ಮೋದಿ-ಮೆಲೋನಿ 'ಮೆಲೋಡಿ' ವಿಡಿಯೋ ವೈರಲ್: ಇಟಲಿ ಪ್ರವಾಸದಲ್ಲಿ ಸುದ್ದಿಯಾಯ್ತು ಗಿಫ್ಟ್
ನವದೆಹಲಿ: ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಭೇಟಿ ಸದಾ ಒಂದಲ್ಲ ಒಂದು ಕಾರಣಕ್ಕೆ ಕುತೂಹಲ ಮೂಡಿಸುತ್ತದೆ. ಇಬ್ಬರೂ ನಾಯಕರು ಭೇಟಿಯಾದಾಗಲೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ 'ಮೆಲೋಡಿ' ಟ್ರೆಂಡ್ ಶುರುವಾಗುತ್ತದೆ. ಇದೀಗ ಈ ಟ್ರೆಂಡ್ಗೆ ಮತ್ತಷ್ಟು ಪುಷ್ಠಿ ನೀಡುವಂತಹ, ಇಬ್ಬರೂ ನಾಯಕರ ಸ್ನೇಹ ಸಾರುವ ಮತ್ತೊಂದು ಕ್ಯೂಟ್ ವಿಡಿಯೋ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಬಾರಿ ಪ್ರಧಾನಿ ಮೋದಿಯವರು ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಜನಪ್ರಿಯ 'ಮೆಲೋಡಿ' ಚಾಕೊಲೇಟ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದಾರೆ.
ಜಾಗತಿಕ ಶೃಂಗಸಭೆಯೊಂದರ ನೇಪಥ್ಯದಲ್ಲಿ ಉಭಯ ನಾಯಕರು ಭೇಟಿಯಾದ ಸಂದರ್ಭದಲ್ಲಿ ಈ ಸ್ವಾರಸ್ಯಕರ ಘಟನೆ ನಡೆದಿದೆ. ಭೇಟಿಯ ವೇಳೆ ಉಭಯ ಕುಶಲೋಪರಿ ವಿಚಾರಿಸಿದ ಬಳಿಕ, ಪ್ರಧಾನಿ ಮೋದಿಯವರು ನಗುನಗುತ್ತಲೇ ಇಟಲಿ ಪ್ರಧಾನಿಗೆ 'ಮೆಲೋಡಿ' ಚಾಕೊಲೇಟ್ ಅನ್ನು ನೀಡಿದ್ದಾರೆ. ಅನಿರೀಕ್ಷಿತ ಉಡುಗೊರೆಯನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ ಜಾರ್ಜಿಯಾ ಮೆಲೋನಿ ಅವರು ಮುಖದಲ್ಲಿ ಅಚ್ಚರಿ ಹಾಗೂ ಮಂದಹಾಸ ಬೀರಿದ್ದಾರೆ.

ಈ ವಿಡಿಯೋವನ್ನು ಜಾರ್ಜಿಯಾ ಮೆಲೋನಿ ಅವರೇ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಜಾಲತಾಣಗಳಲ್ಲಿ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಈ ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ.
'ಮೋದಿ' ಮತ್ತು 'ಮೆಲೋನಿ' ಹೆಸರಿನ ಸಂಯೋಜನೆಯಿಂದ ನೆಟ್ಟಿಗರು ಸೃಷ್ಟಿಸಿರುವ 'ಮೆಲೋಡಿ' ಹ್ಯಾಶ್ಟ್ಯಾಗ್, ಭಾರತದ ಜನಪ್ರಿಯ ಕ್ಯಾಂಡಿ ಮೆಲೋಡಿ ಚಾಕೊಲೇಟ್ ಹೆಸರಿನೊಂದಿಗೆ ನಿಖರವಾಗಿ ಹೊಂದಾಣಿಕೆಯಾಗುವುದೇ ಈ ವಿಡಿಯೋ ಇಷ್ಟೊಂದು ವೈರಲ್ ಆಗಲು ಪ್ರಮುಖ ಕಾರಣವಾಗಿದೆ.
ಈ ಹಿಂದೆ ದುಬೈನಲ್ಲಿ ನಡೆದ ಕಾಪ್-28 ಶೃಂಗಸಭೆ ಹಾಗೂ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲೂ ಇವರಿಬ್ಬರ ಸೆಲ್ಫಿ ವಿಡಿಯೋಗಳು 'ಹಲೋ ಫ್ರಮ್ ಮೆಲೋಡಿ ಟೀಮ್' ಎಂಬ ಶೀರ್ಷಿಕೆಯೊಂದಿಗೆ ಭಾರಿ ಸದ್ದು ಮಾಡಿದ್ದವು. ಆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿರುವ ನೆಟ್ಟಿಗರು, ಇದೀಗ ಚಾಕೊಲೇಟ್ ನೀಡಿದ ವಿಡಿಯೋಗೆ ಕಮೆಂಟ್ಗಳ ಸುರಿಮಳೆಗರೆಯುತ್ತಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆಗಳಂತೂ ಅತ್ಯಂತ ತಮಾಷೆಯಾಗಿವೆ. "ಮೆಲೋಡಿ ಚಾಕೊಲೇಟ್ ತಿನ್ನುತ್ತಾ ಮೆಲೋಡಿ ಟೀಮ್ ಸಭೆ ನಡೆಸುತ್ತಿದೆ," ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು "ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಇದೊಂದು ಅತ್ಯಂತ ಮಧುರವಾದ ಕ್ಷಣ, ರಾಜತಾಂತ್ರಿಕತೆಯಲ್ಲಿ ಇದೊಂದು ಹೊಸ ಮೈಲಿಗಲ್ಲು" ಎಂದು ಬಣ್ಣಿಸಿದ್ದಾರೆ.
Thank you for the gift pic.twitter.com/7ePxbJwPbA
— Giorgia Meloni (@GiorgiaMeloni) May 20, 2026
ಒಟ್ಟಿನಲ್ಲಿ, ಗಂಭೀರ ರಾಜಕೀಯ ಚರ್ಚೆಗಳು, ಜಾಗತಿಕ ಬಿಕ್ಕಟ್ಟುಗಳು ಹಾಗೂ ಒಪ್ಪಂದಗಳ ನಡುವೆ ಪ್ರಧಾನಿ ಮೋದಿ ಹಾಗೂ ಮೆಲೋನಿ ಅವರ ಈ 'ಮೆಲೋಡಿ' ಚಾಕೊಲೇಟ್ ವಿನಿಮಯದ ವಿಡಿಯೋ ಎಲ್ಲರ ಮುಖದಲ್ಲೂ ನಗು ತರಿಸುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications