LPG Gas Cylinder Subsidy: ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ ಕುರಿತು ಕೇಂದ್ರ ಸರ್ಕಾರ ಮಹತ್ವದ ಆದೇಶ

LPG Gas Subsidy: ಗೃಹಬಳಕೆಯ ಎಲ್‌ಪಿಜಿ ರೀಫಿಲ್ ಸಿಲಿಂಡರ್‌ಗಳಿಗೆ ರಿಯಾಯಿತಿ ಹಾಗೂ ಸಬ್ಸಿಡಿ ಸೌಲಭ್ಯ ಪಡೆಯಲು ಬಯೋಮೆಟ್ರಿಕ್ ದೃಢೀಕರಣವನ್ನು 2026ರ ಅಕ್ಟೋಬರ್ 1ರಿಂದ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸಬ್ಸಿಡಿ ಸೌಲಭ್ಯವು ಅರ್ಹರಿಗೆ ಮಾತ್ರ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ವಾಣಿಜ್ಯ ಬಳಕೆಗೆ ಸಿಲಿಂಡರ್‌ಗಳ ಅಕ್ರಮಗಳನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಬಿಡುಗಡೆ ಮಾಡಲಾದ ಅಂಕಿ-ಅಂಶಗಳ ಪ್ರಕಾರ, 2026ರ ಸೆಪ್ಟೆಂಬರ್ 19ರ ವರೆಗೆ ದೇಶದ ಒಟ್ಟು ಗ್ರಾಹಕರಲ್ಲಿ ಶೇಕಡಾ 89.9ರಷ್ಟು, ಅಂದರೆ ಸುಮಾರು 27.43 ಕೋಟಿ ಸಕ್ರಿಯ ಗೃಹಬಳಕೆ ಎಲ್‌ಪಿಜಿ ಗ್ರಾಹಕರು ಈಗಾಗಲೇ ಬಯೋಮೆಟ್ರಿಕ್ ದೃಢೀಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈಗಾಗಲೇ ಪರಿಶೀಲನೆ ಮುಗಿಸಿರುವ ಗ್ರಾಹಕರಿಗೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಹಾಗೂ ಅವರು ಮತ್ತೆ ಯಾವುದೇ ಪ್ರಕ್ರಿಯೆ ನಡೆಸುವ ಅಗತ್ಯವಿಲ್ಲ.

LPG Gas Cylinder Subsidy New Rule Biometric e-KYC Mandatory from October 1 2026 Know details

ಎಲ್‌ಪಿಜಿ ಸಬ್ಸಿಡಿ ಪಡೆಯುವವರಿಗೆ ಮಹತ್ವದ ಮಾಹಿತಿ

ಆದರೆ ಇದುವರೆಗೆ ದೃಢೀಕರಣ ಪೂರ್ಣಗೊಳಿಸದ ಗ್ರಾಹಕರಿಗೆ ಸಬ್ಸಿಡಿ ದರದ ರೀಫಿಲ್ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ. ಬಯೋಮೆಟ್ರಿಕ್ ಪರಿಶೀಲನೆ ಪೂರ್ಣಗೊಂಡ ನಂತರವಷ್ಟೇ ಅವರಿಗೆ ಮತ್ತೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ಬುಕಿಂಗ್ ಸೌಲಭ್ಯ ಪುನರಾರಂಭಗೊಳ್ಳಲಿದೆ ಎಂದು ತಿಳಿಸಿದೆ.

ದೃಢೀಕರಣಕ್ಕಿರುವ ಸುಲಭ ವಿಧಾನಗಳು

ಅಕ್ಟೋಬರ್ 1ರ ಗಡುವಿನೊಳಗೆ ಗ್ರಾಹಕರು ಸುಲಭವಾಗಿ ದೃಢೀಕರಣ ಪೂರ್ಣಗೊಳಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ತೈಲ ಮಾರುಕಟ್ಟೆ ಕಂಪನಿಗಳು ಹಲವು ಆಯ್ಕೆಗಳನ್ನು ಒದಗಿಸಿವೆ. ಹಾಗಾದ್ರೆ ಅವುಗಳು ಯಾವುವು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

* ಸಿಲಿಂಡರ್ ವಿತರಣೆ ಮಾಡುವ ಡೆಲಿವರಿ ಸಿಬ್ಬಂದಿ ತೈಲ ಕಂಪನಿಗಳ ಮೊಬೈಲ್ ಆ್ಯಪ್ ಬಳಸಿ ಸ್ಥಳದಲ್ಲೇ ಬಯೋಮೆಟ್ರಿಕ್ ವಿವರಗಳನ್ನು ಪರಿಶೀಲಿಸಬಹುದು.

* ಗ್ರಾಹಕರು ತಮ್ಮ ಸಮೀಪದ ಎಲ್‌ಪಿಜಿ ಗ್ಯಾಸ್ ಏಜೆನ್ಸಿಗೆ ಖುದ್ದಾಗಿ ಭೇಟಿ ನೀಡಿ ಬಯೋಮೆಟ್ರಿಕ್ ಇ-ಕೆವೈಸಿ ಪ್ರಕ್ರಿಯೆ ಪೂರೈಸಬಹುದು.

* ಗ್ರಾಹಕರು ಮನೆಯಲ್ಲೇ ಕುಳಿತು ಕಂಪನಿಗಳ ಅಧಿಕೃತ ಆ್ಯಪ್‌ಗಳ ಮೂಲಕ ಸ್ವತಂತ್ರವಾಗಿ ಸೆಲ್ಫ್ ಇ-ಕೆವೈಸಿ ಮಾಡಿಕೊಳ್ಳಬಹುದು. ಇಂಡೇನ್ ಗ್ರಾಹಕರು 'IndianOil ONE', ಭಾರತ್ ಗ್ಯಾಸ್ ಗ್ರಾಹಕರು 'HelloBPCL' ಮತ್ತು ಎಚ್‌ಪಿ ಗ್ಯಾಸ್ ಗ್ರಾಹಕರು 'HP PAY' ಆ್ಯಪ್‌ಗಳನ್ನು ಬಳಸಬಹುದು.

* ಗ್ರಾಹಕರಿಗೆ ಡಿಜಿಟಲ್ ಪರಿಶೀಲನೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಧಿಕೃತ ಪೋರ್ಟಲ್‌ನಲ್ಲಿ ವೀಡಿಯೊ ಟ್ಯುಟೋರಿಯಲ್‌ಗಳನ್ನು ಕೂಡ ಲಭ್ಯವಾಗಿಸಲಾಗಿದೆ.

ದೃಢೀಕರಣ ಮಾಡದವರಿಗೆ ಎಚ್ಚರಿಕೆ ಸಂದೇಶ

ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸಲು ಸಾಧ್ಯವಾಗದ ಅಥವಾ ಇಷ್ಟಪಡದ ಗ್ರಾಹಕರಿಗೂ ಗೃಹಬಳಕೆಯ ಅಡುಗೆ ಅನಿಲ ಸಂಪರ್ಕ ಲಭ್ಯವಿರಲಿದೆ. ಆದರೆ ಅಂತಹ ಗ್ರಾಹಕರು ಕಂಪನಿಯ ವೆಬ್‌ಸೈಟ್‌ಗಳು, ಮೊಬೈಲ್ ಆ್ಯಪ್‌ಗಳು, ವಾಟ್ಸಾಪ್ ಚಾಟ್‌ಬಾಟ್‌ಗಳು ಅಥವಾ ಐವಿಆರ್‌ಎಸ್ ಮೂಲಕ ತಮ್ಮ ಆಯ್ಕೆಯನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇಂತಹ ಕುಟುಂಬಗಳಿಗೆ ಯಾವುದೇ ಸರ್ಕಾರಿ ಸಬ್ಸಿಡಿ ಇಲ್ಲದೆ, ಕೇವಲ ಚಾಲ್ತಿಯಲ್ಲಿರುವ ಮಾರುಕಟ್ಟೆ ದರದಲ್ಲಿ ಮಾತ್ರ ಸ್ಥಳೀಯ ಲಭ್ಯತೆಗೆ ಅನುಗುಣವಾಗಿ 5 ಕೆ.ಜಿ ಅಥವಾ 10 ಕೆ.ಜಿ ಸಿಲಿಂಡರ್‌ಗಳನ್ನು ಪೂರೈಸಲಾಗುತ್ತದೆ.

ಇ-ಕೆವೈಸಿಗೆ ಹಲವು ಬಾರಿ ಗಡುವು ವಿಸ್ತರಣೆ

ನಗರ ಮತ್ತು ಗ್ರಾಮೀಣ ಭಾಗಗಳ ಎಲ್ಲಾ ಗ್ರಾಹಕರನ್ನು ಒಳಗೊಳ್ಳುವ ಸಲುವಾಗಿ ಈ ನಿಯಮವನ್ನು ಹಲವು ಬಾರಿ ವಿಸ್ತರಿಸಲಾಗಿತ್ತು. ಆರಂಭದಲ್ಲಿ 2026ರ ಜೂನ್ 30 ಅನ್ನು ಅಂತಿಮ ಗಡುವನ್ನಾಗಿ ನಿಗದಿ ಮಾಡಲಾಗಿತ್ತು. ನಂತರ ಅದನ್ನು ಜುಲೈ 31, ಆಗಸ್ಟ್ 7, ಆಗಸ್ಟ್ 15, ಆಗಸ್ಟ್ 23, ಆಗಸ್ಟ್ 31, ಸೆಪ್ಟೆಂಬರ್ 7 ಮತ್ತು ಸೆಪ್ಟೆಂಬರ್ 14 ರವರೆಗೆ ಹಂತ-ಹಂತವಾಗಿ ವಿಸ್ತರಣೆ ಮಾಡಲಾಗಿತ್ತು.

2023ರ ಅಕ್ಟೋಬರ್‌ನಿಂದಲೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶವ್ಯಾಪಿ ಬೃಹತ್ ಜಾಗೃತಿ ಅಭಿಯಾನವನ್ನು ನಡೆಸಿವೆ. ಈ ಅವಧಿಯಲ್ಲಿ 12 ಕೋಟಿಗೂ ಹೆಚ್ಚು ಎಸ್‌ಎಂಎಸ್ ಮತ್ತು ವಾಟ್ಸಾಪ್ ಸಂದೇಶಗಳನ್ನು ರವಾನಿಸಲಾಗಿದೆ. ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಮತ್ತು ಗ್ಯಾಸ್ ಏಜೆನ್ಸಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಮತ್ತು ಅನಿಲದ ಬೆಲೆಗಳು ಏರಿಳಿತ ಕಾಣುತ್ತಿದ್ದರೂ, ಸಾರ್ವಜನಿಕರನ್ನು ಬೆಲೆ ಏರಿಕೆಯ ಹೊರೆಯಿಂದ ರಕ್ಷಿಸಲು ಗೃಹಬಳಕೆಯ ಎಲ್‌ಪಿಜಿಯನ್ನು ನೈಜ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಪ್ರತಿ 14.2 ಕೆ.ಜಿ ಸಿಲಿಂಡರ್‌ಗೆ ನೀಡಲಾಗುವ ಪರೋಕ್ಷ ಸಬ್ಸಿಡಿಯು 2026ರ ಜೂನ್‌ನಲ್ಲಿ ಗರಿಷ್ಠ 721 ರೂಪಾಯಿಗೆ ತಲುಪಿತ್ತು. ಪ್ರಸ್ತುತ 2026ರ ಸೆಪ್ಟೆಂಬರ್‌ನಲ್ಲಿ ಇದು ಸುಮಾರು 210 ರೂಪಾಯಿ ಆಗಿದೆ.

ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರವು 2022-23ರ ಆರ್ಥಿಕ ವರ್ಷದಲ್ಲಿ ತೈಲ ಕಂಪನಿಗಳಿಗೆ 22,000 ಕೋಟಿ ರೂಪಾಯಿ ಪರಿಹಾರ ನೀಡಿದ್ದು, 2025-26 ಮತ್ತು 2026-27ರ ಆರ್ಥಿಕ ವರ್ಷಗಳಲ್ಲಿ ಒಟ್ಟು 30,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆ. ಆದರೂ ಗೃಹಬಳಕೆಯ ಎಲ್‌ಪಿಜಿ ಮಾರಾಟದಿಂದ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಉಂಟಾದ ನಷ್ಟದ ಮೊತ್ತವು 2026ರ ಆಗಸ್ಟ್ 31ರ ವೇಳೆಗೆ ಬರೋಬ್ಬರಿ 62,000 ಕೋಟಿ ರೂ.ಗಳಿಗೂ ಅಧಿಕವಾಗಿದೆ. ಆದ್ದರಿಂದ ಸಬ್ಸಿಡಿ ಸೋರಿಕೆಯನ್ನು ತಡೆಗಟ್ಟುವುದು ಸರ್ಕಾರದ ಆರ್ಥಿಕ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ಬಯೋಮೆಟ್ರಿಕ್ ಪರಿಶೀಲನೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ನೆರವು ಅಥವಾ ಮಾರ್ಗದರ್ಶನ ಅಗತ್ಯವಿರುವ ಗ್ರಾಹಕರು ರಾಷ್ಟ್ರೀಯ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1800 2333 555 ಅನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+