ಮದುವೆಯಾಗದೆ ಜೊತೆಯಾಗಿ ಬದುಕುತ್ತಿದ್ದೀರಾ? ಕುಟುಂಬದಿಂದ ಬೆದರಿಕೆ ಬಂದರೆ ಏನು ಮಾಡಬೇಕು? ಕಾನೂನು ಏನು ಹೇಳ್ತದೆ?

ಒಬ್ಬರನ್ನೊಬ್ಬರು ಪ್ರೀತಿಸಿ ಹಲವು ವರ್ಷಗಳಿಂದ ಜೊತೆಯಾಗಿ ( live in relationship) ಬದುಕುತ್ತಿದ್ದೀರಿ. ಮನೆ ಬಾಡಿಗೆ, ಖರ್ಚು, ಮನೆಕೆಲಸ ಎಲ್ಲವನ್ನೂ ಹಂಚಿಕೊಂಡು ಜೀವನ ನಡೆಸುತ್ತಿದ್ದೀರಿ. ಆದರೆ ಮದುವೆಯಾಗಿಲ್ಲ. ಒಂದು ದಿನ ನಿಮ್ಮ ಸಂಬಂಧವನ್ನು ಒಪ್ಪದ ಕುಟುಂಬದವರು ವಿರೋಧ ವ್ಯಕ್ತಪಡಿಸುವುದಷ್ಟೇ ಅಲ್ಲದೆ ಬೆದರಿಕೆ ಹಾಕಲು ಆರಂಭಿಸಿದರೆ ಏನು ಮಾಡಬೇಕು?

ಇಂತಹ ಪರಿಸ್ಥಿತಿಯಲ್ಲಿ ಲಿವ್ ಇನ್ ಸಂಬಂಧದಲ್ಲಿರುವ ವಯಸ್ಕರಿಗೆ ಕಾನೂನು ರಕ್ಷಣೆ ಇದೆಯೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಇತ್ತೀಚಿನ ದೆಹಲಿ ಹೈಕೋರ್ಟ್ ನ ಒಂದು ಆದೇಶ ಈ ವಿಚಾರವನ್ನು ಮತ್ತೆ ಚರ್ಚೆಗೆ ತಂದಿದೆ. ದೆಹಲಿಯ ಒಂದು ಜೋಡಿ 2014ರಿಂದ ಜೊತೆಯಾಗಿ ಬದುಕುತ್ತಿತ್ತು. ಆದರೆ ಮಹಿಳೆಯ ತಂದೆ ಮತ್ತು ಸಹೋದರ ಈ ಸಂಬಂಧವನ್ನು ವಿರೋಧಿಸುತ್ತಿದ್ದರು. ಈ ವಿರೋಧ ನಂತರ ಹಿಂಸೆಯ ಬೆದರಿಕೆಯ ಹಂತಕ್ಕೆ ತಲುಪಿತು.

Live in Relationship What to Do If Family Threatens You Know Your Legal Rights in India

ಆಗಸ್ಟ್ 6ರಂದು ಈ ಜೋಡಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿತು. ಆದರೆ ದೂರಿನ ಬಳಿಕ ಯಾವುದೇ ಕ್ರಮವಾಗಲಿಲ್ಲ. ಕೊನೆಗೆ ಅವರು ದೆಹಲಿ ಹೈಕೋರ್ಟ್ ಮೊರೆ ಹೋದರು. ಆಗಸ್ಟ್ 13ರಂದು ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಮಹತ್ವದ ಆದೇಶ ನೀಡಿದರು. ಪರಸ್ಪರ ಒಪ್ಪಿಗೆಯೊಂದಿಗೆ ಸಂಬಂಧದಲ್ಲಿರುವ ವಯಸ್ಕರಿಗೆ ತಮ್ಮ ಇಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಅವರೊಂದಿಗೆ ಬದುಕುವ ಸಂಪೂರ್ಣ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಜೋಡಿಗೆ ಅಗತ್ಯವಿದ್ದಾಗ ಪೊಲೀಸ್ ರಕ್ಷಣೆ ನೀಡುವಂತೆ ವಿಜಯ್ ವಿಹಾರ್ ಪೊಲೀಸ್ ಠಾಣೆಗೆ ಆದೇಶಿಸಲಾಯಿತು.

