ಭಾರತದ ಪೌರತ್ವ ಕೊಡಿ: ರಾಷ್ಟ್ರಪತಿಗೆ ಪತ್ರ ಬರೆದ ಪಾಕಿಸ್ತಾನ ಮಹಿಳೆ ಸೀಮಾ ಹೈದರ್
ತನ್ನ ಪ್ರಿಯಕರನ ಜೊತೆ ಇರುಲು ಪಾಕಿಸ್ತಾನ ದಾಟಿ ಭಾರತಕ್ಕೆ ಬಂದಿರುವ ಸೀಮಾ ಹೈದರ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಭಾರತೀಯ ಪೌರತ್ವವನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ತನ್ನ ಪ್ರಿಯಕರ ಸಚಿನ್ ಮೀನಾ ಜೊತೆ ಇರಲು ಬಂದಿದ್ದು, ವಿವಾದಕ್ಕೆ ಕಾರಣವಾಗಿದೆ.
30 ವರ್ಷದ ಮಹಿಳೆಯ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿರುವ ನಡುವೆಯೇ ಈ ಹೊಸ ಬೆಳವಣಿಗೆ ನಡೆದಿದೆ. ಮೇ ತಿಂಗಳಿನಲ್ಲಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದು ಸದ್ಯ ಪ್ರಿಯಕರನ ಜೊತೆ ಜೀವಿಸುತ್ತಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿರುವ ಅರ್ಜಿಯಲ್ಲಿ, ಸೀಮಾ ಹೈದರ್ ಹೈದರ್ ಭಾರತದಲ್ಲಿ ಉಳಿಯಲು ಅನುಮತಿ ಕೋರಿದ್ದಾರೆ. ತಾನು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಪ್ರಭಾವಿತಳಾಗಿದ್ದೇನೆ ಎಂದು ಹಿಂದೂಸ್ತಾನ್ ವೆಬ್‌ಸೈಟ್ ವರದಿ ಮಾಡಿದೆ. ಪಾಕಿಸ್ತಾನ ಮಹಿಳೆಯನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕು ಎನ್ನುವ ಒತ್ತಾಯ ಹೆಚ್ಚಾಗುತ್ತಿದ್ದು, ಈ ನಡುವೆ ಮನವಿ ಸಲ್ಲಿಸಲಾಗಿದೆ.
ಪಾಕಿಸ್ತಾನಕ್ಕೆ ಗಡೀಪಾರು ಮಾಡಲು ಒತ್ತಾಯ
2020 ರಲ್ಲಿ ಆನ್‌ಲೈನ್ ಗೇಮ್ ಪಬ್‌ಜಿಯ ಖಾಸಗಿ ಚಾಟ್‌ರೂಮ್‌ನಲ್ಲಿ ಸೀಮಾ ಹೈದರ್ ತನ್ನ ಪಾಲುದಾರ ಸಚಿನ್ ಮೀನಾರನ್ನು ಭೇಟಿಯಾಗಿದ್ದರು. ಪಬ್‌ಜಿ ಮತ್ತು ನಂತರ ವಾಟ್ಸಾಪ್ ಸಂಭಾಷಣೆಗಳ ಮೂಲಕ ಅವರ ಸ್ನೇಹವು ಪ್ರೀತಿಯಾಗಿ ಅರಳಿತು, ಸೀಮಾ ಹೈದರ್ ಈ ವರ್ಷ ಮಾರ್ಚ್‌ನಲ್ಲಿ ಸಚಿನ್ ಅವರೊಂದಿಗೆ ಕಠ್ಮಂಡುವಿನಲ್ಲಿ ಹೋಟೆಲ್ ಕೊಠಡಿಯಲ್ಲಿ ಒಂದು ವಾರ ಜೊತೆಗಿದ್ದರು.
