ಪತಿಯ ಸಾವಿನ ಮಧ್ಯೆಯೂ ಪತ್ನಿಯಿಂದ ಮತದಾನ
ಜೈಪುರ, ಡಿ. 2: ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಅಸೆಂಬ್ಲಿ ಚುನಾವಣೆಗಳಲ್ಲಿ ಅಭೂತಪೂರ್ವ ದಾಖಲೆಯ ಮತದಾನವಾಗಿದೆ. ಇನ್ನು ಬಾಕಿಯಿರುವುದು ಮೀಜೋರಾಂ ಮತ್ತು ದೆಹಲಿಯಷ್ಟೇ. ಡಿಸೆಂಬರ್ 8ಕ್ಕೆ ಫಲಿತಾಂಶ.
ನಿನ್ನೆ ರಾಜಸ್ಥಾನದಲ್ಲಿ ವಿಪರೀತವೆನಿಸುವಷ್ಟು ಮತದಾನವಾಗಿದೆ . ಅದರಲ್ಲೂ ಒಬ್ಬ ಮಹಿಳೆ ಮತದಾನ ಮಾಡಿರುವುದು ನೋಡಿದರೆ ಮುಂದಿನ ಲೋಕಸಭಾ ಚುನಾವಣೆಗಾಗಿ ಮತದಾರ ಈಗಲೇ ಎದ್ದುಕುಳಿತುಕೊಳ್ಳುವುದು ಅತ್ಯಂತ ಉಚಿತವಾದೀತು. ಮತದಾನದ ದಿನ ಮನೆಗಳಲ್ಲಿ ಕ್ರಿಕೆಟ್ ಮ್ಯಾಚು ನೋಡುವುದನ್ನು ಬಿಟ್ಟು ಪ್ರಜಾತಾಂತ್ರಿಕ ಹಕ್ಕನ್ನು ಚಲಾಯಿಸದಿದ್ದರೆ ಈ ಮಹಿಳೆಗೆ ಅಪಚಾರವಾದೀತು, ಅಷ್ಟೇ!

ಸಾಮಾನ್ಯವಾಗಿ ಮತದಾನದ ಮಾರನೆಯ ದಿನ ಅತ್ಯಂತ ವಯೋವೃದ್ಧ ವ್ಯಕ್ತಿಯಿಂದ ಮತದಾನ ಅಂತಲೋ/ ಅಂಗವಿಕಲರಿಂದ ಮತದಾನ ಅಂತಲೋ/ ದೂರದ ಕುಗ್ರಾಮದಿಂದ ಎದ್ದುಬಂದು ಮತ ಚಲಾಯಿಸಿ ವೀರ ವನಿತೆ ಅಂತಲೋ ಚಿತ್ರ ಸುದ್ದಿ ಓದಿರುತ್ತೀರಿ. ಆದರೆ ಈಕೆಯದ್ದು ಅದೆಲ್ಲಕ್ಕಿಂತ ಭಿನ್ನ. ಅಶಕ್ತರು ಈ ಬಗ್ಗೆ ತುಸು ಯೋಚಿಸುವುದು ಒಳಿತು.
ಮೇವಾ ಎಂಬ 29 ವರ್ಷದ ಮಹಿಳೆ ನಿನ್ನೆ ಭಾನುವಾರ ಇಲ್ಲಿನ ಮತಕೇಂದ್ರಕ್ಕೆ ನಡೆದುಬಂದು ತಮ್ಮ ಹಕ್ಕು ಚಲಾಯಿಸಿ ಹೋಗಿದ್ದಾರೆ. ಗಮನಿಸಿ ಆಕೆ ತುಂಬು ಗರ್ಭಿಣಿ. ಗರ್ಭಿಣಿ ಬಂದರೆಂದರೆ ಮತಗಟ್ಟೆ ಅಧಿಕಾರಿಗಳೂ ಆಕೆಗೆ ಜಾಗ ಬಿಟ್ಟುಕೊಡುತ್ತಾರೆ. ಅದರಂತೆ ಇಲ್ಲಿಯೂ ಸಿಬ್ಬಂದಿ ಹೆಚ್ಚು ತ್ರಾಸಾಗದಂತೆ ಆಕೆಗೆ ಮತ ಚಲಾಯಿಸಲು ಅನುವು ಮಾಡಿಕೊಡಲು ಮುಂದಾದರು.
ಆದರೆ ವಿಷಯ ಅದಲ್ಲ. ಏನಪ್ಪಾ ಅಂದರೆ ಆಕೆಯ ಗಂಡ ಶನಿವಾರ ಸಂಜೆಯಷ್ಟೇ ತೀರಿಹೋಗಿದ್ದರು. ( ಪಂಚ ರಾಜ್ಯಗಳಲ್ಲಿ ಚುನಾವಣೆ ವೇಳಾಪಟ್ಟಿ )
ಸೋ, ಭಾನುವಾರ ಗಂಡನ ಅಂತ್ಯಕ್ರಿಯಾದಿಗಳು ಮುಗಿಯುತ್ತಿದ್ದಂತೆ ತುಂಬು ಗರ್ಭಿಣಿ ಮೇವಾ ಸೀದಾ ಮತಗಟ್ಟೆಗೆ ಬಂದು ಮತ ಹಾಕಿಹೋದರು. ಅಂದಹಾಗೆ, ಮರಳು ಭೂಮಿಯಲ್ಲಿ ಮೊದಲ ಬಾರಿಗೆ ಗರಿಷ್ಠ (ಶೇ. 75 ರಷ್ಟು) ಮತದಾನವಾಗಿದೆ. 200 ಸದಸ್ಯರ ವಿಧಾನಸಭೆ ಈ ಬಾರಿಯೂ ತನ್ನದೇ ಎಂದು ಕಾಂಗ್ರೆಸ್ ಹೇಳಿಕೊಂಡಿದ್ದರೆ ಖಂಡಿತಾ ಈ ಬಾರಿಯ ಗೆಲುವು ನಮ್ಮದೇ ಎಂದು ವಸುಂಧರಾ ರಾಜೆ ಸಿಂಧ್ಯಾ ವಿಶ್ವಾಸ ವ್ಯಕ್ಯಪಡಿಸಿದ್ದಾರೆ.


Click it and Unblock the Notifications
