Weather report: ಲಾ ನಿನಾ ಎಫೆಕ್ಟ್ ಹವಾಮಾನದಲ್ಲಿ ಈ ಬದಲಾವಣೆ ಎಚ್ಚರ!
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಭಯಂಕರ ವೈಪರೀತ್ಯ ವರದಿಯಾಗುತ್ತಿದೆ. ಒಮ್ಮೆಗೆ ತೀವ್ರ ಬಿಸಿಲು ಹೆಚ್ಚಾಗುವುದು, ಧಾರಾಕಾರ ಮಳೆಯೊಂದು ಕಡೆಯಾದರೆ. ಮಳೆಗಾಲದಲ್ಲೂ ಬಿಸಿಲಿ ತಾಪಮಾನ ಹೆಚ್ಚಾಗುವುದು ವರದಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹವಾಮಾನದಲ್ಲಿ ಮತ್ತಷ್ಟು ಬದಲಾವಣೆಗಳಾಗಲಿದ್ದು, ತೀವ್ರವಾದ ಚಳಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈಗಾಗಲೇ ಕಳೆದ ವರ್ಷದಿಂದ ಕರ್ನಾಟಕವು ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಅತಿ ಹೆಚ್ಚು ಬಿಸಿಲು ಇತ್ತು. ನಂತರ ಮಳೆಯೂ ಸಹ ಹಲವು ರಾಜ್ಯಗಳಲ್ಲಿ ಧಾರಾಕಾರವಾಗಿ ಆಗಿದೆ. ಇದೀಗ ಚಳಿಯ ಸರದಿ....
ಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಹೆಚ್ಚೇ ಆಗಿದೆ. ಕರ್ನಾಟಕ, ಅಸ್ಸಾಂ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗಿದೆ. ಕೆಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿ ಜನ ಜೀವನವು ತೀವ್ರ ಸಂಕಷ್ಟ ಅನುಭವಿಸಿರುವುದು ಸಹ ಇದೆ. ಬೇಸಿಗೆ ಕಾಲದಲ್ಲೂ ಭಯಂಕರ ಬಿಸಿಲಿನ ವಾತಾವರಣ ಇತ್ತು. ಬಿಸಿಲು ಹಾಗೂ ಮಳೆಯ ನಂತರ ಮುಂದಿನ ದಿನಗಳಲ್ಲಿ ಚಳಿಯ ತೀವ್ರತೆಯೂ ಹೆಚ್ಚಾಗಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಲಾ ನಿನಾ ಎಫೆಕ್ಟ್: ಭಯಂಕರ ಚಳಿ
ಲಾ ನಿನಾ ಎಫೆಕ್ಟ್‌ನಿಂದಾಗಿ ಪ್ರಸಕ್ತ ಸಾಲಿನಲ್ಲಿ ಭಯಂಕರ ಚಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಸಾಮಾನ್ಯಕ್ಕಿಂತ ಅಧಿಕವಾದ ಹಾಗೂ ದೀರ್ಫಾವಧಿಯ ವರೆಗೆ ಶೀತದ ಅಲೆ ಸೃಷ್ಟಿಯಾಗಲಿದೆ. ಈ ಬಾರಿ ಹಿಂದೆಗಿಂತಲೂ ಹೆಚ್ಚು ಚಳಿ ಇರಲಿದೆ. ಮುಂದಿನ ತಿಂಗಳು ಅಂದರೆ ವರ್ಷದ ಕೊನೆಯ ಎರಡು ತಿಂಗಳುಗಳಾದ ನವೆಂಬರ್ ಹಾಗೂ ಡಿಸೆಂಬರ್ ಸಮಯದಲ್ಲಿ ಚಳಿ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.
ಎಲ್ ನಿನೋ, ಲಾ ನಿನಾ ಎಫೆಕ್ಟ್
ವಿಶ್ವದಾದ್ಯಂತ ಎಲ್‌ನಿನೋ ಹಾಗೂ ಲಾ ನಿನಾ ಎಫೆಕ್ಟ್‌ನಿಂದಾಗಿ ಹವಾಮಾನದಲ್ಲಿ ವ್ಯಾಪಕ ಬದಲಾವಣೆಗಳು ಆಗಿವೆ. ಕಳೆದ ವರ್ಷ ಹಾಗೂ ಈ ವರ್ಷ (2023-24)ರಲ್ಲಿ ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಎಲ್‌ನಿನೋ ಪ್ರಭಾವಕ್ಕೆ ಗುರಿಯಾಗಿದ್ದವು. ಕರ್ನಾಟಕದ ರಾಜಧಾನಿ ಬೆಂಗಳೂರು ದಶಕಗಳ ಕಾಣದಿದ್ದ ಹವಾಮಾನವನ್ನು ಕಂಡಿತ್ತು. ಉದ್ಯಾನ ನಗರಿಯಲ್ಲಿ ಬಿಸಿಲಿನ ತೀವ್ರತೆ ವ್ಯಾಪಕವಾಗಿತ್ತು. ಹಲವು ದೇಶಗಳಲ್ಲಿ ಭೀಕರ ಬರಗಾಲ ಎದುರಾಗಿತ್ತು. ಕರ್ನಾಟಕವೂ ಸಹ ತೀವ್ರ ಬರಗಾಲವನ್ನು ಎದುರಿಸಿತ್ತು. ದೇಶದ ವಿವಿಧ ರಾಜ್ಯಗಳಲ್ಲೂ ನಿರೀಕ್ಷೆಗೂ ಮೀರಿ ಮಳೆಯಾಗಿತ್ತು. ಇದರಿಂದ ಪ್ರವಾಹ ಪರಿಸ್ಥಿತಿಯೂ ಎದುರಾಗಿತ್ತು. ಇದಕ್ಕೆ ತದ್ವಿರುದ್ಧವಾಗಿ ಕೆಲವು ರಾಜ್ಯಗಳಲ್ಲಿ ಮಳೆ ಕೊರತೆಯೂ ಉಂಟಾಗಿತ್ತು.

ಏನಿದು ಎಲ್‌ನಿನೋ, ಲಾ ನಿನಾ ಎಫೆಕ್ಟ್
ಎಲ್ ನಿನೋ ಎನ್ನುವುದು ಪೆಸಿಫಿಕ್ ಮಹಾಸಾಗರದ ಮೇಲ್ಮೈಯು ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಾಗುವುದು. ಈ ಬದಲಾವಣೆಯಿಂದ ಜಾಗತಿಕ ಹವಾಮಾನದಲ್ಲಿ ವೈಪರೀತ್ಯ ಉಂಟಾಗುತ್ತದೆ. ಎಲ್ ನಿನೋ ಪ್ರಭಾವದಿಂದಾಗಿ ಮಳೆ ಕೊರತೆ ಎದುರಾಗುತ್ತದೆ. ವಾತಾವರಣದಲ್ಲಿ ಶುಷ್ಕತೆ ಹೆಚ್ಚಾಗಿ, ಮಳೆ ಪ್ರಮಾಣ ಏರುಪೇರಾಗುತ್ತದೆ. ನಿರೀಕ್ಷೆಯಂತೆಯೇ ಇದೀಗ ಎಲ್ ನಿನೋ ಕಡಿಮೆಯಾಗಿದ್ದು, ಲಾ ನಿನಾ ಪ್ರಭಾವ ಹೆಚ್ಚಾಗುತ್ತಿದೆ. ಲಾ ನಿನಾ ಎನ್ನುವುದು ಎಲ್‌ನಿನೋದ ಹಿಮ್ಮುಖ ಚಲನೆಯಾಗಿದೆ. ಪೆಸಿಫಿಕ್ ಮಹಾಸಾಗರವು ಸಾಮಾನ್ಯಕ್ಕಿಂತ ತಂಪಾದರೆ, ಅದನ್ನು ಲಾ ನಿನಾ ಎಂದು ಕರೆಯಲಾಗುತ್ತದೆ..












Click it and Unblock the Notifications