Traffic: ಟ್ರಾಫಿಕ್ ಕಂಡು ಪರೀಕ್ಷಾ ಕೇಂದ್ರಕ್ಕೆ ಪ್ಯಾರಾಚೂಟ್‌ನಲ್ಲಿ ಬಂದಿಳಿದ ವಿದ್ಯಾರ್ಥಿ
ಪರೀಕ್ಷೆ ದಿನ ವಿದ್ಯಾರ್ಥಿಗಳಿಗೆ ತುಸು ಆತಂಕ ಮನೆಮಾಡಿರುತ್ತೆ. ಒಂದು ಗಂಟೆಗೂ ಮುಂಚೆಯೇ ಗಾಬರಿಯಿಂದ ಪರೀಕ್ಷಾ ಕೇಂದ್ರಗಳ ಬಳಿಗೆ ತೆರಳುವ ವಿದ್ಯಾರ್ಥಿಗಳನ್ನು ನೋಡಿರುತ್ತೀವಿ. ಲೇಟ್ ಆದ್ರೆ ಕಥೆ ಮುಗೀತಲ್ಲಪ್ಪ ಅಂತಾ ಓಡೋಡಿ ಬರೋದನ್ನೂ ನೋಡಿದ್ದೀವಿ. ಆದರೆ, ವಿದ್ಯಾರ್ಥಿಯೊಬ್ಬ ಕಾರು, ಬಸ್, ಬೈಕ್, ಆಟೋ ಬದಲಿಗೆ ವಿಶೇಷವಾಗಿ ಪ್ಯಾರಾಚ್ಯೂಟ್‌ನಲ್ಲಿ ಪ್ರಯಾಣಿಸಿ ಸುದ್ದಿಯಾಗಿದ್ದಾನೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಸಮರ್ಥ ಮಹಾಂಗಡೆ ಎಂಬ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರಕ್ಕೆ ಪ್ಯಾರಾಗ್ಲೈಡ್ ಮಾಡುವ ಮೂಲಕ ತಲುಪಿದ್ದಾರೆ. ಬಿ.ಕಾಂ ಓದುತ್ತಿರುವ ಸಮರ್ಥ್ ಮಹಾಂಗಡೆ ಪರೀಕ್ಷೆಗೆ ಹೋಗಲು ಪ್ಯಾರಾಚ್ಯೂಟ್ ಬಳಸಿದ್ದು, ಹ್ಯಾರಿಸನ್ ಫಾಲಿಯಿಂದ ಪಸರಣಿ ಗ್ರಾಮದ ತನ್ನ ಪರೀಕ್ಷಾ ಕೇಂದ್ರಕ್ಕೆ ಆಕಾಶದಲ್ಲಿ ಹಾರಿಕೊಂಡು ತಲುಪಿದ್ದಾನೆ. ಇದನ್ನು ಕಂಡು ಹಲವರು ಏನಿದು ಹುಚ್ಚಾಟ ಎಂದುಕೊಂಡರೂ ಇದರ ಹಿಂದೆ ಒಂದು ದೊಡ್ಡ ಕಾರಣವೇ ಇದೆ.

ಪರೀಕ್ಷಾ ಕೇಂದ್ರಕ್ಕೆ ಹೋಗುವ ಮಾರ್ಗದಲ್ಲಿ ಭಾರಿ ಟ್ರಾಫಿಕ್ ಜಾಮ್ ಇದ್ದ ಕಾರಣ ಪರೀಕ್ಷೆಗೆ ಹೋಗಲು ತಡವಾಗಿತ್ತು. ಆಗ ದಿಕ್ಕುತೋಚದೆ ಕುಳಿತಿದ್ದ ಸಮರ್ಥ್‌ಗೆ ಸ್ಥಳೀಯ ಪ್ಯಾರಾಗ್ಲೈಡಿಂಗ್ ಸಂಘಟಕರು ನೆರವಿಗೆ ಧಾವಿಸಿದ್ದಾರೆ. ಇವರ ಸಹಾಯದಿಂದ ಸಮರ್ಥ್ ಹ್ಯಾರಿಸನ್ ಫಾಲಿಯಿಂದ ಪಸರಣಿ ಗ್ರಾಮದ ತನ್ನ ಪರೀಕ್ಷಾ ಕೇಂದ್ರಕ್ಕೆ ಪ್ಯಾರಾಗ್ಲೈಡ್ ಮೂಲಕ ಕೆಲವೇ ನಿಮಿಷಗಳಲ್ಲಿ ತಲುಪಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ, ವಿಡಿಯೋಗಳು ವೈರಲ್ ಆಗಿವೆ.
