petrol diesel prices news ಮಹಾರಾಷ್ಟ್ರ ಚುನಾವಣೆ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ?
ಮಹಾರಾಷ್ಟ್ರ ಚುನಾವಣೆಯ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ದೇಶದಲ್ಲಿ ಆರ್ಥಿಕ ಅಭಿವೃದ್ಧಿ, ಜಿಡಿಪಿ ಸೇರಿದಂತೆ ಹಲವು ಕಾರಣಗಳಿಂದ ಮಹಾರಾಷ್ಟ್ರ ಪ್ರಮುಖ ರಾಜ್ಯವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅಲ್ಲದೇ ಕಳೆದ ಬಾರಿ ಅಂದರೆ 2019ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಈ ರಾಜ್ಯದಲ್ಲಿ ಬಿಜೆಪಿ ಏಕಾಂಗಿಯಾಗಿ 105 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ, ಅಧಿಕಾರದ ಗದ್ದುಗೆ ಬರಲು ಸಾಧ್ಯವಾಗಿರಲಿಲ್ಲ. ಇದಾದ ನಂತರ ಸಮ್ಮಿಶ್ರ ಸರ್ಕಾರ ರಚನೆಯಾದರೂ, ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಪದವಿ ಸಿಗಲಿಲ್ಲ.
2019ನೇ ಸಾಲಿನ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಏಕಾಂಗಿಯಾಗಿ 105 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇಷ್ಟು ಪ್ರಮಾಣದಲ್ಲಿ ಶಾಸಕರು ಮಹಾರಾಷ್ಟ್ರದ ಯಾವುದೇ ಪಕ್ಷದಿಂದಲೂ ಗೆದಿದ್ದರಲಿಲ್ಲ. ಭಾರೀ ಪ್ರಮಾಣದಲ್ಲಿ ಶಾಸಕರು ಬಿಜೆಪಿ ಚಿಹ್ನೆಯಿಂದ ಗೆಲುವು ಸಾಧಿಸಿದ್ದರೂ, ಬಿಜೆಪಿ ಅಧಿಕಾರದಿಂದ ದೂರವೇ ಉಳಿಯಿತು. ಎರಡು ವರ್ಷಗಳ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ, ಬಿಜೆಪಿಯಿಂದ ಯಾರು ಮುಖ್ಯಮಂತ್ರಿ ಆಗಲು ಸಾಧ್ಯವಾಗಲಿಲ್ಲ.

ಇದರ ನಡುವೆ ಮಹಾರಾಷ್ಟ್ರದಲ್ಲಿ ಯಾರೂ ಅಂದಾಜು ಮಾಡಲಾರದಷ್ಟು ರಾಜಕೀಯ ಪಲ್ಲಟಗಳು ಕಂಡು ಬಂದವು. ಈ ಬಾರಿ ಹೇಗಾದರೂ ಮಾಡಿ ಬಹುಮತ ಸಾಧಿಸಲೇಬೇಕು ಎಂದು ಬಿಜೆಪಿ ನಿರ್ಧರಿಸಿದೆ. ಹೀಗಾಗಿ, ಮಹಾರಾಷ್ಟ್ರ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹಲವು ರಾಜಕೀಯ ತಂತ್ರಗಳನ್ನು ಮಾಡುತ್ತಿದೆ. ಇದರ ನಡುವೆ ಮಹಾರಾಷ್ಟ್ರ ಚುನಾವಣೆ ಘೋಷಣೆಯಾಗುವ ಮುನ್ನವೇ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ತೈಲ ಸಚಿವಲಯವು ಸುಳಿವು ನೀಡಿದೆ.
ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆಗೆ ಕಾರಣವೇನು ?
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದರೆ, ತೈಲ ಬೆಲೆಯೂ ಸಾಮಾನ್ಯವಾಗಿ ಇಳಿಯುತ್ತದೆ. ಆದರೆ, ಅದಕ್ಕೆ ಅಪವಾದ ಎನ್ನುವಂತೆ ಕೆಲವು ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರ ನಡುವೆಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗದೆ ಇರುವುದು ಇದೆ. ಇದೀಗ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 70 ಡಾಲರ್ ಇಳಿಕೆಯಾಗಿತ್ತು. ಆದರೆ, ಗುರುವಾರ ಮತ್ತೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಕಚ್ಚಾ ತೈಲದ ಬೆಲೆ ಮಾರುಕಟ್ಟೆಯಲ್ಲಿ 74.58 ಡಾಲರ್‌ಗೆ ಹೆಚ್ಚಳವಾಗಿದೆ. ಈಚೆಗೆ ಕೇಂದ್ರ ಸರ್ಕಾರವು ಅಡುಗೆ ಎಣ್ಣೆಯ ಆಮದಿಗೆ ಸಂಬಂಧಿಸಿದಂತೆ ಕಸ್ಟಮ್ಸ್ ಸುಂಕವನ್ನು ಹೆಚ್ಚಳ ಮಾಡಿದೆ. ಇದರ ಮೂಲಕ ರೈತರಿಗೆ ಲಾಭ ಮಾಡಿಕೊಡುವ ಉದ್ದೇಶದ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆದರೆ, ಇದರ ನಡುವೆ ದೇಶದಾದ್ಯಂತ ಅಡುಗೆ ಎಣ್ಣೆಯ ಬೆಲೆಯಲ್ಲೂ ಹೆಚ್ಚಳವಾಗುತ್ತಿದೆ. ಇನ್ನು ಕಚ್ಚಾ ತೈಲದ ಬೆಲೆ ಇಳಿಕೆಯಿಂದಾಗಿ ಪೆಟ್ರೋಲ್ , ಡೀಸೆಲ್ ಬೆಲೆ ಒಮ್ಮೆಯಾದರೂ ಇಳಿಕೆಯಾಗಲಿದೆಯಾ ಎಂದು ವಾಹನ ಸವಾರರು ಕಾಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲೋಕಸಭೆ ಚುನಾವಣೆಯ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದ್ದು, ಬಿಟ್ಟರೆ ದೇಶದ ಜನರಿಗೆ ಪೆಟ್ರೋಲ್ , ಡೀಸೆಲ್ ಬೆಲೆ ಇಳಿಕೆ ಎನ್ನುವ ಸುದ್ದಿ ಕೇಳಿದ್ದು ತುಂಬಾ ವಿರಳ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯ ಮೇಲೆ ತಲಾ 3 ರೂಪಾಯಿ ಹೆಚ್ಚಳ ಮಾಡಿ ಶಾಕ್ ನೀಡಿತ್ತು.












Click it and Unblock the Notifications