ಕುಟುಂಬದವರಿಗೆ ಎಷ್ಟು ಹಕ್ಕು ಇದೆ?

ಕಾನೂನಿನ ಪ್ರಕಾರ, ವಯಸ್ಕ ವ್ಯಕ್ತಿಗೆ ತನ್ನ ಇಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಭಾರತದ ಸಂವಿಧಾನದ 19 ಮತ್ತು 21ನೇ ವಿಧಿಗಳು ವ್ಯಕ್ತಿಯ ಸ್ವಾತಂತ್ರ್ಯ ಹಾಗೂ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿಗೆ ರಕ್ಷಣೆ ನೀಡುತ್ತವೆ.

ಸುಪ್ರೀಂ ಕೋರ್ಟ್ ಕೂಡ ಹಲವು ಪ್ರಕರಣಗಳಲ್ಲಿ ವಯಸ್ಕರು ಮದುವೆಯಾಗದೇ ಜೊತೆಯಾಗಿ ಬದುಕಬಹುದು ಎಂದು ಹೇಳಿದೆ. ಸಾಮಾಜಿಕ ನೈತಿಕತೆಯ ಹೆಸರಿನಲ್ಲಿ ಒಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂಬ ನಿಲುವನ್ನೂ ನ್ಯಾಯಾಲಯಗಳು ವ್ಯಕ್ತಪಡಿಸಿವೆ. ಅಂದರೆ, ಲಿವ್ ಇನ್ ಸಂಬಂಧದಲ್ಲಿರುವ ಜೋಡಿ ಪೊಲೀಸ್ ರಕ್ಷಣೆ ಕೇಳಲು ಮದುವೆ ಪ್ರಮಾಣಪತ್ರ ಹೊಂದಿರಲೇಬೇಕೆಂಬ ನಿಯಮವಿಲ್ಲ.

ಸಂಬಂಧದೊಳಗೇ ಹಿಂಸೆ ನಡೆದರೆ?

ಲಿವ್ ಇನ್ ಸಂಬಂಧದಲ್ಲಿರುವ ಮಹಿಳೆಗೆ ಗಂಡು ಸಂಗಾತಿ ಹಿಂಸೆ ನೀಡಿದರೆ, ಆಗ ಗೃಹ ಹಿಂಸೆಯಿಂದ ಮಹಿಳೆಯರ ರಕ್ಷಣಾ ಕಾಯ್ದೆ, 2005ರ ಅಡಿಯಲ್ಲಿ ಕೆಲವು ಸಂದರ್ಭಗಳಲ್ಲಿ ರಕ್ಷಣೆ ದೊರೆಯಬಹುದು. ಸಂಬಂಧವು ಮದುವೆಯ ಸ್ವರೂಪದಲ್ಲಿದ್ದರೆ, ಹಿಂಸೆಗೆ ಒಳಗಾದ ವ್ಯಕ್ತಿ ರಕ್ಷಣಾ ಆದೇಶ, ಹಂಚಿಕೊಂಡ ಮನೆಯಲ್ಲಿ ವಾಸಿಸುವ ಹಕ್ಕು ಹಾಗೂ ದೈಹಿಕ, ಮಾನಸಿಕ ಅಥವಾ ಆರ್ಥಿಕ ಕಿರುಕುಳಕ್ಕೆ ಸಂಬಂಧಿಸಿದ ಪರಿಹಾರವನ್ನು ಕೇಳಬಹುದು.

ಆದರೆ ಪ್ರತಿಯೊಂದು ಲಿವ್ ಇನ್ ಸಂಬಂಧಕ್ಕೂ ಒಂದೇ ರೀತಿಯ ಕಾನೂನು ರಕ್ಷಣೆ ದೊರೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಂಬಂಧದ ಅವಧಿ, ಇಬ್ಬರೂ ವಯಸ್ಕರಾಗಿರುವುದು, ಮದುವೆಯಾಗಲು ಕಾನೂನಾತ್ಮಕವಾಗಿ ಅರ್ಹರಾಗಿರುವುದು, ಜೊತೆಯಾಗಿ ಕುಟುಂಬದಂತೆ ಬದುಕಿರುವುದು ಹಾಗೂ ಸಮಾಜದ ಮುಂದೆ ಜೋಡಿಯಾಗಿ ಗುರುತಿಸಿಕೊಂಡಿರುವುದು ಮುಂತಾದ ಅಂಶಗಳನ್ನು ನ್ಯಾಯಾಲಯ ಪರಿಗಣಿಸಬಹುದು.

ಲಿವ್ ಇನ್ ಸಂಬಂಧದಿಂದ ಮಕ್ಕಳಾದರೆ ಅವರ ಹಕ್ಕೇನು?

ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳ ಹಕ್ಕುಗಳ ಬಗ್ಗೆಯೂ ನ್ಯಾಯಾಲಯಗಳು ಹಲವು ಮಹತ್ವದ ತೀರ್ಪುಗಳನ್ನು ನೀಡಿವೆ. ಮಕ್ಕಳನ್ನು ಕಾನೂನುಬದ್ಧ ಹಕ್ಕುಗಳಿಂದ ಸಂಪೂರ್ಣವಾಗಿ ವಂಚಿಸಲು ಸಾಧ್ಯವಿಲ್ಲ ಎಂಬ ನಿಲುವು ನ್ಯಾಯಾಲಯಗಳಿಂದ ಬಂದಿದೆ.

ಪೋಷಕರ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳ ಹಕ್ಕು ಸೇರಿದಂತೆ ಕೆಲವು ವಿಷಯಗಳಿಗೆ ಕಾನೂನು ರಕ್ಷಣೆ ಇರಬಹುದು. ಆದರೆ ಪಿತ್ರಾರ್ಜಿತ ಆಸ್ತಿ ಸೇರಿದಂತೆ ಕೆಲವು ವಿಚಾರಗಳಲ್ಲಿ ಕಾನೂನು ಸ್ಥಿತಿ ಭಿನ್ನವಾಗಿರಬಹುದು.

ಲಿವ್ ಇನ್ ಸಂಬಂಧ ಕಾನೂನುಬಾಹಿರ ಅಲ್ಲ. ಪರಸ್ಪರ ಒಪ್ಪಿಗೆಯೊಂದಿಗೆ ಇಬ್ಬರು ವಯಸ್ಕರು ಜೊತೆಯಾಗಿ ಬದುಕುವುದು ಅಪರಾಧವಲ್ಲ ಎಂಬ ನಿಲುವನ್ನು ಸುಪ್ರೀಂ ಕೋರ್ಟ್ ಹಲವು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದೆ. ಆದರೆ ಲಿವ್ ಇನ್ ಸಂಬಂಧಗಳಿಗೆ ಸಂಬಂಧಿಸಿದ ಎಲ್ಲಾ ಹಕ್ಕುಗಳು ಒಂದೇ ಕಾಯ್ದೆಯಲ್ಲಿ ಸ್ಪಷ್ಟವಾಗಿ ಕ್ರೋಡೀಕರಿಸಲ್ಪಟ್ಟಿಲ್ಲ. ಹಲವು ಹಕ್ಕುಗಳು ವಿವಿಧ ನ್ಯಾಯಾಲಯಗಳ ತೀರ್ಪುಗಳ ಆಧಾರದ ಮೇಲೆ ರೂಪುಗೊಂಡಿವೆ. ಹೀಗಾಗಿ ಪ್ರಕರಣದ ಸನ್ನಿವೇಶ ಹಾಗೂ ನ್ಯಾಯಾಲಯದ ವ್ಯಾಖ್ಯಾನದ ಆಧಾರದ ಮೇಲೆ ಫಲಿತಾಂಶದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಯಿದೆ.

ಕುಟುಂಬದಿಂದ ಬೆದರಿಕೆ ಬಂದರೆ?

- ಲಿವ್ ಇನ್ ಸಂಬಂಧದಲ್ಲಿರುವ ಜೋಡಿಗೆ ಕುಟುಂಬದವರು ಅಥವಾ ಇತರರು ಬೆದರಿಕೆ ಹಾಕುತ್ತಿದ್ದರೆ ಈ ಕ್ರಮಗಳನ್ನು ಅನುಸರಿಸಬಹುದು.

- ಮೊದಲು ಹತ್ತಿರದ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿ. ದೂರು ಸಲ್ಲಿಸಿದ ಬಳಿಕ ಅದರ ಸ್ವೀಕೃತಿ ಪ್ರತಿ, ದೂರು ಸಂಖ್ಯೆ ಅಥವಾ ಎಫ್‌ಐಆರ್ ಸಂಖ್ಯೆಯನ್ನು ಪಡೆದುಕೊಳ್ಳುವುದು ಮುಖ್ಯ.

- ಬೆದರಿಕೆ ಸಂದೇಶಗಳು, ವಾಟ್ಸ್ಆ್ಯಪ್ ಚಾಟ್, ಕರೆ ವಿವರಗಳು, ಧ್ವನಿ ಸಂದೇಶಗಳು ಮತ್ತು ಇತರ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ. ಹಲ್ಲೆ ನಡೆದಿದ್ದರೆ ವೈದ್ಯಕೀಯ ದಾಖಲೆಗಳು ಹಾಗೂ ಫೋಟೋಗಳೂ ಪ್ರಮುಖ ಸಾಕ್ಷ್ಯವಾಗಬಹುದು.

- ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಹಿರಿಯ ಪೊಲೀಸ್ ಅಧಿಕಾರಿಗೆ ಲಿಖಿತವಾಗಿ ದೂರು ಸಲ್ಲಿಸಬಹುದು. ಹಿಂದಿನ ದೂರಿನ ಸಂಖ್ಯೆಯನ್ನು ಕೂಡ ಉಲ್ಲೇಖಿಸಬೇಕು.

- ಇದರ ಬಳಿಕವೂ ರಕ್ಷಣೆ ದೊರೆಯದಿದ್ದರೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಪೊಲೀಸ್ ರಕ್ಷಣೆ ಕೋರುವ ಅವಕಾಶವಿದೆ. ದೆಹಲಿ ಜೋಡಿ ಇದೇ ಮಾರ್ಗದ ಮೂಲಕ ನ್ಯಾಯಾಲಯದ ರಕ್ಷಣೆ ಪಡೆದುಕೊಂಡಿತ್ತು.

ಗೃಹ ಹಿಂಸೆಯಾದರೆ ಎಲ್ಲಿಗೆ ಹೋಗಬೇಕು?

ಸಂಬಂಧದೊಳಗೇ ದೈಹಿಕ, ಮಾನಸಿಕ ಅಥವಾ ಆರ್ಥಿಕ ಹಿಂಸೆ ನಡೆಯುತ್ತಿದ್ದರೆ ಪೊಲೀಸ್ ಠಾಣೆಗೆ ದೂರು ನೀಡುವುದೇ ಏಕೈಕ ಮಾರ್ಗವಲ್ಲ. ರಕ್ಷಣಾ ಅಧಿಕಾರಿ, ನೋಂದಾಯಿತ ಎನ್‌ಜಿಒ ಸೇವಾ ಸಂಸ್ಥೆ ಅಥವಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ನೇರವಾಗಿ ಸಂಪರ್ಕಿಸಬಹುದು. ಹಂಚಿಕೊಂಡ ಜೀವನವನ್ನು ಸಾಬೀತುಪಡಿಸಲು ಜಂಟಿ ಬಿಲ್‌ಗಳು, ಒಂದೇ ವಿಳಾಸದ ದಾಖಲೆಗಳು, ಫೋಟೋಗಳು ಹಾಗೂ ಸಂಬಂಧದ ಬಗ್ಗೆ ತಿಳಿದಿರುವ ವ್ಯಕ್ತಿಗಳ ಸಾಕ್ಷ್ಯಗಳು ಸಹಾಯಕವಾಗಬಹುದು.

ಉಚಿತ ಕಾನೂನು ನೆರವು ಕೂಡ ಲಭ್ಯ. ಕಾನೂನು ಹೋರಾಟದ ವೆಚ್ಚದ ಬಗ್ಗೆ ಆತಂಕವಿದ್ದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಉಚಿತ ಕಾನೂನು ನೆರವು ಪಡೆಯುವ ಅವಕಾಶವಿದೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ 15100 ಸಹಾಯವಾಣಿಯ ಮೂಲಕ ಹತ್ತಿರದ ಕಾನೂನು ನೆರವು ಕೇಂದ್ರದ ಮಾಹಿತಿ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+