HMPV: ಎಚ್‌ಎಂಪಿವಿ ವೈರಸ್ ಭಾರತದ ಮೇಲೂ ಪರಿಣಾಮ ಬೀರುತ್ತಾ? ಸ್ಪಷ್ಟನೆ ಕೊಟ್ಟ ಕೇಂದ್ರ
ಚೀನಾದ ಕೆಲವು ಭಾಗಗಳಲ್ಲಿ ಹ್ಯೂಮನ್ ಮೆಟಾ-ನ್ಯುಮೋ ವೈರಸ್ (ಎಚ್‌ಎಂಪಿವಿ) ಹರಡುವಿಕೆಯ ವರದಿಗಳು ಜಗತ್ತನ್ನೇ ಬೆಚ್ಚಿಬೀಳಿಸಿವೆ. ಆದರೆ ಈ ವಿಚಾರವಾಗಿ ಭಾರತೀಯರು ಯಾವುದೇ ಆತಂಕ ಪಡುವುದು ಬೇಡ ಎಂದು ಭಾರತೀಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತದಲ್ಲಿ ಉಸಿರಾಟದ ಕಾಯಿಲೆಗಳ ಸಂಖ್ಯೆಯಲ್ಲಿ ಅಸಾಮಾನ್ಯ ಏರಿಕೆ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ನಾವು ದೇಶದೊಳಗೆ ಉಸಿರಾಟದ ಸಮಸ್ಯೆ ಇರುವವರ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳವಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕೂಡ ವರದಿಯಾಗಿಲ್ಲ. ಹಾಗಾಗಿ ಯಾವುದೇ ಅಲರ್ಟ್ ಬಗ್ಗೆ ಕಾರಣವೂ ಇಲ್ಲ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಅತುಲ್ ಗೋಯೆಲ್ ಹೇಳಿದ್ದಾರೆ.

ಎಚ್‌ಎಂಪಿವಿ ಸಾಮಾನ್ಯ ಶೀತವನ್ನು ಉಂಟುಮಾಡುವ ಯಾವುದೇ ಉಸಿರಾಟದ ವೈರಸ್‌ಗಳಂತೆಯೇ ಎಂದು ಗೋಯೆಲ್ ಹೇಳಿದ್ದಾರೆ. ಅತ್ಯಂತ ಹಿರಿಯ ಮತ್ತು ಅತ್ಯಂತ ಕಿರಿಯ ವಯಸ್ಸಿನವರಲ್ಲಿ ಇದು ಸಾಮಾನ್ಯ ಜ್ವರ ರೀತಿಯ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಚಳಿಗಾಲದಲ್ಲಿ ಯಾವುದೇ ಸಂದರ್ಭದಲ್ಲಿ ಉಸಿರಾಟದ ಸೋಂಕುಗಳು ಹೆಚ್ಚಾಗುತ್ತವೆ. ಇದಕ್ಕಾಗಿ ಸಾಮಾನ್ಯವಾಗಿ ನಮ್ಮ ಆಸ್ಪತ್ರೆಗಳು ಅಗತ್ಯ ಸರಬರಾಜು ಮತ್ತು ಹಾಸಿಗೆಗಳೊಂದಿಗೆ ಸಜ್ಜಾಗಿರುತ್ತವೆ ಎಂದು ಅವರು ಅಭಯ ನೀಡಿದ್ದಾರೆ.
ಯಾರಿಗಾದರೂ ಕೆಮ್ಮು, ನೆಗಡಿ ಇದ್ದರೆ ಸೋಂಕು ಹರಡದಂತೆ ಇತರರೊಂದಿಗೆ ಸಂಪರ್ಕಕ್ಕೆ ಬರದಂತೆ ಉಸಿರಾಟದ ಸೋಂಕುಗಳನ್ನು ತಡೆಗಟ್ಟಲು ಬಳಸುವ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಶೀತ ಮತ್ತು ಜ್ವರಕ್ಕೆ ಸಾಮಾನ್ಯ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಹ್ಯೂಮನ್ ಮೆಟಾಫ್ಯೂಮೊವೈರಸ್ (ಎಚ್‌ಎಂಪಿವಿ) ಹೆಸರಿನ ಸೋಂಕು ಚೀನಾದಲ್ಲಿ ಆತಂಕ ಮೂಡಿಸಿದೆ. ಇದರ ಬೆಳವಣಿಗೆಗಳನ್ನು ರಾಷ್ಟ್ರೀಯ ಸೋಂಕು ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಸೂಕ್ಷ್ಮವಾಗಿ ಗಮನಿಸುತ್ತಿದೆ. ಕೋವಿಡ್-19 ಕಾಣಿಸಿಕೊಂಡ ಐದು ವರ್ಷಗಳ ಬಳಿಕ ಚೀನಾದಿಂದ ಮತ್ತೊಂದು ಉಸಿರಾಟದ ಸೋಂಕಿನ ಸುದ್ದಿಯು ಗಾಬರಿ ಉಂಟುಮಾಡಿದೆ. ಆದರೆ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಯಾವುದೇ ಅಲರ್ಟ್ ನೀಡಿಲ್ಲ.
ಈ ಎಚ್‌ಎಂಪಿವಿಯನ್ನು 2001ರಲ್ಲಿ ಕಂಡುಹಿಡಿಯಲಾಯಿತು. ಇದು ಉಸಿರಾಟದ ಸಿನ್ಸಿಟಿಯಲ್ ವೈರಸ್ ಜೊತೆಗೆ ನ್ಯುಮೊವಿರಿಡೆ ಕುಟುಂಬದಲ್ಲಿದೆ. ಇದು ಎಲ್ಲ ವಯಸ್ಸಿನ ಜನರಲ್ಲಿ ಅದರಲ್ಲೂ ವಿಶೇಷವಾಗಿ ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮತ್ತು ದುರ್ಬಲಗೊಂಡ ಜನರಲ್ಲಿ ಉಸಿರಾಟದ ಕಾಯಿಲೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಚೀನಾದಲ್ಲಿ ಜನರಿಗೆ ಶೀತ, ಜ್ವರ, ಕೆಮ್ಮು ಸಾಂಕ್ರಾಮಿಕವಾಗಿ ಹರಡಿ, ಜನರು ಆಸ್ಪತ್ರೆಗೆ ದಾಖಲಾಗುತ್ತಿರುವ ವರದಿಗಳನ್ನು ಚೀನಾ ನಿರಾಕರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಉಸಿರಾಟದ ಕಾಯಿಲೆಗಳ ಪ್ರಕರಣಗಳು ತುಂಬಾ ಕಡಿಮೆ ಎಂದು ಹೇಳಿಕೊಂಡಿದೆ. ಅಲ್ಲದೆ ವಿದೇಶಿಯರು ಚೀನಾಗೆ ಸುರಕ್ಷಿತವಾಗಿ ಪ್ರಯಾಣ ಮಾಡಬಹುದು ಎಂದೂ ಹೇಳಿದೆ.












Click it and Unblock the Notifications