ಅಹಂಕಾರಿ ಒಕ್ಕೂಟ! ವಿಪಕ್ಷಗಳ ಒಕ್ಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ
ಮಧ್ಯ ಪ್ರದೇಶದಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ಈಗಾಗಲೇ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಹಲವು ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಜನರನ್ನು ಸೆಳೆಯಲು ಮುಂದಾಗಿದೆ. ಇಂದು ಭೋಪಾಲ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ವಿಕ್ಷಗಳ ಒಕ್ಕೂಟವನ್ನು ಅಹಂಕಾರಿ ಒಕ್ಕೂಟ ಎಂದು ಕರೆದ ಅವರು, ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು. ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದರು.

ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡುವ ಹೊಸ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮಾತನಾಡಿದ ಅವರು, "ಅಹಂಕಾರಿ (ವಿಪಕ್ಷಗಳ) ಒಕ್ಕೂಟವು ಮಹಿಳಾ ಮೀಸಲಾತಿ ಮಸೂದೆಯನ್ನು ಇಷ್ಟವಿಲ್ಲದೆ ಬೆಂಬಲಿಸಿತು" ಎಂದು ಹೇಳಿದರು. ಮಸೂದೆ ಜಾರಿಗೆ ರಾಷ್ಟ್ರಪತಿಗಳ ಅನುಮೋದನೆಗೆ ಬಾಕಿ ಇದೆ ಎಂದು ಮಾಹಿತಿ ನೀಡಿದರು.
ವಿಪಕ್ಷಗಳ ವಿರುದ್ಧ ಆರೋಪ
ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸಿದರು, ಮಸೂದೆಗಳನ್ನು ಹರಿದು ಹಾಕಿದರು ಮತ್ತು ಸ್ಪೀಕರ್ ಮೇಲೆ ಹಲ್ಲೆ ನಡೆಸಿದರು, ಆದರೆ ಜನರು ಈಗ ಅವರ ಬಗ್ಗೆ ಅರಿತುಕೊಂಡಿದ್ದಾರೆ ಎಂದು ಮೋದಿ ವಿಪಕ್ಷಗಳ ನಾಯಕರ ವಿರುದ್ಧ ಹರಿ ಹಾಯ್ದರು.
"ವಿಪಕ್ಷಗಳ ಉದ್ದೇಶ ಸರಿಯಿಲ್ಲ, ಒಮ್ಮೆ ಅವರಿಗೆ ಅವಕಾಶ ಸಿಕ್ಕರೆ, ಅಂಹಂಕಾರಿಗಳ ಒಕ್ಕೂಟವು ತಾಯಂದಿರು ಮತ್ತು ಸಹೋದರಿಯರಿಗೆ ದ್ರೋಹ ಮಾಡುತ್ತದೆ" ಎಂದು ಪ್ರಧಾನಿ ಮೋದಿ ಆರೋಪಿಸಿದರು.
ಮಧ್ಯಪ್ರದೇಶದ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. "ಬಿಜೆಪಿಯ ಎಲ್ಲಾ ಭರವಸೆಗಳಿಗೆ ಇದು ನಾನು ಗ್ಯಾರಂಟಿ ಕೊಡುತ್ತೇನೆ" ಎಂದು ಅವರು ಹೇಳಿದರು, ತಮ್ಮ ಪಕ್ಷವು ನೀಡುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.
ಕಾಂಗ್ರೆಸ್ ಮಹಿಳೆಯರಿಗೆ ಏನೂ ಮಾಡಿಲ್ಲ
ಕಾಂಗ್ರೆಸ್ ಮಹಿಳೆಯರಿಗಾಗಿ ಏನನ್ನೂ ಮಾಡಲಿಲ್ಲ, ಬಿಜೆಪಿ ಶೌಚಾಲಯಗಳನ್ನು ನಿರ್ಮಿಸಿದೆ ಮತ್ತು ಉಜ್ವಲ ಯೋಜನೆಯಂತಹ ಮಹಿಳಾ ಕೇಂದ್ರಿತ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮೋದಿ ಹೇಳಿದರು. ಬಿಜೆಪಿ ಅಭಿವೃದ್ಧಿಗಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ಮತಕ್ಕಾಗಿ ಕೆಲಸ ಮಾಡುತ್ತದೆ ಎಂದರು.
ಕಾಂಗ್ರೆಸ್‌ನವರು ಮಧ್ಯಪ್ರದೇಶವನ್ನು 'ಬಿಮಾರು' ರಾಜ್ಯವನ್ನಾಗಿ ಮಾಡಿದ್ದಾರೆ. ಅವರು ಬಡತನ ರೇಖೆ ಅಥವಾ ಮತಗಳ ಕೆಳಗೆ ಜನರನ್ನು ಇಟ್ಟುಕೊಂಡಿದ್ದಾರೆ. ಅವರು ಭಾರತವನ್ನು 20 ನೇ ಶತಮಾನಕ್ಕೆ ವಾಪಸ್ ಕರೆದೊಯ್ಯುತ್ತಾರೆ ಎಂದರು.
ಚುನಾವಣಾ ಪೂರ್ವ ಸಮೀಕ್ಷೆಗಳು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಇದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ರಾಜ್ಯದಲ್ಲಿ ಅಧಿಕಾರವನ್ನು ಮರಳಿ ಪಡೆಯಲು ಯೋಜನೆಗಳನ್ನು ರೂಪಿಸಿದೆ.












Click it and Unblock the Notifications