಾಲಿಸಾ ಅವರನ್ನು ನಟನೆಗೆ ತಯಾರಿಸುತ್ತಿದ್ದಾರೆ.
ಮೊನಾಲಿಸಾ ವೀಡಿಯೊಗಳು ಪ್ರತಿದಿನ ವೈರಲ್ ಆಗುತ್ತಿದ್ದು ಅದರಲ್ಲಿ ನೃತ್ಯ ಮತ್ತು ನಟನೆಯನ್ನು ಕಾಣಬಹುದು. ದಿ ಡೈರಿ ಆಫ್ ಮಣಿಪುರವು ಮಣಿಪುರದ ಹಿಂಸಾಚಾರದ ಕಥೆಯ ಕುರಿತು 2025 ರ ಮುಂಬರುವ ಬಾಲಿವುಡ್ ಚಲನಚಿತ್ರವಾಗಿದೆ. ಹಿರಿಯ ನಟ ಅನುಪಮ್ ಖೇರ್ ಸೇನಾ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ದೀಪಕ್ ತಿಜೋರಿ, ಮುಖೇಶ್ ತಿವಾರಿ ಮತ್ತು ಅಮಿತ್ ರಾವ್ ಅವರಂತಹ ಇತರ ಗಮನಾರ್ಹ ನಟರು ಇದರಲ್ಲಿ ಇದ್ದಾರೆ. ಈ ಯೋಜನೆಯು 20 ಕೋಟಿ ಬಜೆಟ್ ಅನ್ನು ಹೊಂದಿದೆ.












Click it and Unblock the Notifications