ಕರಾಚಿಯಿಂದ ದುಬೈಗೆ ತೆರಳಿ ಅಲ್ಲಿಂದ ನೇಪಾಳಕ್ಕೆ ಬಂದಿದ್ದರು. ಸೀಮಾ ಹೈದರ್ ತನ್ನ ನಾಲ್ವರು ಮಕ್ಕಳೊಂದಿಗೆ ಲಕ್ನೋ ಮತ್ತು ಆಗ್ರಾ ಮೂಲಕ ಗ್ರೇಟರ್ ನೋಯ್ಡಾಗೆ ಪ್ರಯಾಣ ಬೆಳೆಸಿದರು ಮತ್ತು ಅಂದಿನಿಂದ ತನ್ನ ಪ್ರಿಯಕರನೊಂದಿಗೆ ವಾಸಿಸುತ್ತಿದ್ದಾರೆ.
ಜುಲೈ 4 ರಂದು ಸೀಮಾ ಹೈದರ್, ಸಚಿನ್ ಮೀನಾ ಮತ್ತು ಆತನ ತಂದೆಯನ್ನು ಗೌತಮಬುದ್ಧ ನಗರ ಪೊಲೀಸರು ಬಂಧಿಸಿದ್ದರು. ಮೂರು-ನಾಲ್ಕು ದಿನಗಳ ನಂತರ, ಮೂವರಿಗೂ ಸ್ಥಳೀಯ ನ್ಯಾಯಾಲಯದಿಂದ ಜಾಮೀನು ಸಿಕ್ಕಿತ್ತು.
ಆಕೆಯ ಸಂಬಂಧಿ ಮತ್ತು ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಕೆಯ ಸಹೋದರ ಮತ್ತು ಚಿಕ್ಕಪ್ಪನ ಬಗ್ಗೆ ಉತ್ತರ ಪ್ರದೇಶ ಪೋಲೀಸ್ ನ ಭಯೋತ್ಪಾದನಾ ನಿಗ್ರಹ ದಳವು ಎರಡು ದಿನಗಳ ಕಾಲ ಆಕೆಯನ್ನು ಸಚಿನ್ ಮೀನಾ ಜೊತೆ ವಿಚಾರಣೆ ನಡೆಸಿದೆ.
ಸೀಮಾ ಹೈದರ್ ಇಂಗ್ಲೀಷ್ ಭಾಷೆ ಗೊತ್ತಿದ್ದು, ಓದಲು ಬರೆಯಲು ಬರುತ್ತದೆ ಎಂದು ವರದಿಯಾಗಿದೆ. ಹೈದರ್ ಬುದ್ಧಿವಂತೆಯಾಗಿದ್ದು, ಟಿವಿ ಸಂದರ್ಶನಗಳನ್ನು ನೀಡುವಾಗ ಕಷ್ಟಕರವಾದ ಹಿಂದಿ ಪದಗಳನ್ನು ಬಳಸುವುದನ್ನು ಕೇಳಿದ ಕಾರಣ ಯುಪಿ ಎಟಿಎಸ್ ಅಧಿಕಾರಿಗಳು ಹಿಂದಿಯಲ್ಲಿ ಹೈದರ್ ಅವರ ಪ್ರಾವೀಣ್ಯತೆಯ ಬಗ್ಗೆಯೂ ಪ್ರಶ್ನಿಸಿದ್ದಾರೆ ಎಂದು ಮೂಲಗಳು ವೆಬ್‌ಸೈಟ್‌ಗೆ ತಿಳಿಸಿವೆ.
ಸೀಮಾಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವಂತೆ ಯುಪಿ ಎಟಿಎಸ್ ಶಿಫಾರಸು ಮಾಡಿದೆ ಎಂದು ಮೂಲಗಳು ಹಿಂದೂಸ್ತಾನ್ ವೆಬ್‌ಸೈಟ್‌ಗೆ ತಿಳಿಸಿವೆ ಎಂದು ವರದಿಯಾಗಿದೆ. ಪಾಕಿಸ್ತಾನಿ ಮಹಿಳೆ ತನ್ನ ದೇಶಕ್ಕೆ ಮರಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications