ಮೋದಿ ದೇಶವನ್ನು ಬಂಡವಾಳ ಶಾಹಿಗಳಿಗೆ ಮಾರುತ್ತಿದ್ದಾರೆ: ರಾಹುಲ್ ಆರೋಪ
ನವದೆಹಲಿ,ಫೆಬ್ರವರಿ 01: ದೇಶದ ಜನರ ಖಾತೆಗೆ ಹಣ ಹಾಕುತ್ತೇನೆ ಎಂದು ಅಧಿಕಾರ ಹಿಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಆಸ್ತಿಗಳನ್ನೇ ಬಂಡವಾಳಶಾಹಿಗಳ ಕೈಗೆ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಾರ್ವಜನಿಕ್ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣ, ಬಂಡವಾಳ ಹಿಂತೆಗೆತ, ಎಫ್‌ಡಿಐ ಪ್ರಮಾಣದಲ್ಲಿನ ಏರಿಕೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಕೇಂದ್ರ ಬಜೆಟ್‌ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಇನ್ನು ಬಜೆಟ್ ಭಾಷಣ ಆರಂಭಕ್ಕೂ ಮುನ್ನ ಸೋಮವಾರ ಬೆಳಗ್ಗೆ 10.34ಕ್ಕೆ ಟ್ವೀಟ್ ಮಾಡಿದ್ದ ರಾಹುಲ್, ಎಂಎಸ್‌ಎಂಇಗಳನ್ನು ಬೆಂಬಲಿಸುವಂತೆ, ರೈತರು ಹಾಗೂ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ ಮಾಡುವಂತೆ ಆಗ್ರಹಿಸಿದ್ದರು.

ಆರೋಗ್ಯ ಕ್ಷೇತ್ರದ ವೆಚ್ಚ ಏರಿಕೆ ಮಾಡುವ ಮೂಲಕ ಜೀವಗಳನ್ನು ಉಳಿಸುವಂತೆ ಆಗ್ರಹಿಸಿದ್ದರು. ಜೊತೆಯಲ್ಲೇ ದೇಶದ ರಕ್ಷಣಾ ವೆಚ್ಚವನ್ನು ಏರಿಕೆ ಮಾಡುವ ಮೂಲಕ, ಗಡಿಗಳನ್ನು ಸುರಕ್ಷತವನ್ನಾಗಿ ಮಾಡುವಂತೆಯೂ ರಾಹುಲ್ ಆಗ್ರಹಿಸಿದ್ದರು.
ಒಟ್ಟಿನಲ್ಲಿ ಬಜೆಟ್ ಭಾಷಣ ಮುಗಿದ ಬೆನ್ನಲ್ಲೇ, ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷ ಬಜೆಟ್ ವಿರುದ್ಧ ಹಾಗೂ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಹರಿಹಾಯ್ದಿದೆ.
ಜನರ ಕೈಗಳಿಗೆ ಹಣವನ್ನು ನೀಡುವುದನ್ನು ಮರೆತುಬಿಡಿ, ನರೇಂದ್ರ ಮೋದಿ ಸರ್ಕಾರ ಭಾರತದ ಸಂಪತ್ತನ್ನು ತನ್ನ ನಿಕಟ ಬಂಡವಾಳಶಾಹಿ ಉದ್ಯಮ ಗೆಳೆಯರಿಗೆ ಹಸ್ತಾಂತರಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications