Rajni Bector: 300 ರೂಪಾಯಿಯ ಓವನ್‌ನಿಂದ ಆರಂಭಿಸಿ 7,400 ಕೋಟಿ ರೂಪಾಯಿಯ ಉದ್ಯಮ ಕಟ್ಟಿದ ಮಹಿಳೆ!

ಒಂದು ಸಣ್ಣ ಓವನ್‌ನಿಂದ ಎಷ್ಟು ದೊಡ್ಡ ಉದ್ಯಮ ಕಟ್ಟಬಹುದು? ಕೆಲವೇ ನೂರು ರೂಪಾಯಿಗಳ ಬಂಡವಾಳದಿಂದ ಸಾವಿರಾರು ಕೋಟಿ ರೂಪಾಯಿಗಳ ಕಂಪನಿಯನ್ನು ಬೆಳೆಸಲು ಸಾಧ್ಯವೇ? ಈ ಪ್ರಶ್ನೆಗಳಿಗೆ ಉತ್ತರ ಪಂಜಾಬ್‌ನ ಉದ್ಯಮಿ ರಜನಿ ಬೆಕ್ಟರ್ ಅವರ ಜೀವನದಲ್ಲಿದೆ. ಕೇವಲ 300 ರೂಪಾಯಿಯ ಓವನ್‌ನೊಂದಿಗೆ ತಮ್ಮ ಮನೆಯ ಅಡುಗೆಮನೆಯಲ್ಲಿ ಆರಂಭಿಸಿದ ಉದ್ಯಮವನ್ನು ಅವರು ಇಂದು ಸುಮಾರು 7,400 ಕೋಟಿ ರೂಪಾಯಿ ಮೌಲ್ಯದ ಆಹಾರೋದ್ಯಮವಾಗಿ ಬೆಳೆಸಿದ್ದಾರೆ. ಅವರ ಯಶೋಗಾಥೆ ಛಲ, ಪರಿಶ್ರಮ, ಆತ್ಮವಿಶ್ವಾಸ ಮತ್ತು ದೂರದೃಷ್ಟಿಯ ಅಪೂರ್ವ ನಿದರ್ಶನ.

1970ರ ದಶಕದಲ್ಲಿ ಪಂಜಾಬ್‌ನ ಲುಧಿಯಾನದಲ್ಲಿ ವಾಸಿಸುತ್ತಿದ್ದ ರಜನಿ ಬೆಕ್ಟರ್ ಅವರಿಗೆ ಅಡುಗೆ ಮಾಡುವುದು, ವಿಶೇಷವಾಗಿ ಐಸ್ಕ್ರೀಮ್, ಕೇಕ್, ಬಿಸ್ಕತ್ತು ಮತ್ತು ಬನ್‌ಗಳನ್ನು ತಯಾರಿಸುವುದೆಂದರೆ ಬಹಳ ಆಸಕ್ತಿ. ಆರಂಭದಲ್ಲಿ ಕುಟುಂಬದವರು ಮತ್ತು ಸ್ನೇಹಿತರಿಗಾಗಿ ಇವುಗಳನ್ನು ತಯಾರಿಸುತ್ತಿದ್ದರು. ಅವರ ಕೈರುಚಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

Rajani Bector From a Rs 300 Oven to a Rs 7 400 Crore Food Empire Rajni Bector s Inspiring Journey Description

ಓವನ್‌ನಿಂದ ಆರಂಭ

ಈ ಮೆಚ್ಚುಗೆಯೇ ರಜನಿ ಅವರಲ್ಲಿ ಹೊಸ ಕನಸೊಂದನ್ನು ಬಿತ್ತಿತು. ತಮಗಿರುವ ಅಡುಗೆ ಕೌಶಲವನ್ನು ಉದ್ಯಮವಾಗಿ ಪರಿವರ್ತಿಸಬಾರದೇಕೆ ಎಂಬ ಆಲೋಚನೆ ಮೂಡಿತು. ಆಗ ಅವರು ಖರೀದಿಸಿದ ಮೊದಲ ಪ್ರಮುಖ ಸಾಧನವೆಂದರೆ ಕೇವಲ 300 ರೂಪಾಯಿ ಬೆಲೆಯ ಸಣ್ಣ ಓವನ್!

ಅಡುಗೆಯ ಮೇಲಿನ ಆಸಕ್ತಿಯನ್ನು ವೃತ್ತಿಪರ ಕೌಶಲವಾಗಿ ಬೆಳೆಸಿಕೊಳ್ಳಲು ಅವರು ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಬೇಕಿಂಗ್ ತರಬೇತಿಯನ್ನೂ ಪಡೆದರು. ಹೊಸ ಹೊಸ ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರಯೋಗಗಳನ್ನು ನಡೆಸಿದರು. ಸ್ಥಳೀಯ ಜಾತ್ರೆಗಳಲ್ಲಿ ಐಸ್ಕ್ರೀಮ್ ಮಾರಾಟವನ್ನೂ ಆರಂಭಿಸಿದರು.

