Rahul Gandhi: ಇಂದಿರಾ ಗಾಂಧಿ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ರಾಹುಲ್ ಗಾಂಧಿ; ‘ಚುನಾವಣೆ ಬಂದಾಗ ಹಿಂದೂಗಳು ನೆನಪಾಗುತ್ತಾರೆಯೇ?
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರೊಂದಿಗಿನ ಅಪರೂಪದ ಫೋಟೋವೊಂದನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹಂಚಿಕೊಂಡಿದ್ದಾರೆ. ಇದರೊಂದಿಗೆ ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಬೃಹದಾರಣ್ಯಕ ಉಪನಿಷತ್ತಿನಲ್ಲಿರುವ ಶಾಂತಿ ಮಂತ್ರವನ್ನೂ ಸಹ ರಾಹುಲ್ ಗಾಂಧಿ ಅವರು ಉಲ್ಲೇಖ ಮಾಡಿದ್ದಾರೆ. ಈ ಮಂತ್ರದ ಉಲ್ಲೇಖದ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಾಗ ಹಿಂದೂಗಳು ನೆನಪಾಗುತ್ತಾರೆಯೇ ಎಂದೂ ನೆಟ್ಟಿಗರು ಕೇಳಿದ್ದಾರೆ. ರಾಹುಲ್ ಗಾಂಧಿ ಮಾಡಿದ ಟ್ವೀಟ್‌ನಲ್ಲಿ ಏನಿದೆ; ಜನ ಏನಂದ್ರು ಎನ್ನುವ ವಿವರ ಈ ಲೇಖನದಲ್ಲಿದೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ನಿಮ್ಮ ಮಡಿಲಲ್ಲಿ ಕುಳಿತು, ನಿಮ್ಮ ಎರಡೂ ಕೈಗಳನ್ನು ಹಿಡಿದು, ನಿಮ್ಮ ಧ್ವನಿಯಲ್ಲಿ ಈ ಮಂತ್ರವನ್ನು ಕೇಳುತ್ತಾ, ನಿಮ್ಮ ಹಿಂದೆ ನಾನೂ ಅದನ್ನೇ ಹೇಳುತ್ತಿದ್ದ ಆ ಕ್ಷಣಗಳು...

ಅಸತೋಮಾ ಸದ್ಗಮಯ
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂ ಗಮಯ
ಓಂ ಶಾಂತಿ, ಶಾಂತಿ, ಶಾಂತಿ.
ಅಜ್ಜಿ, ನೀವು ನನಗೆ ನೀಡಿದ ಉಡುಗೊರೆ ಎಷ್ಟು ಸುಂದರವಾಗಿದೆ! ನಿಜಕ್ಕೂ ಇದು ಅಮೂಲ್ಯವಾದ ಕೊಡುಗೆ ನಾನು ಇಂತಹ ಸುಂದರ ಕ್ಷಣವನ್ನು ಎಂದಿಗೂ ಊಹಿಸಿರಲಿಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಹಂಚಿಕೊಂಡ ಮಂತ್ರವು, ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಬೃಹದಾರಣ್ಯಕ ಉಪನಿಷತ್ತಿನಲ್ಲಿರುವ ಶಾಂತಿ ಮಂತ್ರ. ಇದನ್ನು ಜೀವನದಲ್ಲಿ ಸತ್ಯ, ಜ್ಞಾನ, ಬೆಳಕು ಮತ್ತು ಶಾಂತಿಯನ್ನು ಕೋರುವ ಪ್ರಾರ್ಥನೆಯಾಗಿ ಪಠಿಸಲಾಗುತ್ತದೆ. ಈ ಬಗ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ..
ರಾಹುಲ್ ಗಾಂಧಿ ಅವರ ಈ ಟ್ವೀಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚುನಾವಣೆಗಳು ಬಂದ ತಕ್ಷಣ ರಾಹುಲ್ ಗಾಂಧಿ ಮತ್ತೆ ಹಿಂದೂ ಧರ್ಮದ ಬಗ್ಗೆ ಹೇಗೆ ಮಾತನಾಡಲು ಪ್ರಾರಂಭಿಸುತ್ತಾರೆ ಎಂಬುದನ್ನು ಕಾದು ನೋಡಿ ಎಂದು ಕೆಲವರು ಹೇಳಿದ್ದಾರೆ. ಕೆಲವು ಅಗಲಿಕೆಗಳ ನೋವು ಎಂದಿಗೂ ಮರೆಯಾಗುವುದಿಲ್ಲ. ಮತ್ತೆ ಒಮ್ಮೆ ಮಾಡಬೇಕು ಎಂದು ಬಯಸುವ ಸಣ್ಣ ಸಣ್ಣ ಕ್ಷಣಗಳಲ್ಲಿ ಅವು ಸದಾ ನೆನಪಾಗಿ ಉಳಿಯುತ್ತವೆ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಹಲವರು ಇಂದಿರಾ ಗಾಂಧಿ ಅವರ ಕಾರ್ಯವೈಖರಿಯ ಬಗ್ಗೆ ಮಾತನಾಡಿದ್ದಾರೆ. ಭಾರತ ಕಂಡ ಅತ್ಯುತ್ತಮ ಮತ್ತು ಬಲಿಷ್ಠ ಪ್ರಧಾನಿ ಇಂದಿರಾ ಗಾಂಧಿ ಅವರು. ಅಸಾಧಾರಣ ವಿದೇಶಾಂಗ ನೀತಿ ಮತ್ತು ಅದ್ಭುತ ಆರ್ಥಿಕ ನೀತಿಯನ್ನು ಹೊಂದಿದ್ದರು ಎಂದು ಹಲವರು ಸ್ಮರಿಸಿದ್ದಾರೆ.
ಅವರ ಅಜ್ಜಿ ಇಂದಿರಾ ಗಾಂಧಿ ಅವರು ರಾಹುಲ್ ಗಾಂಧಿ ಅವರಿಗೆ ನೀಡಿದ ಅಮೂಲ್ಯ ಕ್ಷಣ ಇದು... ಅಜ್ಜಿಯ ಮಡಿಲು, ಅವರ ವಾತ್ಸಲ್ಯ, ಕೈಜೋಡಿಸುವುದು ಮತ್ತು ಮಂತ್ರಗಳ ಪ್ರತಿಧ್ವನಿ... ಕೆಲವು ನೆನಪುಗಳು ಹೃದಯದಲ್ಲಿ ಜೀವಮಾನವಿಡೀ ನೆಲೆಗೊಳ್ಳುತ್ತವೆ. ಇಂತಹ ಉಡುಗೊರೆ, ಅವರು ಎಂದಿಗೂ ಊಹಿಸಿರಲು ಸಾಧ್ಯವಿಲ್ಲ ಎಂದೂ ಕೆಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications
