ಪ್ರಧಾನಿ ಮನಮೋಹನ್ ಸಿಂಗ್ ಸಹೋದರ ಬಿಜೆಪಿಗೆ ಸೇರ್ಪಡೆ
ಅಮೃತಸರ, ಏ 25: ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸಹೋದರ ದಲ್ಜೀತ್ ಸಿಂಗ್ ಕೊಹ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಅಮೃತಸರದಲ್ಲಿ ಶುಕ್ರವಾರ (ಏ 25) ನಡೆದ 'ಭಾರತ್ ವಿಜಯ್' ಸಾರ್ವಜನಿಕ ಸಭೆಯಲ್ಲಿ ದಲ್ಜೀತ್ ಸಿಂಗ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು.
ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ, ಅಮೃತಸರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮತ್ತು ಪಕ್ಷದ ಹಿರಿಯ ಧುರೀಣ ಅರುಣ್ ಜೇಟ್ಲಿ ಭಾಗವಹಿಸಿದ್ದ ಸಭೆಯಲ್ಲಿ ಸಿಂಗ್ ಅವರನ್ನು ಬಿಜೆಪಿಗೆ ಸ್ವಾಗತಿಸಲಾಯಿತು. (ಮೋದಿ ಅಲೆ ಮಾಧ್ಯಮ ಸೃಷ್ಟಿ: ಪ್ರಧಾನಿ)
ಲೋಕಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿನ ಈ ಬೆಳವಣಿಗೆಯಿಂದಾಗಿ ಪ್ರಧಾನಿ ಸಿಂಗ್ ಕುಟುಂಬ ಶಾಕ್ ಆಗಿದ್ದು, ಕಾಂಗ್ರೆಸ್ ಪಕ್ಷ ಕೂಡಾ ಮುಜುಗರ ಅನುಭವಿಸುವಂತಾಗಿದೆ.
ಪ್ರಧಾನಿ ಸಹೋದರ ದಲ್ಜೀತ್ ಸಿಂಗ್ ಬಿಜೆಪಿ ಸೇರ್ಪಡೆ ಸ್ವಾಗತಾರ್ಹ. ನಾನು ಅವರನ್ನು ಹೃತ್ಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆಂದು ನರೇಂದ್ರ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
(Image: PTI)

ಮನಮೋಹನ್ ಮಲಸೋದರ
ಮನಮೋಹನ್ ಸಿಂಗ್ ಪ್ರಧಾನಿಯಾದ ನಂತರ ರಾಜಕೀಯದಿಂದ ದೂರವೇ ಇದ್ದ ಮನಮೋಹನ್ ಸಿಂಗ್ ಮಲಸೋದರ ದಲ್ಜೀತ್ ಸಿಂಗ್ ಅಮೃತಸರದಲ್ಲಿ ಶುಕ್ರವಾರ ನಡೆದ ಮೋದಿ ಸಾರ್ವಜನಿಕ ಸಭೆಯಲ್ಲಿ ಅಚ್ಚರಿಯಾಗಿ ಕಾಣಿಸಿಕೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದು ಕಾಂಗ್ರೆಸ್ಸಿಗೆ ತೀವ್ರ ಮುಜುಗರವನ್ನು ಉಂಟು ಮಾಡಿದೆ.

ಸಹೋದರನನ್ನು ಹಾಡಿ ಹೊಗಳಿದ ದಲ್ಜೀತ್ ಸಿಂಗ್
ನಾನು ಪ್ರಧಾನಿ ಮನಮೋಹನ್ ಸಿಂಗ್ ಅವರ ಸಹೋದರ ಎನ್ನಲು ಹೆಮ್ಮೆಯಾಗುತ್ತಿದೆ. ಮನಮೋಹನ್ ದೇಶಕ್ಕೆ ಉತ್ತಮ ಸೇವೆಯನ್ನು ನೀಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಅವರಿಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಅಧಿಕಾರವನ್ನೇ ನೀಡಲಿಲ್ಲ. ಹೀಗಾಗಿ, ನಾನು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆಂದು ದಲ್ಜೀತ್ ಸಿಂಗ್ ಹೇಳಿದ್ದಾರೆ.

ಶಿರೋಮಣಿ ಅಕಾಲಿದಳ
ಮೋದಿ ಸಾರ್ವಜನಿಕ ಸಭೆಯಲ್ಲಿ NDA ಅಂಗಪಕ್ಷವಾದ ಶಿರೋಮಣಿ ಅಕಾಲಿದಳದ ಮುಖಂಡರೂ ವೇದಿಕೆ ಹಂಚಿಕೊಂಡಿದ್ದರು. ಈ ಸಭೆಯಲ್ಲಿ ಮೋದಿ, ದಲ್ಜೀತ್ ಸಿಂಗ್ ಅವರಿಗೆ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿದರು.

ದಲ್ಜೀತ್ ಸಿಂಗ್
ಅಮೃತಸರ ಮೂಲದ ದಲ್ಜೀತ್ ಸಿಂಗ್ ಮೂಲತಃ ಉದ್ಯಮಿ. ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಅರುಣ್ ಜೇಟ್ಲೆ ಮತ್ತು ಎರಡೂ ಪಕ್ಷದ ಮುಖಂಡರು ಸಾರ್ವಜನಿಕ ಸಭೆಯಲ್ಲಿ ಹಾಜರಿದ್ದರು.

ಮೋದಿ ಹೇಳಿಕೆ
ಇಂದು ಪ್ರಧಾನಿ ಸಹೋದರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ NDA ಮೈತ್ರಿಕೂಟಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಮುಂದಿನ ದಿನಗಳಲ್ಲಿ ದಲ್ಜೀತ್ ಸಿಂಗ್ ಅವರಿಂದ ಪಕ್ಷಕ್ಕೆ ಇನ್ನಷ್ಟು ಮಾರ್ಗದರ್ಶನ ಸಿಗಲಿದೆ ಎಂದು ಮೋದಿ ಸಭೆಯಲ್ಲಿ ಹೇಳಿದ್ದಾರೆ. ಆರನೇ ಹಂತದ ಲೋಕಸಭಾ ಚುನಾವಣೆಯ ವೇಳೆ ಅಸ್ಸಾಂ ನಲ್ಲಿ ಮತಚಲಾಯಿಸಿ ಮಾತನಾಡುತ್ತಿದ್ದ ಪ್ರಧಾನಿ ಸಿಂಗ್, ದೇಶದಲ್ಲಿ ಎಲ್ಲೂ ಮೋದಿ ಹವಾ ಇಲ್ಲ. ಮೋದಿ ಹವಾ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದರು.











Click it and Unblock the Notifications