ಆದರೆ ಆರಂಭದ ದಿನಗಳು ಸುಲಭವಾಗಿರಲಿಲ್ಲ. ವ್ಯಾಪಾರದ ಅನುಭವವಿಲ್ಲದ ಕಾರಣ ಕೆಲವೊಮ್ಮೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇದರಿಂದ ನಷ್ಟವೂ ಉಂಟಾಯಿತು. ಆದರೂ ರಜನಿ ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ.

ಪತಿಯ ಪ್ರೋತ್ಸಾಹ, ಉದ್ಯಮಕ್ಕೆ ಹೊಸ ತಿರುವು

ರಜನಿ ಅವರ ಕನಸಿಗೆ ಪತಿ ಧರಂವೀರ್ ಬೆಕ್ಟರ್ ಬೆಂಬಲವಾಗಿ ನಿಂತರು. ಪತ್ನಿಯ ಪ್ರತಿಭೆ (talent) ಮತ್ತು ಉದ್ಯಮಶೀಲತೆಯನ್ನು ಗುರುತಿಸಿದ ಅವರು 1978ರಲ್ಲಿ 20,000 ರೂಪಾಯಿ ಹೂಡಿಕೆ ಮಾಡಿ ಐಸ್ಕ್ರೀಮ್ ತಯಾರಿಕಾ ಘಟಕ ಸ್ಥಾಪಿಸಲು ನೆರವಾದರು. ಇದು ರಜನಿ ಅವರ ಉದ್ಯಮ ಜೀವನದ ಮೊದಲ ಮಹತ್ವದ ತಿರುವು.

ಮನೆಯ ಅಡುಗೆಮನೆಗೆ ಸೀಮಿತವಾಗಿದ್ದ ಆಹಾರ (food) ತಯಾರಿಕೆ ಈಗ ಸಣ್ಣ ಕೈಗಾರಿಕೆಯ ರೂಪ ಪಡೆಯಿತು. ಉತ್ಪಾದನೆ ಹೆಚ್ಚಾಯಿತು. ಗ್ರಾಹಕರ ಸಂಖ್ಯೆಯೂ ಬೆಳೆಯತೊಡಗಿತು. ಉತ್ತಮ ಗುಣಮಟ್ಟ ಮತ್ತು ರುಚಿಗೆ ಆದ್ಯತೆ ನೀಡಿದ ಪರಿಣಾಮ ಅವರ ಉತ್ಪನ್ನಗಳು ಜನಪ್ರಿಯವಾಗತೊಡಗಿದವು. 1985ರಲ್ಲಿ ರಜನಿ ಪಂಜಾಬ್‌ನಲ್ಲಿ ಬ್ರೆಡ್ ತಯಾರಿಕಾ ಘಟಕವನ್ನು ಸ್ಥಾಪಿಸಿದರು. ಆರಂಭದಲ್ಲಿ ದಿನಕ್ಕೆ ಸುಮಾರು 5,000 ಬ್ರೆಡ್‌ಗಳನ್ನು ಉತ್ಪಾದಿಸುತ್ತಿದ್ದ ಈ ಘಟಕದ ಸಾಮರ್ಥ್ಯ ಕ್ರಮೇಣ 50,000 ಬ್ರೆಡ್‌ಗಳಿಗೆ ಏರಿತು. ಇಲ್ಲಿಂದ ಅವರ ಉದ್ಯಮದ ಬೆಳವಣಿಗೆ ಮತ್ತಷ್ಟು ವೇಗ ಪಡೆದುಕೊಂಡಿತು.

ಮೆಕ್‌ಡೊನಾಲ್ಡ್ಸ್‌ನಿಂದ ಒಲಿದ ಅವಕಾಶ

ರಜನಿ ಬೆಕ್ಟರ್ ಅವರ ಉದ್ಯಮದ ಇತಿಹಾಸದಲ್ಲಿ 1990ರ ದಶಕ ಅತ್ಯಂತ ಮಹತ್ವದ್ದಾಯಿತು. ವಿಶ್ವಪ್ರಸಿದ್ಧ ಫಾಸ್ಟ್‌ಫುಡ್ ಸಂಸ್ಥೆ ಮೆಕ್‌ಡೊನಾಲ್ಡ್ಸ್ ಭಾರತಕ್ಕೆ ಪ್ರವೇಶಿಸಿದಾಗ, ಅದರ ಬರ್ಗರ್‌ಗಳಿಗೆ ಬೇಕಾದ ಬನ್‌ಗಳನ್ನು ಪೂರೈಸುವ ಅವಕಾಶ ರಜನಿ ಅವರ ಕಂಪನಿಗೆ ದೊರೆಯಿತು.