ಹ್ಯಾರಿಸನ್ ಫಾಲಿಯಿಂದ ಹೊರಟ ಸಮರ್ಥ್ ಮಹಾಂಗಡೆ ಪ್ಯಾರಾಗ್ಲೈಂಡಿಂಗ್ ಮೂಲಕ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಗಾಬರಿ ಪಡದೆ ಸರಿಯಾಗಿ ಆಲೋಚನೆ ಮಾಡಿದರೆ ಉಪಾಯ ಸಿಕ್ಕೇ ಸಿಗುತ್ತದೆ ಎಂದು ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಡೆದು ಹಲವು ದಿನಗಳಾಗಿದ್ದು ಇದೀಗ ಬೆಳಕಿಗೆ ಬಂದಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ ಪಸರಣಿ ಗ್ರಾಮದ ವಿದ್ಯಾರ್ಥಿ ಸಮರ್ಥ್ ಮಹಾಂಗಡೆ ತನ್ನ ಕಾಲೇಜು ಬ್ಯಾಗ್ ಧರಿಸಿ ಆಕಾಶದಲ್ಲಿ ಹಾರುತ್ತಾ ತನ್ನ ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಈತನ ಸಾಹಸ, ಧೈರ್ಯ ಹಾಗೂ ಆಲೋಚನೆಗೆ ಪರೀಕ್ಷೆ ಹೊರತುಪಡಿಸಿ A++ ಕೊಡಬೇಕು ಎಂದು ನೆಟ್ಟಿಗರು ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ.
ಸಮರ್ಥ್ ತನ್ನ ಪರೀಕ್ಷೆಯ ದಿನದಂದು ವೈಯಕ್ತಿಕ ಕೆಲಸಕ್ಕಾಗಿ ಪಂಚಗಣಿಯಲ್ಲಿದ್ದ. ಆದರೆ ಕಾಲೇಜಿನಲ್ಲಿ ಪರೀಕ್ಷೆ ಬರೆಯುವುದು ಅನಿವಾರ್ಯವಾದ ಕಾರಣ ಅತ್ತ ಮುಖ ಮಾಡಿದ್ದ. ಆದರೆ, ವಾಯ್-ಪಂಚಗಣಿ ರಸ್ತೆಯ ಪಸರಣಿ ಘಾಟ್ ವಿಭಾಗದಲ್ಲಿ ಭಾರಿ ಟ್ರಾಫಿಕ್ ಜಾಮ್‌ನಿಂದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅಸಾಧ್ಯ ಎಂಬುದನ್ನು ಅರಿತಿದ್ದ. ಪರೀಕ್ಷೆಗೆ ಕೇವಲ 15-20 ನಿಮಿಷಗಳು ಉಳಿದಿರುವಾಗ ಪಂಚಗಣಿಯ ಜಿಪಿ ಅಡ್ವೆಂಚರ್ಸ್‌ನ ಸಾಹಸ ಕ್ರೀಡಾ ತಜ್ಞ ಗೋವಿಂದ್ ಯೆವಾಲೆ ಅವರು ವಿದ್ಯಾರ್ಥಿಯನ್ನು ಪರೀಕ್ಷೆಗೆ ಪ್ಯಾರಾಗ್ಲೈಡ್ ಮಾಡಲು ಸೂಚಿಸಿದ್ದರು. ಕೊನೆಗೆ ವಿದ್ಯಾರ್ಥಿ ಹಾರುತ್ತಾ ಸ್ಥಳ ತಲುಪಿದ್ದಾನೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.












Click it and Unblock the Notifications