ಕಬ್ಬು ಬೆಳೆಗಾರರಿಗೆ ಕೇಂದ್ರ ಸಿಹಿಸುದ್ದಿ; ರೈತರ ಹಿತರಕ್ಷಣೆಗಾಗಿ ವಾರದಲ್ಲಿ 'ಉನ್ನತ ಮಟ್ಟದ ಸಮಿತಿ ರಚನೆ'
ನವದೆಹಲಿ: ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆಗಳು, ಅವರ ಹೋರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೋಮವಾರ ಪ್ರಮುಖ ಸಭೆ ನಡೆಸಿ ರೈತರ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನೀರ್ಣಯ ಕೈಗೊಂಡಿದೆ. ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಮುಂದಿನ ಒಂದು ವಾರದೊಳಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ತಿಳಿಸಿದೆ. ಇದರೊಂದಿಗೆ ರಾಜ್ಯ ಸರ್ಕಾರಗಳ ಸಹಕಾರ ಕೋರಿರುವ ಕೇಂದ್ರವು FRP-SAP, ಎಥೆನಾಲ್ ವಿಸ್ತೃತ ಚರ್ಚೆ ನಡೆಸಿತು.
ರಾಷ್ಟ್ರ ರಾಜಧಾನಿ ಸೋಮವಾರ ಸಂಜೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲದ್ ಜೋಶಿ, ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಮತ್ತು ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಮುಖ ರೈತ ಮುಖಂಡರ ಸಭೆ ನಡೆಸಲಾಯಿತು. ಈ ವೇಳೆ ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆ, ಬೇಡಿಕೆಗಳನ್ನೆಲ್ಲ ಆಲಿಸಿದ ಸಚಿವರು ರೈತ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಅಂತಿಮವಾಗಿ ಸಮಸ್ಯೆಗಳ ಪರಿಹಾರಕ್ಕೆ ಒಂದು ವಾರದೊಳಗೆ ರೈತರು ಮತ್ತು ವಿಜ್ಞಾನಿಗಳನ್ನೂ ಒಳಗೊಂಡ ಜಂಟಿ ಸಮಿತಿ ರಚಿಸುವುದಾಗಿ ಕೈಗೊಂಡ ನಿರ್ಧಾರಗಳನ್ನು ತಿಳಿಸಿದರು. ಇನ್ನಾದರೂ ಕಬ್ಬು ಬೆಳೆಗಾರರು ತಮ್ಮ ಹೋರಾಟ ಕೈ ಬಿಡಬೇಕೆಂದು ಜೋಶಿಯವರು ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಸಕ್ಕರೆ ಇಳುವರಿ (ರಿಕವರಿ), ತೂಕ ಮತ್ತು ಪಾವತಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ಜಂಟಿ ಸಮಿತಿ ರಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಮತ್ತು ಇದರಲ್ಲಿ ರೈತರು ಹಾಗೂ ಕೃಷಿ ವಿಜ್ಞಾನಿಗಳನ್ನೂ ಸೇರ್ಪಡೆ ಮಾಡಲಾಗುತ್ತದೆ ಎಂದು ಭರವಸೆ ಕೊಟ್ಟರು.