1996ರ ವೇಳೆಗೆ ಅವರ ಸಂಸ್ಥೆ ಮೆಕ್‌ಡೊನಾಲ್ಡ್ಸ್‌ಗೆ ಬನ್‌ಗಳನ್ನು ಪೂರೈಸಲು ಆರಂಭಿಸಿತು. ಇದು ಸಣ್ಣ ಉದ್ಯಮವೊಂದು ಅಂತಾರಾಷ್ಟ್ರೀಯ ಮಟ್ಟದ ಕಂಪನಿಯ ಪೂರೈಕೆದಾರನಾಗಿ ಬೆಳೆದ ಮಹತ್ವದ ಸಾಧನೆಯಾಗಿತ್ತು. ಅಂತಾರಾಷ್ಟ್ರೀಯ ಸಂಸ್ಥೆಗಳ ಗುಣಮಟ್ಟದ ಮಾನದಂಡಗಳನ್ನು ಪೂರೈಸುವ ಮೂಲಕ ಕಂಪನಿ ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಂಡಿತು. ಮುಂದೆ ಕೆಎಫ್‌ಸಿ ಮತ್ತು ಬರ್ಗರ್ ಕಿಂಗ್‌ನಂತಹ ಪ್ರಮುಖ ಫಾಸ್ಟ್‌ಫುಡ್ ಸರಪಳಿಗಳಿಗೂ ಬೇಕರಿ ಉತ್ಪನ್ನಗಳನ್ನು ಪೂರೈಸುವ ಮಟ್ಟಕ್ಕೆ ಸಂಸ್ಥೆ ಬೆಳೆಯಿತು.

ಕ್ರೆಮಿಕಾ ಮತ್ತು ಇಂಗ್ಲಿಷ್ ಓವನ್ ಬ್ರ್ಯಾಂಡ್

ರಜನಿ ಬೆಕ್ಟರ್ ಅವರ ಉದ್ಯಮ ಕ್ರಮೇಣ ಭಾರತದ ಪ್ರಮುಖ ಆಹಾರ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು. ಅವರ ಉದ್ಯಮ 'ಕ್ರೆಮಿಕಾ' ಬ್ರ್ಯಾಂಡ್ ಬಿಸ್ಕತ್ತುಗಳು ಮತ್ತು ಇತರ ಆಹಾರ ಉತ್ಪನ್ನಗಳ ಮೂಲಕ ಜನಪ್ರಿಯವಾಯಿತು. 'ಇಂಗ್ಲಿಷ್ ಓವನ್' ಬ್ರ್ಯಾಂಡ್ ಬ್ರೆಡ್ ಮತ್ತು ಉನ್ನತ ಗುಣಮಟ್ಟದ ಬೇಕರಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿತು.

ಈ ಬೆಳವಣಿಗೆಯೊಂದಿಗೆ 'ಮಿಸೆಸ್ ಬೆಕ್ಟರ್ಸ್ ಫುಡ್ ಸ್ಪೆಷಾಲಿಟೀಸ್' ದೊಡ್ಡ ಆಹಾರೋದ್ಯಮ ಸಂಸ್ಥೆಯಾಗಿ ರೂಪುಗೊಂಡಿತು. ಇಂದು ಈ ಸಂಸ್ಥೆಯ ಉತ್ಪನ್ನಗಳು 60ಕ್ಕೂ ಹೆಚ್ಚು ದೇಶಗಳ ಮಾರುಕಟ್ಟೆಗಳನ್ನು ತಲುಪಿವೆ. ದೇಶೀಯ ಗ್ರಾಹಕರಿಗೆ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವುದರ ಜೊತೆಗೆ, ದೊಡ್ಡ ರೆಸ್ಟೋರೆಂಟ್ ಸರಪಳಿಗಳಿಗೆ ಅಗತ್ಯವಾದ ಬೇಕರಿ ಉತ್ಪನ್ನಗಳನ್ನೂ ಸಂಸ್ಥೆ ಪೂರೈಸುತ್ತಿದೆ. 2020ರ ಡಿಸೆಂಬರ್‌ನಲ್ಲಿ ಕಂಪನಿ ಷೇರು ಮಾರುಕಟ್ಟೆಗೆ ಪ್ರವೇಶಿಸಿತು. ಇದು ಸಂಸ್ಥೆಯ ಬೆಳವಣಿಗೆಯ ಮತ್ತೊಂದು ಮಹತ್ವದ ಮೈಲಿಗಲ್ಲಾಯಿತು.

ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಉದ್ಯಮಿ

ಅಡುಗೆಮನೆಯಿಂದ ಆರಂಭಿಸಿ ಬೃಹತ್ ಆಹಾರೋದ್ಯಮವನ್ನು ಕಟ್ಟಿದ ರಜನಿ ಬೆಕ್ಟರ್ ಅವರ ಸಾಧನೆಯನ್ನು ಭಾರತ ಸರ್ಕಾರವೂ ಗುರುತಿಸಿತು. 2021ರಲ್ಲಿ ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ದೇಶದ ಪ್ರತಿಷ್ಠಿತ ನಾಗರಿಕ ಗೌರವಗಳಲ್ಲಿ ಒಂದಾದ 'ಪದ್ಮಶ್ರೀ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+