ನೇತಾಜಿ ರಹಸ್ಯ ದಾಖಲೆಗಳು ಇಂದು ಬಹಿರಂಗ
ಕೊಲ್ಕತ್ತಾ, ಸೆಪ್ಟೆಂಬರ್, 18 : ದೇಶದ ಇತಿಹಾಸದೊಳಗೆ ಹುದುಗಿಹೋಗಿರುವ ರಹಸ್ಯವೊಂದು ಇಂದು ತೆರೆದುಕೊಳ್ಳುವ ಸಾಧ್ಯತೆಯಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಕಣ್ಮರೆ ರಹಸ್ಯದ ಕುರಿತಾದ 64 ಕಡತಗಳನ್ನು ಇಂದು ಬಹಿರಂಗಗೊಳಿಸಲಾಗುತ್ತದೆ.
ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರದ ಬಳಿ ಇರುವ ಕಡತಗಳನ್ನು ಸೆ.18ರಂದು ಬಹಿರಂಗಪಡಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. [ನೇತಾಜಿ ಕಣ್ಮರೆ ಕಡತ]

64 ಕಡತಗಳನ್ನು ಇಂದು ಮಾಧ್ಯಮ ಮತ್ತು ಸಾರ್ವಜನಿಕರ ಮುಂದೆ ಬಹಿರಂಗಗೊಳಿಸಲಾಗುತ್ತದೆ. ಇವುಗಳ ಪೈಕಿ 9 ಪಶ್ಚಿಮ ಬಂಗಾಳದ ಗುಪ್ತಚರ ಇಲಾಖೆಗೆ ಸಂಬಂಧಿಸಿದವು. ಉಳಿದ ಕಡತಗಳು ಕೋಲ್ಕತ್ತಾ ಪೊಲೀಸರಿಗೆ ಸೇರಿದವು. [ಪ್ರಧಾನಿಗೂ ಇಲ್ಲ ನೇತಾಜಿ ರಹಸ್ಯ ಹೇಳುವ ಅಧಿಕಾರ!]
ನೇತಾಜಿ ವಂಶಸ್ಥರು ಈ ದಾಖಲೆ ಬಿಡುಗಡೆಯನ್ನು ಸ್ವಾಗತಿಸಿದ್ದಾರೆ. 1945ರ ಆಗಸ್ಟ್ 18ರಂದು ನಡೆದ ವಿಮಾನ ದುರಂತದಲ್ಲಿ ನೇತಾಜಿ ಸಾವನ್ನಪ್ಪಿದ್ದಾರೆ ಎಂದು 1945ರ ಆಗಸ್ಟ್ 22ರಂದು ಟೋಕಿಯೋ ರೆಡಿಯೋ ಘೋಷಿಸಿತ್ತು. 1937ರಿಂದ 1947ರ ವರೆಗೆ ಇರುವ ಎಲ್ಲಾ ದಾಖಲೆಗಳನ್ನು ಇಂದು ಬಿಡುಗಡೆ ಮಾಡಲಾಗುತ್ತದೆ.
ಇಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಇದರಿಂದಾಗಿ ದೇಶದ ಜನರ ಕಣ್ಣು ಪಶ್ಚಿಮ ಬಂಗಾಳದ ಮೇಲೆ ಬಿದ್ದಿದೆ.












Click it and Unblock the Notifications