'ರೈತರ ಸೇವೆ ನಮಗೆ ದೇವರ ಪೂಜೆಗೆ ಸಮಾನ'
ಸಭೆಯಲ್ಲಿ ಇಬ್ಬರು ಸಚಿವರು ಮಾತನಾಡಿ, ರೈತರ ಸೇವೆ ನಮಗೆ ದೇವರ ಪೂಜೆಗೆ ಸಮಾನ. ರೈತರ ಸಮಸ್ಯೆಗಳಿಗೆ ಕೇಂದ್ರ ಸ್ಪಂದಿಸುತ್ತಿದೆ. ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಪಾರದರ್ಶಕತೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ, ರಾಜ್ಯಗಳು, ರೈತರು ಮತ್ತು ವಿಜ್ಞಾನಿಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸಿ ಅದರ ವರದಿ ಅನ್ವಯ ಶಾಶ್ವತ ಪರಿಹಾರಗಳ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ರೈತರಿಗೆ ಮೊದಲ ಆದ್ಯತೆ ನೀಡುತ್ತದೆ. ಸಕ್ಕರೆ ಇಳುವರಿ ಅಂಕಿ-ಅಂಶಗಳ ತಿರುಚುವಿಕೆ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ದೃಢ ನಿಲುವು ಹೊಂದಿದೆ ಎಂದರಲ್ಲದೇ, ಅಗತ್ಯ ಕ್ರಮಗಳಿಗೆ ಅಧಿಕಾರಿಗಳಿಗೆ ನಿರ್ದೇಶಿಸುತ್ತೇನೆ ಎಂದು ಚೌಹಾಣ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ರೈತರ ಸರ್ವತೋಮುಖ ಅಭಿವೃದ್ಧಿ, ಕೃಷಿ ಉತ್ಪನ್ನಗಳ ಪಾರದರ್ಶಕ ಮೌಲ್ಯಮಾಪನ ಮತ್ತು ಕೃಷಿಕರ ಆದಾಯ ವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ.ಆ ನಿಟ್ಟಿನಲ್ಲಿ ಸೂಕ್ತ ಕ್ರಮಗಳು ಜಾರಿಯಾಗಲಿವೆ ಎಂದು ಸಚಿವರಿಬ್ಬರು ಹೇಳಿದರು.
ಸಭೆಯಲ್ಲಿ ರೈತ ಮುಖಂಡರು, ತಾವು ಎದುರಿಸುತ್ತಿರುವ ಸವಾಲು, ಸಮಸ್ಯೆಗಳನ್ನು ಸಚಿವರಿಗೆ ತಿಳಿಸಿದೆ. ಬೆಳೆಗಾರ ಅಹವಾಲುಗಳನ್ನು ಸಚಿವರು ಗಂಭೀರವಾಗಿ ಮತ್ತು ಅತ್ಯಂತ ಸಹಾನುಭೂತಿಯಿಂದ ಆಲಿಸಿದರು. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ರೈತರ ಶೋಷಣೆಯನ್ನು ಸಹಿಸುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಸಕ್ಕರೆ ಇಳುವರಿ ಅಂಕಿ-ಅಂಶಗಳಲ್ಲಿನ ವ್ಯತ್ಯಾಸ, ತೂಕ ಕಡಿತ ಮತ್ತು ಸಕ್ಕರೆ ಕಾರ್ಖಾನೆಗಳು ನೈಜ ಇಳುವರಿಯನ್ನು ಮರೆಮಾಚುವ ಆರೋಪ ಸೇರಿದಂತೆ ರೈತರು ಪ್ರಸ್ತಾಪಿಸಿದ ವಿಷಯಗಳು ಕುರಿತಂತೆ ಗಂಭೀರ ಚರ್ಚೆ ನಡೆಸಲಾಯಿತು.
ಇನ್ನೂ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ತಾತ್ಕಾಲಿಕ ಅಥವಾ ಅಪೂರ್ಣ ಪರಿಹಾರ ಹುಡುಕುವ ಬದಲು ಭವಿಷ್ಯದಲ್ಲಿಯೂ ಯಾವುದೇ ಕಾರ್ಖಾನೆಗಳು ರೈತರನ್ನು ವಂಚಿಸದಂತೆ ತಡೆಯಲು ಪಾರದರ್ಶಕ ಮತ್ತು ವೈಜ್ಞಾನಿಕ ವ್ಯವಸ್ಥೆ ರೂಪಿಸಲು ಕ್ರಮವಹಿಸಲಾಗುವುದು ಎಂದರು.
ನೂತನ ಜಂಟಿ ಸಮಿತಿಯಲ್ಲಿ ಯಾರೆಲ್ಲ ಇರ್ತಾರೆ?
ಈ ಜಂಟಿ ಸಮಿತಿಯಲ್ಲಿ ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳಾದ ಕರ್ನಾಟಕ, ಮಹಾರಾಷ್ಟ್ರದ ಪ್ರತಿನಿಧಿಗಳು, ರೈತ ಸಂಘಟನೆಗಳ ಅಧಿಕೃತ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು, ವಿಷಯ ತಜ್ಞರು (ವೈಜ್ಞಾನಿಕ ತಜ್ಞರು) ಇರಲಿದ್ದಾರೆ ಎಂದು ಸಚಿವರು ಮಾಹಿತಿ ಕೊಟ್ಟರು.
ಈ ಸಮಿತಿ ಕಬ್ಬು ಕಟಾವಿನ ಸಮಯ, ಸಕ್ಕರೆ ಇಳುವರಿ ಅಳೆಯುವ ವೈಜ್ಞಾನಿಕ ಮಾನದಂಡಗಳು, ಆಧುನಿಕ ಪ್ರಯೋಗಾಲಯ ಪರೀಕ್ಷಾ ವ್ಯವಸ್ಥೆ ಮತ್ತು ತೂಕದ ನಿಖರತೆ ಸೇರಿದಂತೆ ಪ್ರತಿಯೊಂದು ತಾಂತ್ರಿಕ ಅಂಶವನ್ನು ಕೂಲಂಕಷವಾಗಿ ಪರಿಶೀಲಿಸಲಿದ್ದು, ನಿಗದಿತ ಸಮಯದೊಳಗೆ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಗಳ ಸಹಕಾರವೂ ಅಗತ್ಯ
ರೈತರ ಕಲ್ಯಾಣಕ್ಕಾಗಿ ಕೇಂದ್ರ ಕೈಗೊಳ್ಳಲಿರುವ ಕ್ರಮಗಳಿಗೆ ಆಯಾ ರಾಜ್ಯ ಸರ್ಕಾರಗಳ ಸಹಕಾರವೂ ಅಗತ್ಯ ಎಂದು ಸಚಿವರು ಬೆಂಬಲ ಕೋರಿದರು. ಜೊತೆಗೆ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ವಾಸ್ತವ ಸಮಸ್ಯೆಗಳು, ಸಕ್ಕರೆ ಕಾರ್ಖಾನೆಗಳು ವರದಿ ಮಾಡುವ ಸಕ್ಕರೆ ಇಳುವರಿ ಅಂಕಿ-ಅಂಶಗಳಲ್ಲಿನ ವ್ಯತ್ಯಾಸ, ತೂಕ, ತ್ಯಾಜ್ಯ ನಿರ್ವಹಣೆ, ಪ್ರಯೋಗಾಲಯ ಪರೀಕ್ಷೆ ಹಾಗೂ ಬೆಳೆ ವಿಮೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ರಚನಾತ್ಮಕ ಚರ್ಚೆ ನಡೆಸಲಾಯಿತು.
FRP-SAP, ಎಥೆನಾಲ್ ವಿಸ್ತೃತ ಚರ್ಚೆ
ಕಬ್ಬಿನ FRP ನಿರ್ಧರಿಸುವ ವೈಜ್ಞಾನಿಕ ಪ್ರಕ್ರಿಯೆ ಹಾಗೂ ವೆಚ್ಚದ ಮೌಲ್ಯಮಾಪನಕ್ಕೆ ಬಳಸುವ ವಿಧಾನಗಳ ಬಗ್ಗೆ ವಿವರಿಸಿದರು. ಪ್ರತಿ ಹಂತದಲ್ಲೂ ಪಾರದರ್ಶಕತೆ ಹೆಜ್ಜೆಯಿರಿಸಿದ ಕೇಂದ್ರ ಸರ್ಕಾರ, ರೈತರು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ತಿಳಿಸಿಕೊಟ್ಟರು. ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿದ್ದಲ್ಲದೆ, FRP ಮತ್ತು SAP (ಕನಿಷ್ಠ ಮಾರಾಟ ದರ), ಎಥೆನಾಲ್ ಉತ್ಪಾದನೆ ಬಗ್ಗೆಯೂ ಮಹತ್ತರ ಚರ್ಚೆ ನಡೆಯಿತು.
ಸಣೆಯಲ್ಲಿ ಕೇಂದ್ರ ಕೃಷಿ ಸಚಿವಾಲಯ, ಆಹಾರ ಇಲಾಖೆ ಅಧಿಕಾರಿಗಳು, ರಾಜ್ಯ ಸಹಕಾರ ಸಚಿವ ಲಕ್ಷಣ ಸವದಿ, ಕೃಷಿ ಸಚಿವ ನರೇಂದ್ರ ಸ್ವಾಮಿ, ಸಕ್ಕರೆ ಮತ್ತು ಜವಳಿ ಖಾತೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ರೈತ ಮುಖಂಡರು ಮತ್ತು ಮಾಜಿ ಸಂಸದರಾದ ರಾಜು ಶೆಟ್ಟಿ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.


Click it and Unblock the Notifications
